ADVERTISEMENT

ಸಂಸ್ಕಾರ, ಭಾವೈಕ್ಯ ಬೆಸೆಯುತ್ತಿರುವ ಕಲಿಕಾ ಹಬ್ಬ

ಚಂದ್ರಕಾಂತ ಮಸಾನಿ
Published 12 ಫೆಬ್ರುವರಿ 2023, 19:30 IST
Last Updated 12 ಫೆಬ್ರುವರಿ 2023, 19:30 IST
ಭಾಲ್ಕಿಯಲ್ಲಿ ಕಲಿಕಾ ಹಬ್ಬದಲ್ಲಿ ಪೇಪರ್‌ನಿಂದ ತಯಾರಿಸಿದ ಫ್ರಾಕ್‌ ತೊಟ್ಟು ಮಕ್ಕಳಲ್ಲಿ ಉತ್ಸಾಹ ತುಂಬಿದ ಶಿಕ್ಷಕಿ
ಭಾಲ್ಕಿಯಲ್ಲಿ ಕಲಿಕಾ ಹಬ್ಬದಲ್ಲಿ ಪೇಪರ್‌ನಿಂದ ತಯಾರಿಸಿದ ಫ್ರಾಕ್‌ ತೊಟ್ಟು ಮಕ್ಕಳಲ್ಲಿ ಉತ್ಸಾಹ ತುಂಬಿದ ಶಿಕ್ಷಕಿ   

ಬೀದರ್‌: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ಎಂದು ಘೋಷಿಸಿದ್ದು, ಇದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬ ಸಂಭ್ರಮದೊಂದಿಗೆ ಸಾಗಿದೆ.

ರಾಜ್ಯದ 4,103 ಸಮೂಹಗಳು ಹಾಗೂ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಕಲಿಕಾ ಹಬ್ಬ ಆಚರಿಸಲಾಗಿದೆ.

ಅನ್ವಯಿಕ ಶಿಕ್ಷಣ ಪ್ರಸಾರ, ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ. ಹಬ್ಬದಲ್ಲಿ ಕಲಿಕೆ ಮಕ್ಕಳಿಗೆ ಹೊರೆ ಹಾಗೂ ಒತ್ತಡ ಉಂಟು ಮಾಡುವುದಿಲ್ಲ. ಆನಂದಮಯ ಚಟುವಟಿಕೆಯ ರೂಪದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಸಿಕೊಂಡಿದ್ದ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ್ದವು. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತಾಯಿತು. ಹೀಗಾಗಿ ಕಲಿಕಾ ಚೇತರಿಕೆಗೆ ಯೋಜನೆ ರೂಪಿಸಲಾಗಿದೆ. ಹಿಂದಿನ ಎರಡು ವರ್ಷಗಳು, ಪ್ರಸ್ತುತ ವರ್ಷದ ಮಹತ್ವದ ಹಾಗೂ ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಾಗುತ್ತಿದೆ. ಹಬ್ಬದಲ್ಲಿ ಮಕ್ಕಳು ಹಿರಿಯರು, ಸ್ನೇಹಿತರು, ಸಹಪಾಟಿಗಳಿಂದ ಹೊಸ ವಿಚಾರಗಳನ್ನು ಅರಿತುಕೊಳ್ಳಲಿದ್ದಾರೆ.

‘ಕಲಿಕಾ ಹಬ್ಬ ಶೈಕ್ಷಣಿಕ ಅಂಶಗಳನ್ನೊಳಗೊಂಡಿದೆ. ಮಕ್ಕಳಲ್ಲಿ ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷಾ ಹೇಳುತ್ತಾರೆ.

‘ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ಈಗಾಗಲೇ ಧಾರವಾಡದಲ್ಲಿ ಮೂರು ದಿನಗಳ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ಕ್ಲಸ್ಟರ್‌ಗಳು ಹಾಗೂ ಶಾಲೆಗಳನ್ನು ಸಂಪರ್ಕಿಸಿ ತರಬೇತಿ ನೀಡಿದ್ದಾರೆ. ಕ್ಲಸ್ಟರ್ ಮಟ್ಟದಲ್ಲಿ ಈಗಾಗಲೇ ಕಲಿಕಾ ಹಬ್ಬ ನಡೆದಿವೆ. ಜಿಲ್ಲಾ ಮಟ್ಟದಲ್ಲೂ ಕಾರ್ಯಕ್ರಮ ನಡೆಯಲಿದೆ’ ಎಂದು ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಗೋಪಲರಾವ್‌ ಪಡವಲ್ಕರ್ ವಿವರಿಸುತ್ತಾರೆ.

* * *

ಅತಿಥಿ ಮತ್ತು ಆತಿಥೇಯ ಮಾದರಿ

ಜಿಲ್ಲಾ ಮಟ್ಟದಲ್ಲಿ ಅತಿಥಿ ಮತ್ತು ಆತಿಥೇಯ ಮಾದರಿಯಲ್ಲಿ ಕಲಿಕಾ ಹಬ್ಬ ನಡೆಯಲಿದೆ. ಇದು ಸಂಪೂರ್ಣ ಭಾರತ ಜ್ಞಾನ, ವಿಜ್ಞಾನ ಸಮಿತಿ ಕಲ್ಪನೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಸಮರ್ಥವಾಗಿ ಬಳಸಿಕೊಂಡಿದೆ.

ಜಿಲ್ಲಾ ಮಟ್ಟದ ಕಲಿಕಾ ಹಬ್ಬದ ಪೂರ್ವದಲ್ಲಿ ಪಾಲಕರು ಹಾಗೂ ಸಂಘ ಸಂಸ್ಥೆಗಳ ಸಭೆ ನಡೆಸಲಾಗುತ್ತಿದೆ. ಯೋಜನೆಯ ಸಂಪೂರ್ಣ ಮಾಹಿತಿ ನೀಡಲಾಗಿದೆ. ಒಂದು ತಾಲ್ಲೂಕಿನ ವಿದ್ಯಾರ್ಥಿಗಳು ಇನ್ನೊಂದು ತಾಲ್ಲೂಕು ಅಂದರೆ ಜಿಲ್ಲಾ ಮಟ್ಟದಲ್ಲಿ ಅದೇ ತರಗತಿಯ ವಿದ್ಯಾರ್ಥಿಯ ಮನೆಯಲ್ಲಿ ಮೂರು ದಿನ ವಾಸ ಮಾಡಿ ಹಲವು ರೀತಿಯಲ್ಲಿ ಅನುಭವ ಪಡೆದುಕೊಳ್ಳಲಿದ್ದಾರೆ.

‘ಸಂಸ್ಕೃತಿ, ಸಂಸ್ಕಾರ, ಭಾವೈಕ್ಯ ಬೆಳೆಸುವುದು, ಸೌಹಾರ್ದತೆ ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಜಾತಿ, ಧರ್ಮ ಬೇರೆ ಇದ್ದರೂ ನಾವೆಲ್ಲರೂ ಒಂದು ಹಾಗೂ ಹೊಸ ಸಂಬಂಧ ಗಟ್ಟಿಗೊಳಿಸಿಕೊಳ್ಳಬೇಕು ಎನ್ನುವ ಅರಿವು ಮೂಡಿಸಲಿದೆ. ಮಕ್ಕಳು ತಮ್ಮ ತಮ್ಮಲ್ಲೇ ಶಾಲೆ, ಪಾಠ ಪ್ರವಚನ ವಿನಿಯಮ ಮಾಡಿಕೊಳ್ಳಲಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಮಗು ಸ್ವಯಂ ಆಗಿ ಇನ್ನಷ್ಟು ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಶಿಕ್ಷಕ ಎಂ.ಎಸ್‌. ಮನೋಹರ.

‘ಮಕ್ಕಳ ತರಗತಿ, ವಯಸ್ಸು, ಲಿಂಗದ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ನಾಲ್ಕು ಗುಂಪುಗಳಲ್ಲಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕೊಠಡಿಗಳಲ್ಲಿ ತರಬೇತಿ ನೀಡಲಾಗುವುದು. ಮಕ್ಕಳು ಮೂರು ದಿನಗಳಲ್ಲಿ ಒಟ್ಟು 45 ಚಟುವಟಿಕೆಗಳನ್ನು ಕಲಿಯಲಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ ವಿವರಿಸುತ್ತಾರೆ.

ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬ ಮುಗಿದಿದೆ. ಅಲ್ಲಿ ಪಾಲಕರು ಮತ್ತು ಸಮುದಾಯವರು ಸೇರಿ 80 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಉತ್ಸಾಹ ತೋರಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಹಬ್ಬದಲ್ಲಿ ಪ್ರತಿ ತಾಲ್ಲೂಕಿನಿಂದ 30 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಫೆಬ್ರುವರಿ 15ರಿಂದ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಶುರುವಾಗಲಿದೆ. ಈಗಾಗಲೇ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.