ADVERTISEMENT

ಬೆಳೆ ರಕ್ಷಣೆಗೆ ಸೀರೆ, ಬೊಂಬೆಗಳ ಮೊರೆ!

ಕೃಷ್ಣಮೃಗ, ಜಿಂಕೆಗಳ ದಂಡಿನಿಂದ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜುಲೈ 2024, 5:59 IST
Last Updated 6 ಜುಲೈ 2024, 5:59 IST
ಬೀದರ್‌ ತಾಲ್ಲೂಕಿನ ಮರಕಲ್‌ ಶಿವಾರ ಗ್ರಾಮದಲ್ಲಿ ರೈತರು ಜಿಂಕೆಗಳಿಗೆ ಬೆಳೆ ಕಾಣದಂತೆ ಹೊಲದ ಅಂಚಿನಲ್ಲಿ ಸೀರೆಗಳನ್ನು ಸಾಲಾಗಿ ಕಟ್ಟಿರುವುದು
ಬೀದರ್‌ ತಾಲ್ಲೂಕಿನ ಮರಕಲ್‌ ಶಿವಾರ ಗ್ರಾಮದಲ್ಲಿ ರೈತರು ಜಿಂಕೆಗಳಿಗೆ ಬೆಳೆ ಕಾಣದಂತೆ ಹೊಲದ ಅಂಚಿನಲ್ಲಿ ಸೀರೆಗಳನ್ನು ಸಾಲಾಗಿ ಕಟ್ಟಿರುವುದು   

ಬೀದರ್‌: ಜಿಲ್ಲೆಯ ರೈತರು ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೀರೆ, ಬೊಂಬೆ ಹಾಗೂ ಖಾಲಿ ಬಾಟಲಿಗಳ ಮೊರೆ ಹೋಗಿದ್ದಾರೆ!

ಕೇಳಲು ಸ್ವಲ್ಪ ವಿಚಿತ್ರ ಅನಿಸಬಹುದು. ಆದರೆ, ಇದು ವಾಸ್ತವ. ಜಿಲ್ಲೆಯಾದ್ಯಂತ ಉತ್ತಮವಾಗಿ ಮುಂಗಾರು ಮಳೆಯಾಗಿದೆ. ಉದ್ದು, ಹೆಸರು, ಸೋಯಾ ಅವರೆ ಸೇರಿದಂತೆ ಇತರೆ ಬೆಳೆಗಳು ಮೊಳಕೆಯೊಡೆದು ಈಗಷ್ಟೇ ಬೆಳೆಯಲಾರಂಭಿಸಿವೆ.

ಆದರೆ, ಕೃಷ್ಣಮೃಗಗಳು, ಜಿಂಕೆಗಳ ದಂಡು ರೈತರ ಹೊಲಗಳಿಗೆ ಲಗ್ಗೆ ಇಡುತ್ತಿವೆ. ಬೆಳಗಾಗುವುದರೊಳಗೆ ಎಕರೆ ಗಟ್ಟಲೆ ಚಿಗುರು ತಿಂದು ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ವಿಷಯ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವುದು ರೈತರ ಗೋಳು. ಬೆಳೆಗಳನ್ನು ರಕ್ಷಿಸಿಕೊಳ್ಳಲು ಈಗ ರೈತರೇ ಉಪಾಯ ಕಂಡುಕೊಂಡಿದ್ದಾರೆ.

ADVERTISEMENT

ಬೆಳೆಗಳು ಕಾಣದಂತೆ ಹೊಲದ ಸುತ್ತಲೂ ರಕ್ಷಾ ಕವಚದಂತೆ ಸೀರೆಗಳನ್ನು ಕಟ್ಟುತ್ತಿದ್ದಾರೆ. ಕಡಿಮೆ ಹೊಲವಿದ್ದವರೂ ಮನೆಯಲ್ಲಿರುವ ಹಳೆಯ ಸೀರೆ, ಬಟ್ಟೆಗಳನ್ನು ಉಪಯೋಗಿಸುತ್ತಿದ್ದಾರೆ. ಹಣವಿದ್ದವರು ಕಡಿಮೆ ಬೆಲೆಯ ಸೀರೆಗಳನ್ನು ಬಂಡಲ್‌ಗಟ್ಟಲೇ ಖರೀದಿಸುತ್ತಿದ್ದಾರೆ. ಈ ಹಿಂದೆ ರೈತರು ಬಿತ್ತನೆ ಬೀಜ, ಕೀಟನಾಶಕಕ್ಕಷ್ಟೇ ಹಣ ಖರ್ಚು ಮಾಡುತ್ತಿದ್ದರು. ಈಗ ಸೀರೆಗೂ ಹಣ ವ್ಯಯಿಸಬೇಕಾಗಿದೆ. ಇನ್ನೂ ಕೆಲ ರೈತರು ಹೊಲದ ನಡುವೆ ಕಟ್ಟಿಗೆಗಳನ್ನು ನೆಟ್ಟಿ, ಅದಕ್ಕೆ ಬೊಂಬೆಗಳನ್ನು ಜೋತು ಹಾಕಿದ್ದಾರೆ.

ಮತ್ತೆ ಕೆಲವರು ಖಾಲಿ ಬಾಟಲಿಗಳನ್ನು ಕಟ್ಟಿದ್ದಾರೆ. ಗಾಳಿಗೆ ಬಾಟಲಿಗಳು ಪರಸ್ಪರ ತಾಕಿಕೊಂಡು ಶಬ್ದ ಹೊರಹೊಮ್ಮುತ್ತದೆ. ಬಾಟಲಿಗಳಿಂದ ಬೆಳಕಿನ ಕಿರಣಗಳು ಬೇರೆ ಬೇರೆ ಕೋನಗಳಲ್ಲಿ ಮೂಡುವುದರಿಂದ ಅದಕ್ಕೆ ಹೆದರಿ ಜಾನುವಾರುಗಳು ಹೊಲಕ್ಕೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇದು ತಾತ್ಕಾಲಿಕ ಪರಿಹಾರ. ಅರಣ್ಯ ಇಲಾಖೆಯವರು ಶಾಶ್ವತ ಪರಿಹಾರ ಒದಗಿಸುತ್ತಿಲ್ಲ ಎನ್ನುವುದು ರೈತರ ಬೇಸರ.

ಬೀದರ್‌ ತಾಲ್ಲೂಕಿನ ಜನವಾಡ, ಮನ್ನಳ್ಳಿ, ಅಲಿಯಂಬರ್‌, ಮರಕಲ್‌, ಔರಾದ್‌ ತಾಲ್ಲೂಕಿನ ಚಟ್ನಾಳ್‌, ಕಮಲನಗರ ತಾಲ್ಲೂಕಿನ ಸೋನಾಳ, ಭಾಲ್ಕಿ ತಾಲ್ಲೂಕಿನ ಹೊನ್ನಿಕೇರಿ, ಅತಿವಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಸಂಖ್ಯೆಯಲ್ಲಿ ಕೃಷ್ಣಮೃಗಗಳು, ಜಿಂಕೆಗಳು, ಕಾಡು ಹಂದಿಗಳು, ಮಂಗಗಳು ನೆಲೆಸಿದ್ದು, ಬೆಳೆಗಳು ಚಿಗುರಲಾರಂಭಿಸಿದಂತೆ ಲಗ್ಗೆ ಇಡುತ್ತವೆ. ಒಂದು ಅಂದಾಜಿನ ಪ್ರಕಾರ, ಬೀದರ್‌ ಜಿಲ್ಲೆಯ ವಿವಿಧೆಡೆ 20 ಸಾವಿರಕ್ಕೂ ಅಧಿಕ ಕೃಷ್ಣಮೃಗಗಳು, ಜಿಂಕೆಗಳಿವೆ.

ಕಮಲನಗರ ತಾಲ್ಲೂಕಿನ ಸೋನಾಳ ಗ್ರಾಮದ ಹೊಲವೊಂದರಲ್ಲಿ ಬೀಡು ಬಿಟ್ಟಿರುವ ಕೃಷ್ಣಮೃಗ ಜಿಂಕೆಗಳು

ಬೆಳೆಗಳ ರಕ್ಷಣೆಗೆ ನಾವು ಮೂರು ಜನ ಸಹೋದರರು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಎಚ್ಚರ ತಪ್ಪಿದರೆ ಸಂಪೂರ್ಣ ಬೆಳೆ ತಿಂದು ಬಿಡುತ್ತವೆ.

–ನರಸಿಂಗ್‌ ರಾವ್‌ ರೈತ ಮನ್ನಳ್ಳಿ ಗ್ರಾಮ

ಜಿಂಕೆ ಕೃಷ್ಣಮೃಗಗಳ ಕಾಟಕ್ಕೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

–ಗಣಪತಿ ರೈತ ಸೋನಾಳ ಗ್ರಾಮ

ಹೋದ ವರ್ಷ ಬರಗಾಲದಿಂದ ತೊಂದರೆಗೆ ಒಳಗಾಗಿದ್ದೇವು. ಈ ಸಲ ಉತ್ತಮ ಬೆಳೆ ಬಂದಿದೆ. ಆದರೆ ಜಿಂಕೆಗಳು ಲಗ್ಗೆ ಇಟ್ಟು ಹಾಳು ಮಾಡುತ್ತಿವೆ.

–ವೀರಶೆಟ್ಟಿ ರೈತ ಮರಕಲ್‌ ಗ್ರಾಮ

ಈ ವಿಷಯ ಗಮನಕ್ಕೆ ಬಂದಿದ್ದು ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲಾಗುವುದು. ಸಬ್ಸಿಡಿಯಲ್ಲಿ ಸೋಲಾರ್‌ ಫೆನ್ಸಿಂಗ್‌ ಅಳವಡಿಕೆಗೆ ಪ್ರೋತ್ಸಾಹಿಸಲಾಗುವುದು.

–ವಾನತಿ ಎಮ್‌.ಎಮ್‌. ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.