ಬೀದರ್: ಏಕದಂತನ ಭಕ್ತರು ಭಾದ್ರಪದ ಚೌತಿಯ ದಿನ ಗಣೇಶನನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಮನೆಗಳಲ್ಲಿ ಮೂರ್ತಿಗಳನ್ನು ಪೂಜಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,403 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆದರೆ, ನದಿ, ಹಳ್ಳಕೊಳ್ಳಗಳಲ್ಲಿ ನೀರಿಲ್ಲದ ಕಾರಣ ಮೂರ್ತಿಗಳ ವಿಸರ್ಜನೆ ಮಾಡುವುದು ಹೇಗೆ ಎನ್ನುವ ಚಿಂತೆ ಭಕ್ತರನ್ನು ಕಾಡುತ್ತಿದೆ.
ಮಾಂಜ್ರಾ ನದಿಯಲ್ಲಿ ಹನಿ ನೀರಿಲ್ಲ. ಬ್ಯಾರೇಜ್‌ಗಳಲ್ಲಿ ಮೂರು ಅಡಿ ಗಣಪತಿ ಮುಳುಗುವಷ್ಟೂ ನೀರು ನಿಂತಿಲ್ಲ. ಮನೆ ಗಣಪತಿಗಳನ್ನು ಡ್ರಮ್ ಅಥವಾ ಬಕೆಟ್‌ನಲ್ಲಿ ವಿಸರ್ಜನೆ ಮಾಡಬಹುದು. ಆದರೆ, 10, 15 ಹಾಗೂ 22 ಅಡಿ ಎತ್ತರದ ಎತ್ತರದ ಗಣಪತಿಗಳನ್ನು ವಿಸರ್ಜನೆ ಮಾಡುವುದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳಿಗೆ ಸವಾಲಾಗಿದೆ.
ಬೀದರ್‌ನ ಕೆಇಬಿ ಹನುಮಾನ ಮಂದಿರದ ಆವರಣದಲ್ಲಿ ಯುವ ಹಿಂದೂ ಸೇನಾ 22 ಅಡಿ ಎತ್ತರದ ಗಣಪತಿ, ದೇವಿ ಕಾಲೊನಿ ಗಣೇಶ ಮಂಡಳ 17 ಅಡಿ, ಬಾಲ ಹನುಮಾನ ಗಣೇಶ ಮಂಡಳ, ಶರಣನಗರ ಗಣೇಶ ಮಂಡಳ ಹಾಗೂ ಗುಂಪಾದ ಗಣೇಶ ಮಂಡಳ 12 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಿವೆ. ನಗರದ ಸುಮಾರು 150 ಸಾರ್ವಜನಿಕ ಗಣೇಶ ಮಂಡಳಗಳ ಮೂರ್ತಿಗಳು 8 ರಿಂದ 10 ಅಡಿ ಎತ್ತರ ಇವೆ. ಮಂಡಳಿಯವರು ಉತ್ಸಾಹದಿಂದ ಗಣಪತಿಗಳನ್ನು ತಂದರೂ ಈಗ ಎಲ್ಲಿ ವಿಸರ್ಜನೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ.
ಪ್ರತಿ ವರ್ಷ ಬೀದರ್‌ನ ಸಂಕಟ ನಿವಾರಕನ ಭಕ್ತ ಸಮೂಹ ಮೂರ್ತಿಗಳನ್ನು ಸಂಭ್ರಮದಿಂದ ಮೆರವಣಿಗೆ ಮೂಲಕ ತೆರಳಿ
ಕೌಠಾ ಬಳಿಯ ಮಾಂಜ್ರಾ ನದಿಯಲ್ಲಿ ವಿಸರ್ಜನೆ ಮಾಡುತ್ತಿತ್ತು. ಪಿಒಪಿ ಗಣಪತಿಗಳು ಬ್ಯಾರೇಜ್‌ನಲ್ಲಿ ತೇಲುತ್ತಿದ್ದವು. ನಂತರ ಅವುಗಳನ್ನು ಎಳೆದು ತಂದು ನದಿ ದಂಡೆಯಲ್ಲಿ ಕೂಡುಹಾಕಲಾಗುತ್ತಿತ್ತು. ಈ ವರ್ಷ ಮುಂಗಾರು ಮಳೆ ಕೊರತೆಯಿಂದ ನದಿ ಬರಿದಾಗಿದೆ. ಕಾರಂಜಾ ಜಲಾಶಯ ಸಹ ಭರ್ತಿಯಾಗಿಲ್ಲ. ಜಲಾಶಯ ತುಂಬಿದ್ದರೆ ನದಿಯಲ್ಲಿ ನೀರಿನ ಹರಿವು ನಿರಂತರವಾಗಿರುತ್ತಿತ್ತು. ನದಿಯಲ್ಲಿ ನೀರಿಲ್ಲದೇ ನದಿ ದಂಡೆಯ ಊರುಗಳಲ್ಲೂ ಗಣೇಶನ ವಿಸರ್ಜನೆಗೆ ತೊಂದರೆಯಾಗಿದೆ.
ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಅಪಚಾರವಾಗದಂತೆ ಕರಗಿಸಬೇಕಿದೆ. ನೀರಿಲ್ಲದ್ದರಿಂದ ಗಣೇಶ ವಿಸರ್ಜನೆ
ಹೇಗೆ ಎಂಬ ಚಿಂತೆ ಶುರುವಾಗಿದೆ’ ಎಂದು ಹಿಂದೂ ಬ್ರಿಗೇಡ್ ಗಣೇಶ ಮಂಡಳಿ ಅಧ್ಯಕ್ಷ ರವಿ ಕೋಡಗೆ ಹೇಳುತ್ತಾರೆ.
‘ನಗರದಲ್ಲಿ ದೊಡ್ಡ ಬಾವಿಗಳಿಲ್ಲ. ನದಿಯಲ್ಲಿಯೇ ಎಲ್ಲರೂ ಗಣೇಶನನ್ನು ವಿಸರ್ಜಿಸುತ್ತಿದ್ದೇ ವು. ಜಿಲ್ಲಾ ಆಡಳಿತ ಗಣೇಶ ವಿಸರ್ಜನೆಗೆ ಒಂದು ಕಡೆ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಅವರು.
ಜಿಲ್ಲಾ ಆಡಳಿತದಿಂದ ಪರ್ಯಾಯ ವ್ಯವಸ್ಥೆ
ಮಾಂಜ್ರಾ ನದಿಯಲ್ಲಿ ನೀರಿಲ್ಲದ ಕಾರಣ ಜಿಲ್ಲಾ ಆಡಳಿತ ಬೀದರ್ ತಾಲ್ಲೂಕಿನ ಸುಲ್ತಾನಪುರ ಸಮೀಪ ಕ್ವಾರಿಯಲ್ಲಿ ನಿಂತಿರುವ ನೀರಲ್ಲಿ ವಿನಾಯಕ ವಿಸರ್ಜನೆಗೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಿದೆ.
‘ಜಿಲ್ಲಾಧಿಕಾರಿ ಸೂಚನೆಯಂತೆ ಕ್ವಾರಿ ಪ್ರದೇಶವನ್ನು ವೀಕ್ಷಿಸಲಾಗಿದೆ. ಕ್ವಾರಿಯಲ್ಲಿ ಸಾಕಷ್ಟು ನೀರು ಇದೆ. ನಗರದಲ್ಲಿ ಅನೇಕ ಕಡೆ ಬೃಹದಾಕಾರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವ ಕಾರಣ ಎರಡು ಕ್ರೇನ್‌ಗಳನ್ನು ಬಳಸಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಬಸಪ್ಪ ತಿಳಿಸಿದರು.
‘ಮಾಂಜ್ರಾ ನದಿ 11 ಕಿ.ಮೀ ದೂರದಲ್ಲಿದ್ದರೆ, ಸುಲ್ತಾನಪುರ ಕ್ವಾರಿ ಕೇವಲ 8 ಕಿ.ಮೀ ಅಂತರದಲ್ಲಿದೆ. ಕ್ವಾರಿ ವರೆಗೆ ರಸ್ತೆಯೂ ಚೆನ್ನಾಗಿದೆ. ಸಾರ್ವಜನಿಕ ಗಣಪತಿಗಳ ವಿಸರ್ಜನೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಸೆಪ್ಟೆಂಬರ್ 6 ರಂದು ಸುಲ್ತಾನಪುರದ ಕ್ವಾರಿಯಲ್ಲಿ ಸಾರ್ವಜನಿಕ ಗಣೇಶ ಮಂಡಳಗಳ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
‘4 ಡಿವೈಎಸ್‌ಪಿ, 11 ಇನ್‌ಸ್ಪೆಕ್ಟರ್, 27 ಪಿಎಸ್‌ಐ, 450 ಪೊಲೀಸ್ ಕಾನ್‌ಸ್ಟೆಬಲ್, 8 ಕೆಎಸ್‌ಆರ್‌ಪಿ ತುಕ್ಕಡಿ ಹಾಗೂ ಪ್ರಹಾರ ದಳವನ್ನು ನಿಯೋಜಿಸಲಾಗಿದೆ. ಸುಲ್ತಾನಪುರ ಸಮೀಪ ಬ್ಯಾರಿಕೇಡ್ ಅಳವಡಿಸಲಾಗುವುದು. ಕ್ವಾರಿಯಿಂದ 4 ಅಡಿ ದೂರದಿಂದ ಕ್ರೇನ್ ಸಹಾಯದಿಂದ ಮೂರ್ತಿಗಳನ್ನು ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.