ಶುಂಠಿ ಬೆಳೆ ಸಂರಕ್ಷಣೆ ತರಬೇತಿ ಇಂದು
ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ (ಆಗಸ್ಟ್ 19) ಬೆಳಿಗ್ಗೆ 11ಕ್ಕೆ ಶುಂಠಿ ಬೆಳೆ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೋಷಕಾಂಶ ಕೊರತೆ ನಿವಾರಣೆ, ಬೆಳೆಗಳ ನಿರ್ವಹಣೆ, ಸದ್ಯದ ಪರಿಸ್ಥಿತಿಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲ ಕುಲಕರ್ಣಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಹಾಗೂ ತೋಟಗಾರಿಕೆ ವಿಜ್ಞಾನಿ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ಅವರು ಮಾಹಿತಿ ನೀಡಲಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹೇಳಿಕೆ ತಿಳಿಸಿದೆ.
***
ರಾಷ್ಟ್ರ ಸಮಿತಿಗೆ ವರ್ಮಾ ನೇಮಕ
ಬೀದರ್: ಕರ್ನಾಟಕ ರಾಷ್ಟ್ರ ಸಮಿತಿಯ ಬೀದರ್ ಜಿಲ್ಲಾ ಸಂಚಾಲಕರಾಗಿ ದಿಲೀಪಕುಮಾರ ವರ್ಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿಯ ಹೇಳಿಕೆ ತಿಳಿಸಿದೆ.
***
ಸಾಯಿ ಕಾಲೊನಿಯಲ್ಲಿ ಕೋವಿಡ್ ಲಸಿಕಾಕರಣ
ಬೀದರ್: ನಗರದ ವಾರ್ಡ್ ಸಂಖ್ಯೆ 18 ರ ವ್ಯಾಪ್ತಿಯ ಸಾಯಿ ಕಾಲೊನಿಯ ಸಾಯಿ ಮಂದಿರದಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ನಡೆಯಿತು.
ನಗರಸಭೆ ಸದಸ್ಯೆ ಉಲ್ಲಾಸಿನಿ ವಿಕ್ರಮ ಮುದಾಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಅರ್ಹರಿಗೆ ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ನೀಡಿದರು.
ಯುವ ಮುಖಂಡ ವಿಕ್ರಮ ಮುದಾಳೆ, ನಗರಸಭೆ ಸಿಬ್ಬಂದಿ ರವೀಂದ್ರ, ಕಾಲೊನಿಯ ಗಣ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.