ಬೀದರ್: ಇಲ್ಲಿಯ ಶಹಾಪುರ ಗೇಟ್ ಬಳಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ದಂತ ತಜ್ಞ ಡಾ. ನಾಗೇಶ ಪಾಟೀಲ ಅವರು ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ದಂತ ಕಿಟ್ ವಿತರಿಸಿದರು.
9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಬ್ರಶ್, ಪೇಸ್ಟ್ ಹಾಗೂ ಮೌತವಾಶ್ ಒಳಗೊಂಡ ಕಿಟ್ ವಿತರಣೆ ಮಾಡಿದರು.
ಐದು ದಿನಗಳ ಅವಧಿಯಲ್ಲಿ 12 ಜನ ವೈದ್ಯರ ತಂಡದಿಂದ ಕಾಲೇಜಿನಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಲಾಗಿದೆ. ದಂತ ಸಮಸ್ಯೆ ಕಂಡು ಬಂದವರಿಗೆ ಉಚಿತ ಚಿಕಿತ್ಸೆ ಕೊಡಲಾಗುವುದು ಎಂದು ಹೇಳಿದರು.
ಗುಟ್ಕಾ ಸೇವನೆ ಚಟ ಹೊಂದಿದ ಹೆಚ್ಚಿನವರಲ್ಲಿ ದಂತ ಸಮಸ್ಯೆಗಳು ಕಂಡು ಬರುತ್ತಿವೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿಯ ಅನಾರೋಗ್ಯ ಉಂಟಾಗುತ್ತಿದೆ. ಕ್ಯಾನ್ಸರ್‌ನತಹ ಮಾರಕ ರೋಗಗಳಿಗೂ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.
ಮನುಷ್ಯನ ಉತ್ತಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಹಲ್ಲುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಹಲ್ಲುಗಳು ಚೆನ್ನಾಗಿದ್ದರೆ ಶೇ 50 ರಷ್ಟು ಅನಾರೋಗ್ಯ ಸಮಸ್ಯೆ ಬಗೆಹರಿದಂತೆ. ಹೀಗಾಗಿ ವಿದ್ಯಾರ್ಥಿಗಳು ದಂತ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ತಿಳಿಸಿದರು.
ದಂತ ಆರೋಗ್ಯ ಕಾಪಾಡಲು ನೆರವಾಗುವ ಉದ್ದೇಶದಿಂದ ಕಾಲೇಜಿನಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳಿಗಾಗಿ ದಂತ ಚಿಕಿತ್ಸಾಲಯ ಆರಂಭಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.
ಡಾ. ನಾಗೇಶ ಪಾಟೀಲ ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ನಡೆಸಿದ್ದಾರೆ. ದಂತ ಕಿಟ್ ವಿತರಿಸಿದ್ದಾರೆ. ಶಾಹೀನ್ ದಂತ ಚಿಕಿತ್ಸಾಲಯಕ್ಕೂ ಎರಡು ಪೊರ್ಟೆಬಲ್ ಡೆಂಟಲ್ ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಚಿಕಿತ್ಸಾಲಯ ಉದ್ಘಾಟನೆ
ಕಾಲೇಜಿನಲ್ಲಿ ಆರಂಭಿಸಲಾದ ದಂತ ಚಿಕಿತ್ಸಾಲಯವನ್ನು ಶಾಸಕ ರಹೀಂಖಾನ್ ಉದ್ಘಾಟಿಸಿದರು. ಇದಕ್ಕೂ ಮುನ್ನ ಶಾಸಕರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಜಂಟಿಯಾಗಿ ದಂತ ಕಿಟ್ ಉಚಿತ ವಿತರಣೆಗೆ ಚಾಲನೆ ನೀಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ದಂತ ತಜ್ಞ ಡಾ. ನಾಗೇಶ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.