ADVERTISEMENT

ಬಸವಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾಧಿವೇಶನ: ಬಸವಲಿಂಗ ಪಟ್ಟದ್ದೇವರು

ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ; ಬಸವಲಿಂಗ ಪಟ್ಟದ್ದೇವರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 15:25 IST
Last Updated 26 ಜುಲೈ 2022, 15:25 IST
ಬೀದರ್‌ನ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿದರು
ಬೀದರ್‌ನ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿದರು   

ಬೀದರ್: ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬಸವಕಲ್ಯಾಣದಲ್ಲಿ ನವೆಂಬರ್ 25, 26 ಹಾಗೂ 27 ರಂದು ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

900 ವರ್ಷಗಳ ಹಿಂದೆ ಬಸವಣ್ಣನವರು ನೀಡಿದ ಲಿಂಗಾಯತ ಧರ್ಮದ ಬಗ್ಗೆ ಲಿಂಗಾಯತರಲ್ಲಿ ಜಾಗೃತಿ ಮೂಡಿಸುವುದೇ ಮಹಾ ಅಧಿವೇಶನದ ಉದ್ದೇಶವಾಗಿದೆ. ದೇಶದ ವಿವಿಧೆಡೆಯ ಲಿಂಗಾಯತರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧಿವೇಶನ ಲಿಂಗಾಯತರ ಸಂಘಟನೆಗೆ ವೇದಿಕೆಯಾಗಲಿದೆ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಮಹಾ ಅಧಿವೇಶನ ರಾಜಕೀಯೇತರವಾಗಿದೆ. ಸುಮಾರು ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಲಿಂಗಾಯತರು ತನು, ಮನ, ಧನದಿಂದ ಇದರ ಯಶಸ್ವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಇಡೀ ರಾಷ್ಟ್ರಕ್ಕೆ ಸಂದೇಶ ರವಾನೆ ಆಗಲಿರುವುದರಿಂದ ಮಹಾ ಅಧಿವೇಶನವನ್ನು ಎಲ್ಲರ ಸಹಕಾರದೊಂದಿಗೆ ಮಾದರಿಯಾಗಿ ಸಂಘಟಿಸಲಾಗುವುದು. ವಿವಿಧೆಡೆಯಿಂದ ಆಗಮಿಸುವ ಲಿಂಗಾಯತರಿಗೆ ಊಟ, ವಸತಿ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಲಿಂಗಾಯತರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವ ದಿಸೆಯಲ್ಲಿ ಹೋರಾಟ ನಡೆಸಲು ಹುಟ್ಟಿಕೊಂಡ ಸಂಸ್ಥೆಯಾಗಿದೆ. ಸಂಸ್ಥೆಯ ಮೊದಲ ಮಹಾ ಅಧಿವೇಶನ ಇತಿಹಾಸದಲ್ಲಿ ದಾಖಲಾಗಲಿದೆ. ಹೀಗಾಗಿ ಅಚ್ಚುಕಟ್ಟಾಗಿ ಆಯೋಜಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣದ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ್, ಯುವ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರಾಜಕುಮಾರ ಬಿರಾದಾರ ಗುನ್ನಳ್ಳಿ, ಭರತ ಶೆಟಕಾರ್, ಚಂದ್ರಕಾಂತ ಶೆಟಕಾರ್, ಮಡಿವಾಳಪ್ಪ ಗಂಗಶೆಟ್ಟಿ, ಸಿ.ಎಸ್. ಪಾಟೀಲ, ಶಂಕರೆಪ್ಪ ಹೊನ್ನಾ, ಜೈರಾಜ್ ಖಂಡ್ರೆ, ಉಷಾ ಮಿರ್ಷೆ, ಸುವರ್ಣಾ ಧನ್ನೂರ, ನಿರ್ಮಲಾ ಮಸೂದಿ ಇದ್ದರು.

ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಸ್ವಾಗತಿಸಿದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.