ADVERTISEMENT

ಬೀದರ್‌ ಬಹಮನಿ ಕೋಟೆಯಲ್ಲಿ ಕ್ಯಾಂಟೀನ್‌ ಆರಂಭ: ಕೊನೆಗೂ ಕೂಡಿ ಬಂತು ಕಾಲ

ವಾರದೊಳಗೆ ಬೀದರ್‌ ಕೋಟೆಯಲ್ಲಿ ಕ್ಯಾಂಟೀನ್‌ ಆರಂಭ; ಪ್ರವಾಸಿಗರಿಗೆ ಅನುಕೂಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಜುಲೈ 2024, 5:48 IST
Last Updated 13 ಜುಲೈ 2024, 5:48 IST
ಬೀದರ್‌ ಬಹಮನಿ ಕೋಟೆ
ಬೀದರ್‌ ಬಹಮನಿ ಕೋಟೆ   

ಬೀದರ್‌: ನಗರದ ಬೀದರ್‌ ಬಹಮನಿ ಕೋಟೆಯಲ್ಲಿ ಕ್ಯಾಂಟೀನ್‌ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.

ಕ್ಯಾಂಟೀನ್‌ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಕರೆದ ಮೂರನೇ ಟೆಂಡರ್‌ ಅಂತಿಮಗೊಂಡಿದ್ದು, ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದವರು ಗುತ್ತಿಗೆ ಪಡೆದಿದ್ದಾರೆ.

ಒಂದು ವರ್ಷದ ಅವಧಿಗೆ ₹5.10 ಲಕ್ಷ ಮೊತ್ತಕ್ಕೆ ಶಾಹೀನ್‌ ಸಂಸ್ಥೆ ಟೆಂಡರ್‌ ತನ್ನದಾಗಿಸಿಕೊಂಡಿದೆ. ಕ್ಯಾಂಟೀನ್‌ ಆರಂಭಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇನ್ನೊಂದು ವಾರದೊಳಗೆ ಪ್ರಾರಂಭವಾಗಬಹುದು ಎಂದು ಪುರಾತತ್ವ ಸರ್ವೇಕ್ಷಣ ಇಲಾಖೆ ತಿಳಿಸಿದೆ.

ADVERTISEMENT

ಸುರ್ಯೋದಯದಿಂದ ಸೂರ್ಯಾಸ್ತದ ವರೆಗೆ ಕ್ಯಾಂಟೀನ್‌ ನಡೆಸಲು ಅವಕಾಶ ಇದೆ. ‘ಓವನ್‌’, ‘ಇಂಡಕ್ಷನ್‌’ ಮಾತ್ರ ಬಳಸಿ ಉಪಾಹಾರ, ಅಡುಗೆ ತಯಾರಿಸಲು ಅನುಮತಿ ಇದೆ. ಯಾವುದೇ ಕಾರಣಕ್ಕೂ ಗ್ಯಾಸ್‌, ಕಟ್ಟಿಗೆ ಒಲೆ ಬಳಸುವಂತಿಲ್ಲ. ಪ್ಯಾಕ್ಡ್‌ ಫುಡ್‌, ಬೇಕರಿ ತಿನಿಸು, ಕಾಫಿ, ಟೀ, ತಂಪು ಪಾನೀಯ ಕೊಡಬಹುದು. ಅಲ್ಕೋಹಾಲ್‌ ನೀಡುವಂತಿಲ್ಲ ಎನ್ನುವುದು ಷರತ್ತಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ರೀತಿಯ ಕಠಿಣ ನಿಯಮಗಳಿಂದಾಗಿಯೇ ಮೊದಲ ಎರಡು ಸಲ ಕರೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾವುದೇ ಹೋಟೆಲ್‌ನವರು ಭಾಗವಹಿಸಿರಲಿಲ್ಲ. ಮೂರನೇ ಟೆಂಡರ್‌ನಲ್ಲಿ ಶಾಹೀನ್‌ನವರು ಭಾಗವಹಿಸಿ, ಕ್ಯಾಂಟೀನ್‌ ನಡೆಸುವುದಕ್ಕೆ ಮುಂದೆ ಬಂದಿದ್ದಾರೆ. ಶಾಹೀನ್‌ ಶಿಕ್ಷಣ ಸಂಸ್ಥೆಗಳಲ್ಲಿ ಅಚ್ಚುಕಟ್ಟಾಗಿ ಕ್ಯಾಂಟೀನ್‌ಗಳನ್ನು ನಡೆಸಲಾಗುತ್ತಿದ್ದು, ಅದರ ಅನುಭವದ ಆಧಾರದ ಮೇಲೆ ಕೋಟೆಯಲ್ಲೂ ನಡೆಸಲು ಆಸಕ್ತಿ ತೋರಿದ್ದಾರೆ.

ಮೂರು ವರ್ಷಗಳಿಂದ ಕೋಟೆಯಲ್ಲಿ ಕ್ಯಾಂಟೀನ್‌ ಇಲ್ಲದ ಕಾರಣ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಬೀದರ್‌ ಕೋಟೆ 5.5 ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದೆ. 20ಕ್ಕೂ ಹೆಚ್ಚು ಪ್ರಮುಖ ಸ್ಮಾರಕಗಳಿವೆ. ಆದರೆ, ಉಪಾಹಾರ, ಊಟ, ತಂಪು ಪಾನೀಯ, ಚಹಾ, ಬಿಸ್ಕತ್‌, ಅಷ್ಟೇಕೆ ಕುಡಿಯಲು ನೀರು ಬೇಕೆಂದರೂ ಕೋಟೆಯ ಹೊರಗೆ ಬಂದು ಖರೀದಿಸುವ ಪರಿಸ್ಥಿತಿ ಇದೆ. ಬೀದರ್‌ ಗಡಿ ಭಾಗದಲ್ಲಿ ಇರುವುದರಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಕೋಟೆಗೆ ಭೇಟಿ ಕೊಡುತ್ತಾರೆ. ಅದರಲ್ಲೂ ವಾರಾಂತ್ಯಕ್ಕೆ ಹೆಚ್ಚಿನ ಜನರು ಸೇರುತ್ತಾರೆ. ಆದರೆ, ಕನಿಷ್ಠ ವ್ಯವಸ್ಥೆಯೂ ಕೋಟೆಯೊಳಗೆ ಇರದ ಕಾರಣ ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಕೋಟೆಯ ಮಧ್ಯ ಭಾಗದಲ್ಲಿ ಕ್ಯಾಂಟೀನ್‌ ನಡೆಸಲು ಅವಕಾಶ ಕಲ್ಪಿಸಿರುವುದರಿಂದ ಬರುವ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.

‘ನಿಯಮ ಸಡಿಲವಾಗಿರಲಿ’

‘ಬೀದರ್‌ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ಸಂಗತಿಗಳಿವೆ. ಆದರೆ ಬೆಳೆಸುವ ಇಚ್ಛಾಶಕ್ತಿ ಇಲ್ಲ. ಎಲ್ಲ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಕೋಟೆ ಕಾಲ್ನಡಿಗೆಯಲ್ಲಿಯೇ ನೋಡಬೇಕು. ಬ್ಯಾಟರಿಚಾಲಿತ ವಾಹನಗಳಿಗೂ ವ್ಯವಸ್ಥೆ ಇಲ್ಲ. ಕೋಟೆಯಲ್ಲಿ ಕ್ಯಾಂಟೀನ್‌ ನಡೆಸಲು ನೂರೆಂಟು ಷರತ್ತು ವಿಧಿಸಿದ್ದಾರೆ. ಹೀಗಾಗಿಯೇ ಮೂರು ವರ್ಷಗಳ ನಂತರ ಕ್ಯಾಂಟೀನ್‌ ಆರಂಭವಾಗುತ್ತಿದೆ’ ಎಂದು ಸ್ಥಳೀಯರಾದ ರಾಜೇಶ್‌ ವಿಕ್ರಮ್‌ ಅಭಿಪ್ರಾಯ ಪಟ್ಟಿದ್ದಾರೆ.

ಧ್ವನಿ–ಬೆಳಕಿಗೂ ಗ್ರಹಣ

ಜಿಲ್ಲಾಡಳಿತವು ಬೀದರ್‌ ಕೋಟೆಯಲ್ಲಿ ಧ್ವನಿ–ಬೆಳಕಿನ ಕಾರ್ಯಕ್ರಮ ಆರಂಭಿಸುವುದಾಗಿ ವರ್ಷದ ಹಿಂದೆ ತಿಳಿಸಿತ್ತು. ಇದುವರೆಗೆ ಆ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ರೀತಿಯ ಕೆಲಸಗಳೇ ನಡೆದಿಲ್ಲ. ಬಸವಕಲ್ಯಾಣ ಕೋಟೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮ ಆರಂಭಗೊಂಡಿರುವುದರಿಂದ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸವಕಲ್ಯಾಣ ಕೋಟೆಗೆ ಹೋಲಿಸಿದರೆ ಬೀದರ್‌ ಕೋಟೆ ಬಹಳ ದೊಡ್ಡದು. ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುತ್ತಾರೆ.

ಕ್ಯಾಂಟೀನ್‌ ಆರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಕ್ಯಾಂಟೀನ್‌ ಶುರುವಾಗಬಹುದು.
ಅನಿರುದ್ಧ್‌ ದೇಸಾಯಿ, ಸಹಾಯಕ ಸಂರಕ್ಷಣಾಧಿಕಾರಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಬೀದರ್‌ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.