ADVERTISEMENT

ಬೀದರ್‌: ಗಣಪನ ಮೆರವಣಿಗೆ; ಮಧ್ಯರಾತ್ರಿ ಹೈಡ್ರಾಮಾ

ಚೌಬಾರದಿಂದ ಅಂಬೇಡ್ಕರ್‌ ವೃತ್ತದವರೆಗೆ ನಡುರಸ್ತೆಯಲ್ಲಿ ಮೂರ್ತಿಗಳನ್ನು ನಿಲ್ಲಿಸಿ ತಡರಾತ್ರಿ ವರೆಗೆ ಧರಣಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಸೆಪ್ಟೆಂಬರ್ 2024, 6:38 IST
Last Updated 13 ಸೆಪ್ಟೆಂಬರ್ 2024, 6:38 IST
ವಿವಿಧ ಗಣೇಶ ಮಂಡಳಿಗಳ ಕಾರ್ಯಕರ್ತರು ಬೀದರ್‌ನ ಚೌಬಾರ ಬಳಿ ನಡುರಸ್ತೆಯಲ್ಲಿ ಬುಧವಾರ ತಡರಾತ್ರಿ ಧರಣಿ ನಡೆಸಿದರು
ವಿವಿಧ ಗಣೇಶ ಮಂಡಳಿಗಳ ಕಾರ್ಯಕರ್ತರು ಬೀದರ್‌ನ ಚೌಬಾರ ಬಳಿ ನಡುರಸ್ತೆಯಲ್ಲಿ ಬುಧವಾರ ತಡರಾತ್ರಿ ಧರಣಿ ನಡೆಸಿದರು   

ಬೀದರ್‌: ಗಣೇಶನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಬಂದ್‌ ಮಾಡಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ನಗರದ ವಿವಿಧ ಗಣೇಶ ಮಂಡಳಿಯವರು ಮೆರವಣಿಗೆಯನ್ನು ಸ್ಥಗಿತಗೊಳಿಸಿ, ನಡುರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದರಿಂದ ಮಧ್ಯರಾತ್ರಿಯಿಂದ ತಡರಾತ್ರಿ ವರೆಗೆ ನಗರದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬುಧವಾರ ರಾತ್ರಿ 12ಗಂಟೆ ಸುಮಾರಿಗೆ ಚೊಂಡಿ ಗಲ್ಲಿ ಗಣೇಶ ಮಂಡಳಿಯ ಗಣೇಶನ ಮೂರ್ತಿ ಮೆರವಣಿಗೆಯಲ್ಲಿ ಚೌಬಾರ ತಲುಪಿತು. ಚೌಬಾರ ಮೇಲೆ ನಿರ್ಮಿಸಿದ್ದ ವೇದಿಕೆಯಲ್ಲಿ ಆಸೀನರಾಗಿದ್ದ ಗಣೇಶ ಮಹಾಮಂಡಳಿಯ ಪದಾಧಿಕಾರಿಗಳು ಹೂಮಳೆಗರೆದು ಸ್ವಾಗತಿಸಿದರು. ಇದರಿಂದ ಸಂಭ್ರಮ ಇಮ್ಮಡಿಸಿತು. ಇದಾದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಬಂದು ಡಿಜೆ ಬಂದ್‌ ಮಾಡಿಸಿದರು. ಇದರಿಂದ ಗಣೇಶ ಮಂಡಳಿಯ ಕಾರ್ಯಕರ್ತರು ಸಿಟ್ಟಿಗೆದ್ದು ಪೊಲೀಸರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಗಣೇಶ ಮಹಾಮಂಡಳಿಯ ಪದಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಬಳಿಕ ನಡುರಸ್ತೆಯಲ್ಲಿಯೇ ಕುಳಿತು ‘ಜೈಶ್ರೀರಾಮ್‌’ ಎಂದು ಘೋಷಣೆಗಳನ್ನು ಹಾಕಿದರು. ಮಹಾಮಂಡಳಿಯ ಈಶ್ವರ್‌ ಸಿಂಗ್‌ ಠಾಕೂರ್‌ ಮಾತನಾಡಿ, ಶಾಂತಿಯುತವಾಗಿ ಸಂಭ್ರಮದಿಂದ ಗಣೇಶನ ಮೆರವಣಿಗೆ ಮಾಡುತ್ತಿದ್ದರೂ ಪೊಲೀಸರು ಡಿಜೆ ಬಂದ್‌ ಮಾಡಿಸಿದ್ದಾರೆ. ಇದು ಸರಿಯಾದ ಧೋರಣೆಯಲ್ಲ. ಡಿಜೆ ಬಳಕೆಗೆ ಅನುಮತಿ ಕೊಡುವವರೆಗೆ ಯಾರೊಬ್ಬರೂ ಸ್ಥಳ ಬಿಟ್ಟು ಕದಲಬಾರದು. ಆಯಾ ಗಣೇಶ ಮಂಡಳಿಯವರು ತಾವಿದ್ದ ಸ್ಥಳದಲ್ಲಿಯೇ ಗಣೇಶನ ಮೂರ್ತಿಗಳನ್ನು ಹೊತ್ತ ವಾಹನಗಳನ್ನು ನಿಲ್ಲಿಸಿ, ಅಲ್ಲಿಯೇ ರಾಮನ ಭಜನೆ ಮಾಡುತ್ತ ಧರಣಿ ನಡೆಸಬೇಕು. ಬೆಳಕು ಹರಿದ ನಂತರ ಮೆರವಣಿಗೆ ಮುಂದುವರಿಸೋಣ’ ಎಂದು ಹೇಳಿದಾಗ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಆನಂತರ ಠಾಕೂರ್‌ ಅವರು ರಾಮನ ಭಜನೆ ಹೇಳಿಕೊಟ್ಟರು. ಕಾರ್ಯಕರ್ತರು ಅವರನ್ನು ಅನುಸರಿಸಿದರು.

ಚೌಬಾರದಿಂದ ನಯಾಕಮಾನ್‌ ವರೆಗೆ ಎಂಟರಿಂದ ಹತ್ತು ಗಣೇಶನ ಮೂರ್ತಿಗಳಿದ್ದರೆ, ಬಸವೇಶ್ವರ ವೃತ್ತದಿಂದ ಹರಳಯ್ಯಾ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ 10ರಿಂದ 15 ಗಣೇಶನ ಮೂರ್ತಿಗಳೊಂದಿಗೆ ರಸ್ತೆಯುದ್ದಕ್ಕೂ ಕಾರ್ಯಕರ್ತರು ಕುಳಿತು ಘೋಷಣೆ ಹಾಕುತ್ತ ಧರಣಿ ನಡೆಸಿದರು. ಈ ಮಧ್ಯೆ ಕೆಲವು ಗಣೇಶ ಮಂಡಳಿಯವರು ಪೊಲೀಸರ ಸೂಚನೆ ಹೊರತಾಗಿಯೂ ಡಿಜೆ ಹಾಕಿ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್ಪಿ ಪ್ರದೀಪ್‌ ಗುಂಟಿ ಅವರು, ಅದನ್ನು ನಿಲ್ಲಿಸಿದರು. ಈ ವೇಳೆ ಕೆಲವರು ಗುಂಪುಗೂಡಿ ಅವರ ವಿರುದ್ಧವೇ ಘೋಷಣೆಗಳನ್ನು ಹಾಕಲಾರಂಭಿಸಿದರು. ಈ ವೇಳೆ ಪೊಲೀಸರು ಅವರನ್ನು ಚದುರಿಸಿದರು.

ADVERTISEMENT

ಆನಂತರ ಗಣೇಶ ಮಹಾಮಂಡಳಿಯ ಪ್ರಮುಖರು, ಹಿರಿಯ ಪೊಲೀಸ್‌ ಅಧಿಕಾರಿಗಳು ಧರಣಿ ನಿರತರೊಂದಿಗೆ ನಡೆಸಿದ ಸಂಧಾನ ಫಲ ಕೊಡಲಿಲ್ಲ. ರಾತ್ರಿ 12ಗಂಟೆಗೆ ಆರಂಭಗೊಂಡ ಧರಣಿ ತಡರಾತ್ರಿ 3ಗಂಟೆಯ ವರೆಗೆ ನಡೆಯಿತು. ಇನ್ನೊಂದೆಡೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ, ಚೌಬಾರದಿಂದ ದೂರದಲ್ಲಿದ್ದ ಗಣೇಶನ ಮೂರ್ತಿಗಳೊಂದಿಗೆ ಇದ್ದ ಡಿಜೆಗಳನ್ನು ಸ್ಥಳದಿಂದ ಕಳಿಸಿದರು. ಆನಂತರ ಮೂರ್ತಿಗಳನ್ನು ಮಾಂಜ್ರಾ ನದಿಗೆ ಕೊಂಡೊಯ್ಯಲು ಕಟ್ಟುನಿಟ್ಟಿನ ತಾಕೀತು ಮಾಡಿದರು. ಹೀಗೆ ಒಬ್ಬೊಬ್ಬರೇ ಸ್ಥಳದಿಂದ ನಿರ್ಗಮಿಸಲು ಆರಂಭಿಸಿದರು. ನಯಾಕಮಾನ್‌ ಹೊರಭಾಗದಲ್ಲಿ ನಿಂತಿದ್ದ ಶಿವಸೇನಾ ಗಣೇಶ ಮಂಡಳಿ, ಬೀದರ್‌ ಕಾ ರಾಜಾ, ದೇವಿ ಗಣೇಶ ಮಂಡಳಿ ಸೇರಿದಂತೆ ಇತರೆ ಗಣೇಶ ಮಂಡಳಿಗಳು ಬೃಹತ್‌ ಮೂರ್ತಿಗಳೊಂದಿಗೆ ನೇರ ನದಿಯ ಕಡೆಗೆ ತೆರಳಿದವು. ನಸುಕಿನ ಜಾವ 4ಗಂಟೆಗೆಲ್ಲ ವಾತಾವರಣ ತಿಳಿಗೊಂಡಿತು. ರಸ್ತೆ ಮೇಲೆ ಕುಳಿತಿದ್ದವರನ್ನು ಪೊಲೀಸರು ಕಳಿಸಿದರು. ಹೆಚ್ಚಿನ ಗಣೇಶ ಮಂಡಳಿಗಳು ಅವುಗಳ ಮೂಲ ಸ್ಥಳದಿಂದ ನಿರ್ಗಮಿಸಲು ವಿಳಂಬ ಮಾಡಿದ್ದರಿಂದ ರಾತ್ರಿ 12ಗಂಟೆಯಾಗಿದ್ದರೂ ಅವುಗಳು ನಯಾಕಮಾನ್‌ ಒಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

ಗಣೇಶನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯ ಕಣ್ತುಂಬಿಕೊಳ್ಳಲು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು. ಭಗತ್‌ ಸಿಂಗ್‌ ವೃತ್ತ, ಬಸವೇಶ್ವರ ವೃತ್ತದಿಂದ ಚೌಬಾರ ತನಕ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳಲ್ಲಿ ಜನ ಸೇರಿದ್ದರು. ಆದರೆ, ಮಧ್ಯರಾತ್ರಿ ವರೆಗೆ ಅವರು ಬೆರಳೆಣಿಕೆಯ ಗಣೇಶನ ಮೂರ್ತಿಗಳನ್ನು ಮಾತ್ರ ಕಣ್ತುಂಬಿಕೊಂಡರು. ಗಣೇಶ ಮಂಡಳಿಯವರು ಸಾಕಷ್ಟು ವಿಳಂಬ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲ್ಲೇ ಅಲ್ಲಿಂದ ನಿರ್ಗಮಿಸಿದರು. ಗುರುವಾರ ನಸುಕಿನ ಜಾವ ಆರಂಭಗೊಂಡ ಮೂರ್ತಿಗಳ ವಿಸರ್ಜನೆ ಕಾರ್ಯ ಬೆಳಗಿನ ವರೆಗೆ ನಡೆಯಿತು.

ಬೀದರ್‌ ಕಾ ರಾಜಾ ಗಣೇಶ ಮಂಡಳಿಯ ಡಿಜೆ ಪ್ರಖರ ಬೆಳಕಿನಲ್ಲಿ ಹುಚ್ಚೆದ್ದು ಕುಣಿದ ನೂರಾರು ಯುವಕರು
ಬೀದರ್‌ನಲ್ಲಿ ಬುಧವಾರ ರಾತ್ರಿ ನಡೆದ ಗಣೇಶನ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ ಹಾಕಿದ ಡಿಜೆ ಶಬ್ದದಿಂದ ಅನೇಕರು ಕಿವಿಯೊಳಗೆ ಬೆರಳು ಇಟ್ಟುಕೊಂಡು ನಿಂತಿದ್ದರು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಬುಧವಾರ ತಡರಾತ್ರಿ ಬೀದರ್‌ನ ಛತ್ರಪತಿ ಶಿವಾಜಿ ವೃತ್ತದ ರಸ್ತೆಯಲ್ಲಿ ಸೇರಿದ್ದ ಗಣೇಶ ಮಂಡಳಿಯ ಜನರನ್ನು ತೆರವುಗೊಳಿಸಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಿದರು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

‘ಗಣೇಶ ಮಂಡಳಿಗಳಿಗೆ ಸಮಯ ತಿಳಿಸಲಾಗಿತ್ತು’

‘ಗಣೇಶ ಉತ್ಸವಕ್ಕೂ ಮುನ್ನ ನಡೆಸಿದ ಸಭೆಯಲ್ಲಿ ಎಲ್ಲ ಗಣೇಶ ಮಂಡಳಿಗಳ ಪದಾಧಿಕಾರಿಗಳಿಗೆ ರಾತ್ರಿ ಹತ್ತು ಗಂಟೆಯೊಳಗೆ ಮೆರವಣಿಗೆ ಮುಗಿಸಬೇಕೆಂದು ಸಮಯ ತಿಳಿಸಲಾಗಿತ್ತು. ಅವರು ಅರ್ಧಗಂಟೆ ಹೆಚ್ಚುವರಿ ಸಮಯ ಕೇಳಿದ್ದರು. ಅದಕ್ಕೂ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ‌‌ತೀರ ವಿಳಂಬ ಮಾಡಿದ್ದರಿಂದ ಡಿಜೆಗಳನ್ನು ಬಂದ್‌ ಮಾಡಿಸಬೇಕಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬೀದರ್‌ ಜಿಲ್ಲೆಯಾದ್ಯಂತ ಬುಧವಾರ ತಡರಾತ್ರಿ 701 ಗಣೇಶನ ಮೂರ್ತಿಗಳ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಗಣೇಶ ಮಂಡಳಿಯವರು ಸಾರ್ವಜನಿಕರು ಪೊಲೀಸರಿಗೆ ಸಹಕಾರ ಕೊಟ್ಟಿರುವುದರಿಂದ ಇದು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಗಣೇಶ ಮಹಾಮಂಡಳಿಯವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಪದಾಧಿಕಾರಿಗಳ ಸಭೆ ನಂತರ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬದಲಾದ ಮೆರವಣಿಗೆ ಸ್ವರೂಪ

ಬೀದರ್‌ ನಗರದಲ್ಲಿ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಐದನೇ ದಿನಕ್ಕೆ ವಿಸರ್ಜನೆ ಮಾಡುವ ಸಂಪ್ರದಾಯ ಅನೇಕ ದಶಕಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ದಶಕದಿಂದ ದಶಕಕ್ಕೆ ಅದರ ಸ್ವರೂಪದಲ್ಲಿ ಬದಲಾವಣೆ ಉಂಟಾಗುತ್ತಿದೆ. 70–80ರ ದಶಕದಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಲ್ಲಿ ದೇಶಭಕ್ತಿಯ ಸಿನಿಮಾಗಳನ್ನು ತೋರಿಸಲಾಗುತ್ತಿತ್ತು. ಪೌರಾಣಿಕ ನಾಟಕಗಳು ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಇನ್ನು 90ರ ದಶಕದ ನಂತರ ಯುವಕ/ಯುವತಿಯರ ಕೋಲಾಟ ಲೇಜಿಮ್‌ ಕತ್ತಿ ಹಾಗೂ ಲಾಠಿ ಪ್ರದರ್ಶನ ವಿವಿಧ ಕಲಾ ತಂಡಗಳು ಭೂತೇರ ನೃತ್ಯ ಹೀಗೆ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ನೋಡಬಹುದಿತ್ತು. ಆಯಾ ಗಣೇಶ ಮಂಡಳಿಯವರು ಪ್ರತ್ಯೇಕ ಡ್ರೆಸ್‌ ಕೋಡ್‌ ರೂಪಿಸಿಕೊಂಡು ಶಿಸ್ತಿನ ಸಿಪಾಯಿಗಳಂತೆ ಹೆಜ್ಜೆ ಹಾಕುತ್ತಿದ್ದರು. ರಾತ್ರಿ 9ಗಂಟೆಗೆ ನಯಾಕಮಾನ್‌ ಒಳಗಡೆ ಕ್ರಾಂತಿ ಗಣೇಶ ಮಂಡಳಿಯ ಗಣಪನ ಮೂರ್ತಿ ಪ್ರವೇಶಿಸಿದರೆ ಅದರ ಬಳಿಕ ಮತ್ಯಾವ ಮೂರ್ತಿಯ ಮೆರವಣಿಗೆ ಇರುವುದಿಲ್ಲ ಎಂಬ ಸಂದೇಶ ಹೋಗುತ್ತಿತ್ತು. ಅಷ್ಟರಮಟ್ಟಿಗೆ ಶಿಸ್ತು ಇತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದೆಲ್ಲ ಮಾಯವಾಗಿದೆ. ಈಗ ಶೇ 99ರಷ್ಟು ಗಣೇಶ ಮಂಡಳಿಯವರು ಡಿಜೆಗಳನ್ನು ತರಿಸುತ್ತಿದ್ದಾರೆ. ಇದಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕಲಾ ಪ್ರಕಾರಗಳಿಗೆ ಆಸ್ಪದವೇ ಇಲ್ಲದಂತಾಗಿದೆ. ‘ಹಿಂದೆ ಸಂಜೆಯಿಂದ ತಡರಾತ್ರಿ ವರೆಗೆ ಕುಟುಂಬ ಸಮೇತ ಕುಳಿತು ಮೆರವಣಿಗೆ ನೋಡುತ್ತಿದ್ದೆವು. ಈಗ ಆ ಪರಿಸ್ಥಿತಿ ಇಲ್ಲ. ಡಿಜೆಯಿಂದ ಸಿನಿಮಾ ಹಾಡು ಹಾಕಿ ಮನಬಂದಂತೆ ಕುಣಿಯುತ್ತಾರೆ. ಹೃದಯ ಕಾಯಿಲೆ ನವಜಾತ ಶಿಶುಗಳು ಹಿರಿಯ ವಯಸ್ಸಿನ ನಾಗರಿಕರಿಗೆ ಇದರಿಂದ ಬಹಳ ಸಮಸ್ಯೆ ಆಗುತ್ತಿದೆ. ಗಣೇಶ ಮಹಾಮಂಡಳಿಯಲ್ಲಿ ಅನೇಕ ಹಿರಿಯರಿದ್ದಾರೆ. ಇದರ ಬಗ್ಗೆ ಒಂದು ಸಲ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಸಂಭ್ರಮ ಬೇರೆಯವರ ನೆಮ್ಮದಿ ಕಸಿಯಬಾರದು’ ಎಂದು ಸ್ಥಳೀಯ ನಿವಾಸಿ ವೀರಭದ್ರಪ್ಪ ಅಭಿಪ್ರಾಯ ಪಟ್ಟರು.

ಪೊಲೀಸರ ಚಿಂತೆಗೇನು ಕಾರಣ?

ಹಿಂದಿನಿಂದಲೂ ಗಣೇಶನ ಮೂರ್ತಿಗಳ ಮೆರವಣಿಗೆ ನಗರದ ಓಲ್ಡ್‌ ಸಿಟಿ ಮೂಲಕ ಹಾದು ಹೋಗುತ್ತದೆ. ನಯಾ ಕಮಾನ್‌ನಿಂದ ಚೌಬಾರ ಮಹಮೂದ್‌ ಗವಾನ್‌ ವೃತ್ತ ಶಹಾಗಂಜ್‌ ಮೂಲಕ ಮಾಂಜ್ರಾ ನದಿಗೆ ಹೋಗುತ್ತದೆ. ನಯಾ ಕಮಾನ್‌ನಿಂದ ಶಹಾಗಂಜ್‌ ತನಕ ರಸ್ತೆಯುದ್ದಕ್ಕೂ ಅನೇಕ ಮಸೀದಿಗಳಿವೆ. ಸಂಭ್ರಮಾಚರಣೆಯಲ್ಲಿ ಮುಳುಗಿದ ಯುವಕರಿಂದ ಸಣ್ಣ ಪ್ರಮಾಣದ ತಪ್ಪಾದರೂ ದೊಡ್ಡ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ ಪೊಲೀಸರು ಹೆಚ್ಚಿನ ಜಾಗೃತೆ ವಹಿಸಿದ್ದರು. ಯಾರಿಂದಲೂ ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡದಂತೆ ವ್ಯವಸ್ಥೆ ಮಾಡಿದ್ದರು. ಮಸೀದಿಗಳ ಬಳಿಯಂತೂ ಪೊಲೀಸರು ಟೆಂಟ್‌ಗಳನ್ನು ಹಾಕಿಕೊಂಡು ಠಿಕಾಣಿ ಹೂಡಿದ್ದರು. ಮಾರ್ಗದುದ್ದಕ್ಕೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಹದ್ದಿನ ಕಣ್ಣುಇಟ್ಟಿದ್ದರು. ಆದರೆ ಇದುವರೆಗೆ ನಡೆದ ಮೆರವಣಿಗೆ ಸಂದರ್ಭದಲ್ಲಿ ಎಂದೂ ಅಹಿತಕರ ಘಟನೆಗಳು ನಡೆದಿಲ್ಲ. 

ಪರಿಸ್ಥಿತಿ ಸೂಕ್ಷ್ಮವಾಗಿ ನಿಭಾಯಿಸಿದ ಎಸ್ಪಿ

ಮಧ್ಯರಾತ್ರಿ 12ರಿಂದ ತಡರಾತ್ರಿ 3ರ ವರೆಗೆ ಚೌಬಾರದಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಹರಳಯ್ಯಾ ವೃತ್ತದ ವರೆಗೆ ಗಣೇಶನ ಮೂರ್ತಿಗಳೊಂದಿಗೆ ರಸ್ತೆಯಲ್ಲಿ ಕುಳಿತು ಗಣೇಶ ಮಂಡಳಿಯವರು ಧರಣಿ ನಡೆಸಿದ್ದರಿಂದ ಎಲ್ಲೆಡೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಚೀರಾಟ ಕೂಗಾಟ ಹೆಚ್ಚಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ಮನವೊಲಿಸಲು ಬಂದಾಗ ಇದು ಇನ್ನಷ್ಟು ಹೆಚ್ಚಾಗುತ್ತಿತ್ತು. ಏನಾಗುತ್ತದೋ ಎಂದು ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದರು. ಕೆಲವರು ಅಲ್ಲಿಂದ ಮನೆಗಳಿಗೆ ಮುಖ ಮಾಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ಹರಳಯ್ಯಾ ವೃತ್ತದಿಂದ ಚೌಬಾರದಿಂದ ವರೆಗೆ ಕಾಲ್ನಡಿಗೆಯಲ್ಲಿ ಸಿಬ್ಬಂದಿಯೊಂದಿಗೆ ಬಂದು ಪರಿಸ್ಥಿತಿ ಅವಲೋಕಿಸಿದರು. ‘ನಿಮಗೆ ಕೊಟ್ಟ ಸಮಯ ಮುಗಿದಿದೆ. ಎಲ್ಲರೂ ಗಣೇಶನ ಮೂರ್ತಿಗಳನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗಬೇಕು.ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಡಿಜೆಗೆ ಅವಕಾಶ ಕಲ್ಪಿಸುವುದಿಲ್ಲ. ಸಾರ್ವಜನಿಕರಿಗೆ ಕಿರಿಕಿರಿ ಕೊಡುವುದು ಸರಿಯಲ್ಲ. ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು. ಕೆಲವರು ಅವರ ಮಾತಿಗೆ ಗೌರವ ಕೊಟ್ಟು ಧರಣಿ ಬಿಟ್ಟು ತೆರಳಿದರು. ಆನಂತರ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಮಿಕ್ಕುಳಿದ ಗಣೇಶ ಮಂಡಳಿಯವರನ್ನು ಅಲ್ಲಿಂದ ಕಳಿಸಿದರು. ಈ ವೇಳೆ ಯುವಕರ ಗುಂಪು ಅಲ್ಲಲ್ಲಿ ಅವರಿಗೆ ಸುತ್ತುವರಿದು ‘ಜೈ ಶ್ರೀರಾಮ್‌’ ಎಂದು ಘೋಷಣೆಗಳನ್ನು ಹಾಕಿದರು. ಆದರೆ ಎಳ್ಳಷ್ಟೂ ಸಂಯಮ ಕಳೆದುಕೊಳ್ಳದೆ ಎಸ್ಪಿ ಬುದ್ಧಿವಾದ ಹೇಳಿ ಕಳಿಸಿಕೊಟ್ಟರು. ಕೈಮೀರಿ ಹೋಗುತ್ತಿದ್ದ ಪರಿಸ್ಥಿತಿಯನ್ನು ಎಸ್ಪಿಯವರು ಸೂಕ್ಷ್ಮವಾಗಿ ನಿಭಾಯಿಸಿ ನಸುಕಿನ ಜಾವ ವಾತಾವರಣ ತಿಳಿಯಾಗಿಸಿದ್ದನ್ನು ನೋಡಿ ಅಲ್ಲಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಸಿದು ಬಿದ್ದ ವಾಹನ ಚಾಲಕ

ಚೊಂಡಿ ಗಲ್ಲಿ ಗಣೇಶ ಮಂಡಳಿಗೆ ಸೇರಿದ ಗಣೇಶನ ಮೂರ್ತಿ ಹೊತ್ತು ತಂದಿದ್ದ ವಾಹನ ಚಾಲಕ ಕುಸಿದು ಬಿದ್ದಾಗ ಅಲ್ಲಿದ್ದವರು ಕೆಳಗಿಳಿಸಿದರು

ಚೌಬಾರ ಬಳಿ ಚೊಂಡಿ ಗಲ್ಲಿ ಗಣೇಶ ಮಂಡಳಿಯ ಡಿಜೆ ಬಂದ್‌ ಮಾಡಿಸಿದ ಪೊಲೀಸರ ವಿರುದ್ಧ ಮಂಡಳಿಯ ಕಾರ್ಯಕರ್ತರು ಧರಣಿ ಆರಂಭಿಸಿದರು. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಇನ್ನೊಂದೆಡೆ ಗಣೇಶನ ಮೂರ್ತಿ ಹೊತ್ತಿದ್ದ ಲಾರಿಯ ಚಾಲಕ ಏಕಾಏಕಿ ಕುಸಿದು ಬಿದ್ದ. ಅಲ್ಲಿದ್ದವರು ತಕ್ಷಣವೇ ಗಮನಿಸಿ ಅವರ ನೆರವಿಗೆ ಧಾವಿಸಿದರು. ಲಾರಿಯ ಎಂಜಿನ್‌ ಬಂದ್‌ ಮಾಡಿ ಚಾಲಕನನ್ನು ಕೊಂಡೊಯ್ದು ಉಪಚರಿಸಲಾಯಿತು. ‘ತಡಹೊತ್ತು ಲಾರಿ ಚಾಲನೆ ಮಾಡಿದ್ದು ಹಾಗೂ ಫಿಟ್ಸ್‌ನಿಂದ ಚಾಲಕ ಕುಸಿದು ಬಿದ್ದಿದ್ದರು. ಪ್ರಾಥಮಿಕ ಉಪಾಚಾರದ ನಂತರ ಸುಧಾರಿಸಿಕೊಂಡಿದ್ದಾರೆ’ ಎಂದು ಮಂಡಳಿಯ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಿವಿಯಲ್ಲಿ ಬೆರಳು ಹತ್ತಿ

ಬಹುತೇಕ ಗಣೇಶ ಮಂಡಳಿಯವರು ಗಣಪನ ಮೂರ್ತಿಗಳೊಂದಿಗೆ ಬೃಹತ್‌ ಡಿಜೆಗಳೊಂದಿಗೆ ಮೆರವಣಿಗೆಯಲ್ಲಿ ಬಂದಿದ್ದರು. ಡಿಜೆ ಸದ್ದಿಗೆ ಅಕ್ಕಪಕ್ಕದ ವಸ್ತುಗಳು ಅಲುಗಾಡುತ್ತಿದ್ದವು. ಅಷ್ಟರಮಟ್ಟಿಗೆ ಅವುಗಳ ಶಬ್ದ ಹೆಚ್ಚಿತ್ತು. ಒಟ್ಟಿಗೆ ನಾಲ್ಕೈದು ಡಿಜೆಗಳು ಒಂದೆಡೆ ಸೇರಿದಾಗ ಶಬ್ದ ಇನ್ನಷ್ಟು ಹೆಚ್ಚಾಗಿತ್ತು. ಇದನ್ನು ತಾಳಿಕೊಳ್ಳದೆ ಜನ ಕಿವಿಯಲ್ಲಿ ಬೆರಳು ಇಟ್ಟುಕೊಂಡರು. ಕೆಲವರು ಕಿವಿಯೊಳಗೆ ಹತ್ತಿ ಮತ್ತೆ ಕೆಲವರು ಹಗುರವಾದ ಬಟ್ಟೆಗಳನ್ನು ಕಿವಿಗೆ ಸುತ್ತುಕೊಂಡರು. ಮಕ್ಕಳು ಹಿರಿಯರೊಂದಿಗೆ ಬಂದಿದ್ದವರು ಅಲ್ಲಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.