ಬಸವಕಲ್ಯಾಣ: ನಗರದ ಸಸ್ತಾಪುರ ರಸ್ತೆಯಲ್ಲಿನ 108 ಅಡಿ ಎತ್ತರದ ಬಸವಣ್ಣನವರ ಬೃಹತ್ ಪುತ್ಥಳಿಯ ಎದುರಲ್ಲಿನ ಬಸವ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದಿಂದ ಮೂರು ದಿನ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಅಕ್ಟೋಬರ್ 18ರಿಂದ ಮೂರು ದಿನಗಳವರೆಗೆ ವಿವಿಧ ಗೋಷ್ಠಿ ಹಾಗೂ ಇತರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಇದಕ್ಕಾಗಿ ಇಲ್ಲಿ ಬೃಹತ್ ಸಭಾ ಮಂಟಪ ನಿರ್ಮಿಸಿದ್ದು ವೇದಿಕೆ ಸಿದ್ಧಪಡಿಸಲಾಗಿದೆ.
ಮಂಟಪಕ್ಕೆ ಆಕರ್ಷಕ ಮಹಾದ್ವಾರ ನಿರ್ಮಿಸಲಾಗಿದೆ. ಆವರಣದ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಕಟ್ಟಲಾಗಿದೆ. ಬಸವಣ್ಣನವರ ಪುತ್ಥಳಿಗೆ ರಾತ್ರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಇತರೆಡೆಯೂ ಪುಷ್ಪಗಳಿಂದ ಅಲಂಕರಿಸಲಾಗಿದೆ.
ನಗರ ಪ್ರವೇಶಿಸುವ ರಸ್ತೆಯಿಂದ ಬಸವಣ್ಣನವರ ಪುತ್ಥಳಿಯವರೆಗೆ ಹೋಗುವುದಕ್ಕೆ ಈಚೆಗೆ ಉತ್ತಮವಾದ ಹಾಗೂ ನೇರವಾದ ರಸ್ತೆ ನಿರ್ಮಿಸಿದ್ದರಿಂದಲೂ ಪರಿಸರ ಸುಂದರವಾಗಿ ಕಾಣುತ್ತಿದೆ.
‘ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಕೆಲ ಭಕ್ತರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವರು’ ಎಂದು ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
‘ಪ್ರಥಮ ದಿನದ ಧರ್ಮಚಿಂತನ ಗೋಷ್ಠಿಯಲ್ಲಿ ಭಾಲ್ಕಿ ಗುರುಬಸವ ಪಟ್ಟದ್ದೇವರು, ಹುಲಸೂರ ಶಿವಾನಂದ ಸ್ವಾಮೀಜಿ, ಬೇಲೂರು ಶಿವಕುಮಾರ ಸ್ವಾಮೀಜಿ, ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ ಮತ್ತಿತರರು ಪಾಲ್ಗೊಳ್ಳುತ್ತಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗವಹಿಸುವರು’ ಎಂದು ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಕೊಳಕೂರ ತಿಳಿಸಿದ್ದಾರೆ.
‘ಧರ್ಮಚಿಂತನ ಗೋಷ್ಠಿ, ಮಹಿಳಾ ಗೋಷ್ಠಿ, ಯುವ ಗೋಷ್ಠಿ ಮತ್ತಿತರೆ ಗೋಷ್ಠಿಗಳು ಮತ್ತು ಇತರೆ ಧಾರ್ಮಿಕ ವಿಷಯಗಳ ಚರ್ಚೆ, ಚಿಂತನೆ ನಡೆಯಲಿದೆ’ ಎಂದಿದ್ದಾರೆ.
ಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ಕಲ್ಯಾಣ ಪರ್ವ ಅದ್ಧೂರಿಯಾಗಿ ನಡೆಯಲಿದ್ದು ಸಾವಿರಾರು ಜನರಿಗೆ ವಸತಿ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.ರವಿ ಕೊಳಕೂರ ತಾಲ್ಲೂಕು ಅಧ್ಯಕ್ಷ ರಾಷ್ಟ್ರೀಯ ಬಸವದಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.