ADVERTISEMENT

ಡಿಸೆಂಬರ್‌ 15ರಿಂದ ಬೀದರ್‌–ಬೆಂಗಳೂರು ನಡುವೆ ವಿಮಾನ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:19 IST
Last Updated 19 ನವೆಂಬರ್ 2024, 15:19 IST
ಬೀದರ್‌ ವಿಮಾನ ನಿಲ್ದಾಣ
–ಸಾಂದರ್ಭಿಕ ಚಿತ್ರ
ಬೀದರ್‌ ವಿಮಾನ ನಿಲ್ದಾಣ –ಸಾಂದರ್ಭಿಕ ಚಿತ್ರ   

ಬೀದರ್‌: ಬೀದರ್‌–ಬೆಂಗಳೂರು ನಡುವೆ ಡಿಸೆಂಬರ್‌ 15ರಿಂದ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ‘ಸ್ಟಾರ್‌ ಏರ್‌ಲೈನ್ಸ್‌’ ಸಿದ್ಧತೆ ನಡೆಸಿದೆ.

ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಬೀದರ್‌–ಬೆಂಗಳೂರು ನಡುವೆ ವಿಮಾನಯಾನ ಸೇವೆ ಆರಂಭಿಸಲು ಒಂದು ವರ್ಷದ ಅವಧಿಗೆ ₹13.48 ಕೋಟಿ ಅನುದಾನಕ್ಕೆ ಸಮ್ಮತಿ ಸೂಚಿಸಿದೆ. ಸಂಪುಟ ಸಭೆಯಲ್ಲೂ ಒಪ್ಪಿಗೆ ಸಿಕ್ಕಿತು.

ಇಲಾಖೆಯು ಏಕಮುಖ ಏಕ ಸಂಚಾರಕ್ಕೆ ₹32,450ರಂತೆ ವಾರ್ಷಿಕ ಒಟ್ಟು ₹1.18 ಕೋಟಿ ಮತ್ತು ಶೇ 2ರಷ್ಟು ಅಬಕಾರಿ ಸುಂಕ, ಶೇ 1ರಷ್ಟು ವ್ಯಾಟ್‌ ರಿಯಾಯಿತಿ ಭರಿಸುವುದಕ್ಕೂ ಅನುಮೋದನೆ ನೀಡಿತು. ಒಟ್ಟು ಮೊತ್ತದಲ್ಲಿ ಇಲಾಖೆಯು ಶೇ 30ರಷ್ಟು ಹಾಗೂ ಶೇ 70ರಷ್ಟು ಸಹಾಯ ಧನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಭರಿಸಲಾಗುತ್ತಿದೆ. ವಿಮಾನ ಸೇವೆ ಕಾರ್ಯಾಚರಣೆಗೆ ಕೆಎಸ್‌ಐಐಡಿಸಿ ನಿಗಮವು ‘ಘೋಡಾವಟ್‌ ಎಂಟರ್‌ಪ್ರೈಸೆಸ್‌ ಪ್ರೈವೇಟ್‌ ಲಿಮಿಟೆಡ್‌ನ ‘ಸ್ಟಾರ್‌ ಏರ್‌ಲೈನ್ಸ್‌’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ 1999ರ ಕಲಂ 4(ಜಿ) ಅಡಿ ವಿನಾಯಿತಿ ಕೂಡ ನೀಡಿತು. ಅದರ ಬೆನ್ನಲ್ಲೇ ಈ ಬೆಳೆವಣಿಗೆ ನಡೆದಿದೆ.

ADVERTISEMENT

‘ಸ್ಟಾರ್‌ ಏರ್‌ಲೈನ್ಸ್‌’ನ ಕಿರಣ್‌ ಎಸ್‌.ಟಿ. ಅವರು ವಿಮಾನ ಸೇವೆ ಆರಂಭಿಸುವ ಸಂಬಂಧ ಬೀದರ್‌ ವಾಯುಪಡೆ ತರಬೇತಿ ಕೇಂದ್ರದ ಅಧಿಕಾರಿ ಅರುಣ್‌ ಬೆಹೆಲ್‌ ಅವರಿಗೆ ಸೋಮವಾರ (ನ. 18) ಪತ್ರ ಬರೆದಿದ್ದಾರೆ. ಬೀದರ್‌ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಪುನಃ ಆರಂಭಿಸಲಾಗುವುದು. ಅಂದಾಜು ಡಿಸೆಂಬರ್‌ 15ರಿಂದ ಸೇವೆ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದೇವೆ. ಸದ್ಯ ಬೆಂಗಳೂರಿಗೆ ಸೇವೆ ಶುರುವಾಗಲಿದ್ದು, ಭವಿಷ್ಯದಲ್ಲಿ ಇತರೆ ಕಡೆಗಳಿಗೂ ಸೇವೆ ವಿಸ್ತರಿಸುವ ಯೋಜನೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಮಾನ ಸೇವೆ ಪ್ರಾರಂಭಿಸುವ ಪೂರ್ವದಲ್ಲಿ ನಮ್ಮ ತಂಡ ಬೀದರ್‌ ವಿಮಾನ ನಿಲ್ದಾಣಕ್ಕೆ ಭೇಟಿ ಕೊಡಲಿದೆ. ಸೇವೆ, ಭದ್ರತೆ, ವಿಮಾನ ಕಾರ್ಯಾಚರಣೆ, ಎಂಜಿನಿಯರಿಂಗ್‌ ವಿಭಾಗ ಪರಿಶೀಲಿಸಲಿದೆ. ಈ ಹಿಂದೆ ನಮಗೆ ನೀಡಲಾಗಿದ್ದ ಕಚೇರಿ ಸ್ಥಳವನ್ನೇ ನೀಡಿದರೆ ಸೂಕ್ತ ಎಂದು ಭಾವಿಸಿದ್ದೇವೆ. ಹೀಗಾಗಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ‘ಸ್ಟಾರ್‌ ಏರ್‌’, ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್‌ 26ರಂದು ಬೀದರ್‌–ಬೆಂಗಳೂರು ವಿಮಾನ ಸಂಚಾರ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.