ಬೀದರ್: ಬೀದಿ ಬದಿ ವ್ಯಾಪಾರಿಗಳಿಗೆ ಮೂಲಸೌಕರ್ಯ ಹಾಗೂ ಖಾದ್ಯ ಪ್ರಿಯರಿಗೆ ಒಂದೇ ಸ್ಥಳದಲ್ಲಿ ಬಗೆ ಬಗೆಯ ಖಾದ್ಯಗಳು ಲಭ್ಯವಾಗುವಂತಾಗಲು ನಗರಸಭೆಯು ಇಲ್ಲಿಯ ಕೆಇಬಿ ಮುಂಭಾಗದ ರಸ್ತೆಯಲ್ಲಿ ‘ಫುಡ್ ಕೋರ್ಟ್’ ನಿರ್ಮಾಣ ಮಾಡಲು ಉದ್ದೇಶಿಸಿದೆ.
ಮುಂಬೈ ಹಾಗೂ ಬೆಂಗಳೂರು ಮಾದರಿಯಲ್ಲಿ ಸಾರ್ವಜನಿಕರಿಗೆ ಲಘು ಉಪಾಹಾರ ಹಾಗೂ ಸಂಜೆ ಕುಟುಂಬದ ಸದಸ್ಯರೊಂದಿಗೆ ವೈವಿಧ್ಯಮಯ ಖಾದ್ಯ ಸವಿಯಲು ಅನುಕೂಲವಾಗುವಂತಹ ಯೋಜನೆಯನ್ನು ರೂಪಿಸಿದೆ.
ಹೊಸ ಯೋಜನೆಯಿಂದ ಕೆಇಬಿ ಸಮೀಪದ ಹನುಮಾನ ಮಂದಿರದಿಂದ ಕೆನರಾ ಬ್ಯಾಂಕ್ ವರೆಗಿನ ರಸ್ತೆಯ ಎರಡು ಬದಿಯಲ್ಲಿ ಚಿಕ್ಕಪುಟ್ಟ ಅಂಗಡಿ ಹಾಕಿಕೊಂಡಿರುವವರು ಹಾಗೂ ಕೈಗಾಡಿಯವರಿಗೆ ‘ಫುಡ್ ಕೋರ್ಟ್’ನಲ್ಲಿ ಮಳಿಗೆಗಳು ಲಭ್ಯವಾಗಲಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲಿರುವ ಆಹಾರ ಗುಣಮಟ್ಟ ಮತ್ತು ನಿಯಂತ್ರಣ ಪ್ರಾಧಿಕಾರದಿಂದ ಪರವಾನಗಿ ಪಡೆದ, ನಗರಸಭೆಯಿಂದ ಟ್ರೇಡ್ ಪರವಾನಗಿ ಅಥವಾ ಬೀದಿ ಬದಿ ವ್ಯಾಪಾರಿಯ ಗುರುತಿನ ಚೀಟಿ ಪಡೆದವರನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಿದೆ.
‘12X6 ಚದರ ಅಡಿಯ ಒಂದು ಮಳಿಗೆಯನ್ನು ಒಬ್ಬ ವ್ಯಾಪಾರಿಗೆ ಕೊಡಲಾಗುವುದು. ಒಂದು ಬ್ಲಾಕ್‌ನಲ್ಲಿ ಐದು ಮಳಿಗೆಳಂತೆ ಮೂರು ಬ್ಲಾಕ್‌ಗಳಲ್ಲಿ 15 ಮಳಿಗೆಗಳು ಇರಲಿವೆ. ಜೂನ್ 28 ರಂದು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಓಪನ್ ಮಾಡಿ ಸಂಬಂಧಪಟ್ಟವರಿಗೆ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ’ ಎಂದು ಹೇಳುತ್ತಾರೆ ನಗರಸಭೆಯ ಆಯುಕ್ತ ಮನೋಹರ.
‘ಶೆಡ್‌ಗಳಿಗೆ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಂದು ಬ್ಲಾಕ್‌ಗೆ ಒಂದು ಶೌಚಾಲಯ ನಿರ್ಮಿಸಲಾಗುವುದು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಒಬ್ಬ ಕಾವಲುಗಾರನನ್ನು ಸಹ ನೇಮಕ ಮಾಡಲಾಗುವುದು. ಅವುಗಳ ನಿರ್ವಹಣೆಗೆ ಸಹಕಾರ ಸಂಘದ ಮಾದರಿಯಲ್ಲಿ ಸಂಘ ರಚಿಸಲಾಗುವುದು’ ಎಂದು ಹೇಳುತ್ತಾರೆ.
‘ಪೈಲಟ್ ಯೋಜನೆಯಾಗಿ ಕೆಇಬಿ ಮುಂದಿನ ಜಾಗದಲ್ಲಿ ಫುಡ್‌ಕೋರ್ಟ್ ಕಾರ್ಯಾರಂಭ ಮಾಡಲಿದೆ. ಇಲ್ಲಿ ಯೋಜನೆ ಯಶಸ್ವಿಯಾದರೆ ನಗರದ ಇನ್ನುಳಿದ ಸ್ಥಳಗಳಿಗೂ ವಿಸ್ತರಿಸಲಾಗುವುದು’ ಎನ್ನುತ್ತಾರೆ.
‘ಮಳಿಗೆಗಳನ್ನು ನಿರ್ಮಿಸಿದ ನಂತರ ಎಷ್ಟು ಅರ್ಜಿಗಳು ಬರುತ್ತವೆ ಕಾದು ನೋಡುತ್ತೇವೆ. ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ’ ಎಂದು ಹೇಳುತ್ತಾರೆ.
‘ಶಿವಮೊಗ್ಗದಲ್ಲಿ ಇಂತಹದ್ದೊಂದು ಯೋಜನೆ ಯಶಸ್ವಿಯಾಗಿದೆ. ಬೀದರ್‌ನಲ್ಲಿ ಯಶ ಕಂಡು ಬಂದರೆ ಪ್ರವಾಸಿ ತಾಣಗಳ ಬಳಿಯೂ ಫುಡ್‌ಕೋರ್ಟ್ ಪ್ರಾರಂಭಿಸಲಾಗುವುದು. ನಿತ್ಯ ಘನತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ನೈರ್ಮಲ್ಯ ಕಾಪಾಡಲಾಗುವುದು. ಮಳಿಗೆ ಪಡೆದವರು ನೈರ್ಮಲ್ಯಕ್ಕೆ ಪ್ರಾಮುಖ್ಯ ನೀಡದಿದ್ದರೆ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಮನೋಹರ.
‘ನಗರಸಭೆಯವರೇ ವ್ಯಾಪಾರಿಗಳಿಗೆ ಸಕಲ ಸೌಲಭ್ಯ ಒದಗಿಸಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಕೆಇಬಿ ರಸ್ತೆಯಲ್ಲಿರುವ ವ್ಯಾಪಾರಿಗಳಿಗೆ ಆದ್ಯತೆ ನೀಡಿದರೆ ನ್ಯಾಯ ಒದಗಿಸಿದಂತೆ ಆಗಲಿದೆ’ ಎನ್ನುತ್ತಾರೆ ಶ್ರೀ
ಸಾಯಿ ಫಾಸ್ಟ್ ಫುಡ್ ಮಾಲೀಕ ಕಿರಣ.
‘ಫುಡ್ ಕೋರ್ಟ್’ನಲ್ಲಿ ಕಾಗದದ ಪ್ಲೇಟ್‌ಗಳಿಗೆ ಮಾತ್ರ ಅವಕಾಶ ಇರಲಿದೆ. ಅಂಗಡಿ ಪಕ್ಕದಲ್ಲೇ ಡಸ್ಟ್‌ಬಿನ್‌ಗಳನ್ನು ಇಡಲಾಗುವುದು
- ಮನೋಹರನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.