ಬೀದರ್: ‘ಸಾಮಾನ್ಯ ಕಾರ್ಯಕರ್ತನಾಗಿ 35 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಿಜೆಪಿ ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ಘೋಷಿಸಿದೆ. ಜನ ಸೇವೆ ಮಾಡಲು ಒಂದು ಬಾರಿ ಅವಕಾಶ ಕಲ್ಪಿಸಬೇಕು’ ಎಂದು ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಮತದಾರರಲ್ಲಿ ಮನವಿ ಮಾಡಿದರು.
’ಬಜರಂಗ ದಳದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದೇನೆ. ಪಕ್ಷ ವಹಿಸಿದ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಈ ಜನ ಸೇವೆ ಮಾಡಲು ಉತ್ಸುಕನಾಗಿದ್ದೇನೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ನಾನು ರಾಜಕೀಯ ಹಿನ್ನೆಲೆಯಿಂದ ಬಂದಿಲ್ಲ. ಸಾಮಾನ್ಯ ಶಿಕ್ಷಕ ಕುಟುಂಬದಿಂದ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದಿರುವೆ. ನನಗೆ ಟಿಕೆಟ್ ನೀಡಿದ ಸಂಸದೀಯ ಮಂಡಳಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯ ಘಟಕದ ಅಧ್ಯಕ್ಷರಿಗೆ ಋಣಿಯಾಗಿದ್ದೇನೆ. ಬೀದರ್ ಜನತೆಗೆ ದಿನದ 24 ಗಂಟೆಯೂ ಸೇವೆ ಒದಗಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
ಶಶಿಧರ ಹೊಸಳ್ಳಿ ಮಾತನಾಡಿ, ‘ಈಶ್ವರಸಿಂಗ್ ಅವರು ಬಜರಂಗ ದಳದಲ್ಲಿ ಕೆಲಸ ಮಾಡಿದ್ದಾರೆ. ಹಿಂದೂಗಳಿಗೆ ಸೇವೆ ನೀಡಲು ಚುನಾವಣೆಗೆ ಸ್ಪರ್ಧಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಓಲ್ಡ್‌ಸಿಟಿಯಲ್ಲಿ ಮಹಮೂಬದ್ ಗವಾನ ಸ್ಮಾರಕದ ಬಳಿ ಪೂಜೆ ಸಲ್ಲಿಸಿಲು ಹೋದ ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಲು ಬೀದರ್ ಶಾಸಕ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಅಂತಹ ಘಟನೆಗಳು ಮರಕಳಿಸದಂತೆ ನೋಡಿಕೊಳ್ಳಲು ಈಶ್ವರ ಸಿಂಗ್ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೋಮನಾಥ ಪಾಟೀಲ, ಚಂದ್ರಶೇಖರ ಗಾದಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.