ADVERTISEMENT

ರಾಯಚೂರಿಗೆ ಏಮ್ಸ್‌, ಬೀದರ್‌ಗೆ ಐಐಟಿ ಕೊಡಿ: ಲಕ್ಷ್ಮಣ್‌ ದಸ್ತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 16:04 IST
Last Updated 12 ಜುಲೈ 2024, 16:04 IST
ಲಕ್ಷ್ಮಣ್‌ ದಸ್ತಿ
ಲಕ್ಷ್ಮಣ್‌ ದಸ್ತಿ   

ಬೀದರ್‌: ‘ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ ಏಮ್ಸ್‌ ಹಾಗೂ ಬೀದರ್‌ ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ್‌ ದಸ್ತಿ ಆಗ್ರಹಿಸಿದರು.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂತಹ ಆರೋಗ್ಯ ಸೌಕರ್ಯಗಳಿಲ್ಲ. ಪ್ರತಿಯೊಂದು ಚಿಕಿತ್ಸೆಗೆ ಹೈದರಾಬಾದ್‌, ಬೆಂಗಳೂರು, ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬೈಗೆ ಹೋಗಬೇಕಾದ ಪರಿಸ್ಥಿತಿ ಇದೆ. ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಿದರೆ ಈ ಭಾಗದವರಿಗೆ ಅನುಕೂಲವಾಗುತ್ತದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಏಮ್ಸ್‌ಗೆ ಆಗ್ರಹಿಸಿ ಆಗಸ್ಟ್‌ 6ರಿಂದ 12ರ ವರೆಗೆ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಭಾಗದವರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರೆ, ಕಲ್ಯಾಣ ಕರ್ನಾಟಕದ ಸಂಸದರು ಸಂಸತ್ತಿನೊಳಗೆ ದನಿ ಎತ್ತಬೇಕು. ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ನವದೆಹಲಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರು ಈ ಭಾಗದ ನೂತನ ಸಂಸತ್‌ ಸದಸ್ಯರ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಅಲ್ಲಿ ರಾಯಚೂರಿನ ಏಮ್ಸ್‌, ಬೀದರ್‌ಗೆ ಐಐಟಿ ಮಂಜೂರು ಮಾಡಿಸುವುದು, ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಪ್ರಲ್ಹಾದ್‌ ಜೋಶಿ ಕುತಂತ್ರ: ‘ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಾದ ಅನೇಕ ಸವಲತ್ತುಗಳನ್ನು ಧಾರವಾಡ–ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಿದ್ದಾರೆ. ನವದೆಹಲಿಯಲ್ಲಿ ಉತ್ತರ ಕರ್ನಾಟಕ ಎಂದು ದಾರಿ ತಪ್ಪಿಸಿ, ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಾದ ಸೌಕರ್ಯಗಳನ್ನು ವಂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಅವರು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಈ ಸಂಬಂಧ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ಪ್ರಲ್ಹಾದ್‌ ಜೋಶಿ ಅವರು ಮಾಡುತ್ತಿರುವ ಕುತಂತ್ರದ ಬಗ್ಗೆ ಮನವರಿಕೆ ಮಾಡಲಾಗುವುದು. ಇದರಿಂದ ನ್ಯಾಯ ಸಿಗದಿದ್ದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಯಚೂರು ಜಿಲ್ಲೆ ಏಮ್ಸ್‌ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಪ್ರಮುಖರಾದ ಡಾ. ರಜನೀಶ್‌ ವಾಲಿ, ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.