ಬೀದರ್: ಸಂವಿಧಾನ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಜನಸಾಮಾನ್ಯರ ಹಾಗೂ ರೈತರ ಹಕ್ಕುಗಳ ರಕ್ಷಣೆಗಾಗಿ ಜನವರಿ 26ರಂದು ಸಂಜೆ 5 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ, ಗೊಂಡ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಸಂಕಲ್ಪ ಸಮಾವೇಶಕ್ಕೆ ಪ್ರಮುಖರನ್ನು ಆಹ್ವಾನಿಸಲಾಗಿದೆ ಎಂದು ಬೃಹತ್ ಸಂಕಲ್ಪ ಸಮಾವೇಶ ಸಮಿತಿಯ ಅಧ್ಯಕ್ಷ ಬಾಬುರಾವ್ ಪಾಸ್ವಾನ್ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಷ್ಟ್ರದ ವಿಚಾರವಾದಿ ಸುಭಾಷನ್ ಶೇಕ್, ನವದೆಹಲಿಯ ಐಎಎಸ್ ಅಕಾಡೆಮಿ ಶಿವಕುಮಾರ ಅಕ್ಕ,
ಮೂಲನಿವಾಸಿ ಸಂಘಟನೆಯ ತಾರಾಮೋಹನ, ಸಾಹಿತಿ ಮೀನಾಕ್ಷಿ ಬಾಳಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು
ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಎಸ್.ಸಿ, ಎಸ್ ಟಿ . ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಪೇ-ಮೇಂಟ್ ಸೀಟುಗಳಿಗೆ ನೀಡುತ್ತಿರುವ ಶಿಷ್ಯವೇತನವನ್ನು ಮುಂದುವರಿಸಬೇಕು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ತಡೆಯಬೇಕು. ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಅನುದಾನ ಬಳಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಕ್ಷೇತ್ರಗಳಲ್ಲಿ ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು.
ಸಂವಿಧಾನದ ಆಶಯಗಳನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಸಮಾವೇಶದ ಮೂಲಕ ಆಗ್ರಹಿಸಲಾಗುವುದು ಎಂದರು.
ಸಮಿತಿಯ ಗೌರವಾಧ್ಯಕ್ಷ ಶಾಲಿವಾನ ಬಡಿಗೇರ, ಕಾರ್ಯಧ್ಯಕ್ಷರಾದ ಕಲ್ಯಾಣರಾವ್ ಭೋಸ್ಲೆ, ಮಹಾಪ್ರಧಾನ ಕಾರ್ಯದರ್ಶಿ ಅಂಬದಾಸ ಗಾಯಕವಾಡ, ಖಜಾಂಚಿ ರಘುನಾಥ ಗಾಯಕವಾಡ, ಉಪಾಧ್ಯಕ್ಷರಾದ ಶ್ರೀಪತರಾವ್ ದೀನೆ, ಅರುಣ ಕುದ್ರೆ, ಬಾಬುರಾವ್ ಮಿಠಾರೆ, ದಿಲೀಪ ಭೋಸ್ಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.