ADVERTISEMENT

ಬೀದರ್: ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ನವೆಂಬರ್ 2023, 4:47 IST
Last Updated 22 ನವೆಂಬರ್ 2023, 4:47 IST
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ರೈತ ಶರಣಪ್ಪ ಆಲೂರೆ ಅವರ ತೊಗರಿ ಬೆಳೆ ಒಣಗಿ ಹಾಳಾಗಿ ಹೋಗಿರುವುದು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ರೈತ ಶರಣಪ್ಪ ಆಲೂರೆ ಅವರ ತೊಗರಿ ಬೆಳೆ ಒಣಗಿ ಹಾಳಾಗಿ ಹೋಗಿರುವುದು   

ಬೀದರ್‌: ರಾಜ್ಯ ಸರ್ಕಾರವು ಬೀದರ್‌ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಮಳೆ ಅಭಾವದಿಂದ ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ರೈತರು ಈಗ ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ.

ಈಗಾಗಲೇ ಕೃಷಿ ಇಲಾಖೆಯು ‘ಫ್ರೂಟ್ಸ್‌’ ಸಾಫ್ಟ್‌ವೇರ್‌ನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರ ಮಾಹಿತಿ ದಾಖಲಿಸುವ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಬಸವಕಲ್ಯಾಣ, ಭಾಲ್ಕಿ ಹಾಗೂ ಹುಲಸೂರ ಮಾತ್ರ ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಇದರಿಂದಾಗಿ ಕಡಿಮೆ ರೈತರ ಮಾಹಿತಿ ದಾಖಲಿಸಬೇಕಿತ್ತು. ಈಗ ಎಲ್ಲಾ ಎಂಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದರಿಂದ ಹೆಚ್ಚಿನ ರೈತರ ಮಾಹಿತಿ ದಾಖಲಿಸಬೇಕಿರುವುದರಿಂದ ಇದಕ್ಕೆ ಕೆಲ ಸಮಯ ತಗುಲಲಿದೆ.

‘ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದರು. ಮಳೆ ಕೊರತೆಯಿಂದ ಬೆಳೆ ಹಾಳಾಗಿದೆ. ಅವರಿಗೆ ಸಕಾಲಕ್ಕೆ ಪರಿಹಾರ ಕೊಟ್ಟರೆ ಉತ್ತಮ. ವಿಳಂಬ ಮಾಡಿ ಪರಿಹಾರ ಕೊಟ್ಟರೆ ಪ್ರಯೋಜನವಾಗುವುದಿಲ್ಲ. ಹಿಂದೆ ಅತ್ಯಲ್ಪ ಪರಿಹಾರ ಕೊಟ್ಟು ಸರ್ಕಾರಗಳು ಕೈತೊಳೆದುಕೊಂಡಿದ್ದವು. ಈಗ ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ಕೊಡಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ADVERTISEMENT

‘ಈಗಾಗಲೇ ಬರ ಅಧ್ಯಯನ ತಂಡಗಳು ಭೇಟಿ ನೀಡಿ ಹೋಗಿವೆ. ರಾಜ್ಯ ಸರ್ಕಾರದಿಂದಲೂ ಅಗತ್ಯ ಮಾಹಿತಿ ಸಲ್ಲಿಕೆಯಾಗಿದೆ. ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡಬಾರದು. ತಕ್ಷಣ ಪರಿಹಾರ ಕೊಟ್ಟರೆ ಸಾಲ ಪಡೆದ ರೈತರು ಹಿಂತಿರುಗಿಸಲು ಸಹಾಯವಾಗುತ್ತದೆ. ಅವರ ಕುಟುಂಬ ನಿರ್ವಹಣೆಗೂ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು’ ಎಂದು ರೈತ ಮುಖಂಡ ಬಸವರಾಜ ಒತ್ತಾಯಿಸಿದ್ದಾರೆ.

ಭಾಲ್ಕಿಯಲ್ಲಿ ಹೆಚ್ಚು ಹಾನಿ:

ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದೆ. ಅದರ ಪ್ರಕಾರ 3,95,520 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆ ಒಳಗೊಂಡಿದೆ. ಇದರಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು ಭಾಲ್ಕಿ ತಾಲ್ಲೂಕಿನಲ್ಲಿ. 90,712 ಹೆಕ್ಟೇರ್‌ ಪ್ರದೇಶ ಬೆಳೆ ಹಾಳಾಗಿದೆ. ಎರಡನೇ ಸ್ಥಾನದಲ್ಲಿ ಬಸವಕಲ್ಯಾಣ ಇದೆ. ಅಲ್ಲಿ 72,966 ಹೆಕ್ಟೇರ್‌ ಬೆಳೆ ನಾಶವಾಗಿದೆ. ಔರಾದ್‌ನಲ್ಲಿ 69,289 ಹೆಕ್ಟೇರ್‌ ಹಾಳಾಗಿದ್ದು, ಮೂರನೇ ಸ್ಥಾನದಲ್ಲಿದೆ. ಹುಲಸೂರಿನಲ್ಲಿ ಅತಿ ಕಡಿಮೆ ಬೆಳೆ ಹಾನಿಯಾಗಿದೆ. ಆ ತಾಲ್ಲೂಕಿನಲ್ಲಿ 18,680ಹೆಕ್ಟೇರ್‌ ಬೆಳೆ ಹಾಳಾದ ಮಾಹಿತಿ ಇದೆ.

ಈಗ ಹೇಗಿದೆ ಪರಿಸ್ಥಿತಿ:

ಸಕಾಲಕ್ಕೆ ಮಳೆಯಾಗದ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆ ಹಾಳಾಗಿದೆ. ಆದರೆ, ಸದ್ಯಕ್ಕೆ ಕುಡಿಯುವ ನೀರು, ಮೇವಿಗೆ ಅಂತಹ ಹೇಳಿಕೊಳ್ಳುವಂತಹ ಸಮಸ್ಯೆ ಎಲ್ಲೂ ಉಂಟಾಗಿಲ್ಲ. ಕುಡಿಯುವ ನೀರು, ಬರಕ್ಕೆಂದೆ ಜಿಲ್ಲಾಡಳಿತದ ಬಳಿ ₹17 ಕೋಟಿ ಹಣವಿದೆ. ಒಂದುವೇಳೆ ಬರುವ ದಿನಗಳಲ್ಲಿ ಎಲ್ಲಾದರೂ ನೀರು, ಮೇವಿಗೆ ಸಮಸ್ಯೆಯಾದರೆ ಪರಿಹಾರ ಕಂಡುಕೊಳ್ಳಲು ಅನುದಾನದ ಕೊರತೆ ಇಲ್ಲ.

‘ಬೆಳೆ ನಷ್ಟದ ಮಾಹಿತಿ ಸಂಗ್ರಹ’

‘ಬೀದರ್‌ ಜಿಲ್ಲೆಯಲ್ಲಿ ಬೆಳೆ ನಷ್ಟ ಉಂಟಾಗಿರುವ ರೈತರ ಮಾಹಿತಿಯನ್ನು ‘ಫ್ರೂಟ್ಸ್‌’ ಸಾಫ್ಟ್‌ವೇರ್‌ನಲ್ಲಿ ದಾಖಲಿಸುವ ಕೆಲಸ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾದ ನಂತರ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ತಿಳಿಸಿದ್ದಾರೆ.

‘ತಕ್ಷಣ ಪರಿಹಾರ ಕೊಡಬೇಕು’

‘ಸರ್ಕಾರ ಬರ ಘೋಷಿಸಿ ಸುಮ್ಮನೆ ಕುಳಿತಿದೆ. ಮುಂಗಾರು ಬೆಳೆ ಹಾಳಾಗಿರುದರಿಂದ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈಗ ಪರಿಹಾರ ಕೊಟ್ಟರೆ ಹಿಂಗಾರಿಗೆ ಬೀಜ ಖರೀದಿ ಮಾಡಿ ಬಿತ್ತನೆಗೆ ಸಹಾಯವಾಗುತ್ತದೆ. ರೈತರ ಪರಿಸ್ಥಿತಿ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸದ್ಯಕ್ಕೆ ನೀರು ಮೇವಿಗೆ ಕೊರತೆ ಇಲ್ಲ. ಆದರೆ ಬರುವ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದು. ಅದಕ್ಕೆ ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳಬೇಕು’ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಒತ್ತಾಯಿಸಿದ್ದಾರೆ.

‘ಕುಡಿಯುವ ನೀರು ಮೇವಿಗಿಲ್ಲ ಸಮಸ್ಯೆ’

‘ಕುಡಿಯುವ ನೀರು ಮೇವಿಗೆ ನಮ್ಮ ಖಾತೆಯಲ್ಲಿ ₹17 ಕೋಟಿ ಹಣ ಇದೆ. ಬೆಳೆ ಪರಿಹಾರ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಬೇಕಿದೆ. ಸದ್ಯ ಜಿಲ್ಲೆಯಲ್ಲಿ ಕುಡಿಯುವ ನೀರು ಮೇವಿಗೆ ಯಾವುದೇ ಸಮಸ್ಯೆ ಇಲ್ಲ. ಮಾರ್ಚ್‌ ವರೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಳೆ ಅಭಾವದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆ ಹಾನಿ ತಾಲ್ಲೂಕುವಾರು ವಿವರ (ಕೃಷಿ ಮತ್ತು ತೋಟಗಾರಿಕೆ ಒಳಗೊಂಡಂತೆ)

ತಾಲ್ಲೂಕು ಹೆಸರು; ಹಾನಿಯಾದ ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಬೀದರ್‌; 42670

ಔರಾದ್‌;69289

ಕಮಲನಗರ; 42543

ಹುಮನಾಬಾದ್‌; 32061

ಚಿಟಗುಪ್ಪ; 26599

ಭಾಲ್ಕಿ; 90712

ಹುಲಸೂರ; 18680

ಬಸವಕಲ್ಯಾಣ; 72966

ಒಟ್ಟು; 395520 (ಮೂಲ: ಕೃಷಿ ಇಲಾಖೆ ಬೀದರ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.