ಹುಮನಾಬಾದ್: ‘ವೀರಭದ್ರೇಶ್ವರ ಮಹಿಮೆ ಅಪಾರವಾಗಿದ್ದು, ಭಕ್ತಿ, ಶ್ರದ್ಧೆ ಇಟ್ಟರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ’ ಎಂದು ತೋಡಳ ಗುರುಕುಲ ಆಶ್ರಮದ ರಾಜೇಶ್ವರ ಶಿವಾಚಾರ್ಯರು ತಿಳಿಸಿದರು.
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ವೀರಭದ್ರೇಶ್ವರ ರಥೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಚಾಂಗಲೇರಾ ಸುಕ್ಷೇತ್ರವಾಗಿ ಬೆಳೆಯುತ್ತಿದೆ. ದೇವಸ್ಥಾನದಲ್ಲಿ ವೇದಪಾಠ ಶಾಲೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಈ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹೊಸ ಬದಲಾವಣೆ ತಂದಿದ್ದೇನೆ. ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀಗಂಧ ಅಥವಾ ಸಾಗುವಾನಿ ಕಟ್ಟಿಗೆಯಿಂದ ರಥ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಅಗತ್ಯ ಧನ ಸಹಾಯ ಮಾಡುತ್ತೇನೆ’ ಎಂದು ತಿಳಿಸಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ‘ಚಾಂಗಲೇರಾ ಗ್ರಾಮದ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗ್ರಾಮವು, ನನಗೆ ರಾಜಕೀಯ ಜನ್ಮ ನೀಡಿದ್ದು, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ’ ತಿಳಿಸಿದರು.
ಹುಮನಾಬಾದ್ ಹಿರೇಮಠ ಸಂಸ್ಥಾನ ಪೀಠಾಧಿಪತಿ ರೇಣುಕಾ ಗಂಗಾಧರ ಶಿವಾಚಾರ್ಯ, ಸೊಂತ ನರನಾಳದ ಶಿವಕುಮಾರ್ ಶಿವಾಚಾರ್ಯ, ತೆಲಂಗಾಣದ ಬರ್ದಿಪುರ ಆಶ್ರಮದ ದತ್ತಗಿರಿ ಮಹಾರಾಜ್, ಹವಾ ಮಲ್ಲಿನಾಥ ಮಹಾರಾಜ, ಚಾಂಗಲೇರಾ ಹಿರೇಮಠದ ಗುರುಲಿಂಗ ಶಿವಾಚಾರ್ಯ, ಮರುಳಾರಾಧ್ಯ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ, ಭೀಮರಾವ ಪಾಟೀಲ, ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ ಪಾಟೀಲ, ತಹಶೀಲ್ದಾರ್ ಮಂಜುನಾಥ್ ಪಂಚಾಳ, ದೇವಸ್ಥಾನದ ಇಒ ಅನಂತರಾವ ಕುಲಕರ್ಣಿ, ಕಾರ್ಯದರ್ಶಿ ಸಂಜುರಾವ ದೇಸಾಯಿ, ವಿಜಕುಮಾರ್ ವಾಲಿ, ರಾಜಕುಮಾರ ಪೂಜಾರಿ, ವೀರಯ್ಯಾಸ್ವಾಮಿ ಪೂಜಾರಿ, ಶಿವಕುಮಾರ್ ಸ್ವಾಮಿ, ಬಂಬಳಗಿ, ಬಸವರಾಜ ಚಿಟನಳ್ಳಿ, ಮಂಜುನಾಥ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.