ಬೀದರ್: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ಶಿವಶಂಕರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಮವಾರ ನಗರದ ಎಂಟು ಹಣ್ಣು ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿದರು.
ಮಳಿಗೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದ ಉಸ್ಮಾನಗಂಜ್ ಇಕ್ಬಾಲ್ ಆ್ಯಂಡ್ ಕಂಪನಿ ಫ್ರುಟ್ಸ್ ಮರ್ಚಂಟ್ ಮಾಲೀಕನಿಗೆ ₹ 1 ಸಾವಿರ ದಂಡ ವಿಧಿಸಿದರು. ಜಮೀರ್ ಅಹ್ಮದ್ ಆ್ಯಂಡ್ ಸನ್ಸ್ ಫ್ರುಟ್ಸ್ ಮರ್ಚಂಟ್ಸ್, ಮುಜಾಮಿಲ್ ಆ್ಯಂಡ್ ಸನ್ಸ್, ನ್ಯೂ ಕರ್ನಾಟಕ ಫ್ರುಟ್ಸ್ ಮರ್ಚಂಟ್ಸ್, ಮೈನೋದ್ದಿನ್ ಫ್ರುಟ್ಸ್ ಕಂಪನಿ, ಎಫ್.ಝಡ್ ಫ್ರುಟ್ಸ್ ಕಂಪನಿ, ರಾಯಲ್ ಫ್ರುಟ್ಸ್ ಕಂಪನಿ, ಎಎಫ್‌ಸಿ ಫ್ರುಟ್ಸ್ ಕಂಪನಿ ಮಳಿಗೆಗಳ ಮೇಲೆ ದಾಳಿ ನಡೆಸಿ ಮಳಿಗೆಯಲ್ಲಿ ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವ ದ್ರಾವಣಗಳನ್ನು ಪರಿಶೀಲಿಸಿದರು. ಕಾಯಿಗಳನ್ನು ಹಣ್ಣು ಮಾಡಲು ಹಾನಿಕಾರಕ ರಾಸಾಯನಿಕ ದ್ರಾವಣಗಳನ್ನು ಬಳಸದಂತೆ ಎಚ್ಚರಿಕೆಯನ್ನೂ ನೀಡಿದರು.
ಆಹಾರ ಪದಾರ್ಥಗಳ ವಹಿವಾಟಿನಲ್ಲಿ ತೊಡಗಿರುವವರು ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006ರ ಪ್ರಕಾರ ಪರವಾನಗಿ ಪತ್ರ ಪಡೆದಿರಬೇಕು. ನೋಂದಣಿ ಅಥವಾ ಪರವಾನಗಿ ಇಲ್ಲದೆ ಆಹಾರ ವಹಿವಾಟಿನಲ್ಲಿ ತೊಡಗಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ್ಯಾಲ್ಶಿಯಂ ಕಾರ್ಬೈಡ್ ಮೂಲಕ ಹಸಿ ಕಾಯಿಗಳನ್ನು ಹಣ್ಣು ಮಾಡುವುದು ಅಪಾಯಕಾರಿಯಾಗಿದೆ. ಇದರಿಂದ ಕ್ಯಾನ್ಸರ್ ಅಷ್ಟೇ ಅಲ್ಲ; ವ್ಯಕ್ತಿಯ ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗುತ್ತದೆ. ಹೀಗಾಗಿ ಕಾರ್ಬೈಡ್ ಬಳಕೆ ಮಾಡಬಾರದು ಎಂದು ವ್ಯಾಪಾರಿಗಳಿಗೆ ತಿಳಿವಳಿಕೆ ನೀಡಿದರು.
ನಿಷೇಧಿತ ಕಾರ್ಬೈಡ್ ಬಳಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ 2006 ಕಾಯ್ದೆ ಅಡಿ 6 ತಿಂಗಳು ಜೈಲು ಶಿಕ್ಷೆ ಹಾಗೂ ₹ 5 ಲಕ್ಷ ವರೆಗೆ ದಂಡ ವಿಧಿಸಬಹುದಾಗಿದೆ. ಇಥಲಿನ್ ರೈಟರ್ ಬಳಸಲು ಅನುಮತಿ ಇದೆ. ಆದರೆ, ಅದನ್ನು ಸಹ ನಿಗದಿತ ಪ್ರಮಾಣದಲ್ಲೇ ಬಳಸಬೇಕು ಎಂದು ತಿಳಿಸಿದರು.
ದಾಳಿಯಲ್ಲಿ ಅರವಿಂದ ಕುಮಾರ, ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಅರವಿಂದ ಕುಮಾರ ಹಾಗೂ ಸಹಾಯಕ ರಾಜರಡ್ಡಿ ಚಿದ್ರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.