ಭಾಲ್ಕಿ: ಅಂಗವಿಕಲರಿಗೆ ಅನುಕಂಪ, ಕರುಣೆಯ ಅಗತ್ಯವಿಲ್ಲ. ಬದಲಾಗಿ ಅವಕಾಶ ಕಲ್ಪಿಸುವ ಅಗತ್ಯತೆಯಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ.ಎಸ್. ರಾಜಣ್ಣ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ. ಅದಕ್ಕೆ ನನಗೆ ಪದ್ಮಶ್ರೀ ಪುರಸ್ಕಾರ ಲಭಿಸಿರುವುದು ಸಾಕ್ಷಿಯಾಗಿದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ತೋರಲು ತಮ್ಮಲ್ಲಿರುವ ಬುದ್ಧಿವಂತಿಕೆ ಪ್ರದರ್ಶಿಸಬೇಕು. ಬುದ್ಧಿವಂತಿಕೆ ಇದ್ದರೆ ಎಲ್ಲವನ್ನು ಮೀರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲರಿಗೂ ಪದ್ಮಭೂಷಣ, ಪದ್ಮಶ್ರೀ ಸೇರಿ ದೇಶದ ಅತ್ಯುನ್ನತ ಪ್ರಶಸ್ತಿ ಪಡೆಯುವ ಅರ್ಹತೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು’ ಎಂದರು.
‘ತಂದೆ ತಾಯಿಗಳನ್ನು ದೇವರ ಸ್ವರೂಪದಲ್ಲಿ ಕಾಣಬೇಕು. ಇನ್ನೊಬ್ಬರ ನೋವು ಅರ್ಥೈಸಿಕೊಂಡು ಕೆಲಸ ಮಾಡುವವರು ನಿಜವಾದ ಶರಣರು. ಈ ಭಾಗದಲ್ಲಿ ಬಸವಲಿಂಗ ಪಟ್ಟದ್ದೇವರು ಶಿಕ್ಷಣದ ಜತೆಗೆ ಎಲ್ಲರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪ್ರಾಚಾರ್ಯ ಬಸವರಾಜ ಮೊಳಕೀರೆ,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಗುತ್ತಿಗೆದಾರ ಜೋತಿಷ ಹಲಬರ್ಗೆ, ವಕೀಲ ನೀಲಕಂಠ ಬಿರಾದಾರ, ಭಾಗ್ಯಲಕ್ಷ್ಮಿ ರಾಜಣ್ಣ, ಮನು ಪ್ರಸಾದ, ಸಿಬಿಎಸ್‍ಇ ಪ್ರಾಚಾರ್ಯ ರಾಜು, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ, ಮುಖ್ಯಶಿಕ್ಷಕ ಮಹೇಶ ಕುಲಕರ್ಣಿ, ಮಧುಕರ ಗಾಂವಕರ್ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಇದ್ದರು.
ಬಸವಕಲ್ಯಾಣ ಅನುಭವ ಮಂಟಪ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರಾಜ್ಯ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸು ಮಾಡಲಾಗುವುದುಡಾ.ಕೆ.ಎಸ್.ರಾಜಣ್ಣ, ಪದ್ಮಶ್ರೀ ಪುರಸ್ಕೃತ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.