ADVERTISEMENT

ಡೇವಿಡ್‌ ಸಿಮಿಯೋನ್‌ಗೆ ಪರಿಷತ್ತಿಗೆ ನಾಮನಿರ್ದೇಶನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:02 IST
Last Updated 25 ಮೇ 2024, 16:02 IST
ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಮುಖಂಡರು ಬೀದರ್‌ನಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು
ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಮುಖಂಡರು ಬೀದರ್‌ನಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು   

ಬೀದರ್‌: ‘ವಿಧಾನ ಪರಿಷತ್‌ ಮಾಜಿ ಸಭಾಪತಿ ಡೇವಿಡ್‌ ಸಿಮಿಯೋನ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು’ ಎಂದು ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್‌ ಬಾಬು ಪಾತರಪಳ್ಳಿ ಒತ್ತಾಯಿಸಿದರು.

‘ಡೇವಿಡ್‌ ಸಿಮಿಯೋನ್‌ ಅವರು ಕಲ್ಯಾಣ ಕರ್ನಾಟಕ ಭಾಗದ ಕ್ರೈಸ್ತರ ದೊಡ್ಡ ಆಸ್ತಿ. ಅವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಿದರೆ ಸಮಾಜಕ್ಕೆ ಪ್ರಾಶಸ್ತ್ಯ ನೀಡಿದಂತಾಗುತ್ತದೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ರಿಂದ7 ಲಕ್ಷ ಕ್ರೈಸ್ತರಿದ್ದಾರೆ. ಸ್ವಾತಂತ್ರ್ಯಾ ನಂತರ ಕ್ರೈಸ್ತರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಿದ್ದಾರೆ. ಕ್ರೈಸ್ತರ ಮತಗಳನ್ನು ಪಡೆದು ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಪಕ್ಷದಲ್ಲಾಗಲಿ, ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಇದರಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

1978ರಲ್ಲಿ ದಿವಂಗತ ಆರ್.ಎಸ್.ಮನೋಹರ್‌ ಅವರನ್ನು ವಿಧಾನ ಪರಿಷತ್ತಿಗೆ ಕಾಂಗ್ರೆಸ್‌ ನಾಮಕರಣ ಮಾಡಿತ್ತು. ಅಂದಿನಿಂದ ಇಂದಿನವರೆಗೆ ಕ್ರೈಸ್ತರಿಗೆ ಅನ್ಯಾಯವಾಗಿದೆ. ಆದಕಾರಣ ಈ ಸಲ ಡೇವಿಡ್‌ ಸಿಮಿಯೋನ್‌ ಅವರಿಗೆ ಆದ್ಯತೆ ಮೇರೆಗೆ ಎಂಎಲ್‌ಸಿ ಮಾಡಿ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಡೇವಿಡ್‌ ಸಿಮಿಯೋನ್‌ ಅವರು ಸುದೀರ್ಘ 47 ವರ್ಷ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿ, ಅಪಾರ ಅನುಭವ ಗಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ರಾಜಕಾರಣಿ ಹಿರಿಯರ ಮನೆಗೆ ಹೋದರೆ ಅದಕ್ಕೆ ನ್ಯಾಯ ಒದಗಿಸಿಕೊಡುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾ ಸಂಘ-ಸಂಸ್ಥೆಗಳ ವೇದಿಕೆ ಅಧ್ಯಕ್ಷ ಎಂ.ಎಸ್. ಶಿರೋಮಣಿ, ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ಮುಖಂಡರಾದ ಮಾಣಿಕ್‌ ಕೌಠಾ, ಸುಕೀರ್ತಾ ವಗ್ಗೆ, ಸಂತೋಷ ಸುಂದರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.