ADVERTISEMENT

ಬೀದರ್‌: ಸಂಭ್ರಮ, ಸಡಗರದಿಂದ ನಡೆದ ಜಗನ್ನಾಥ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 11:13 IST
Last Updated 7 ಜುಲೈ 2024, 11:13 IST
<div class="paragraphs"><p>ಸಡಗರ, ಸಂಭ್ರಮದಿಂದ ಜರುಗಿದ ಜಗನ್ನಾಥ ರಥಯಾತ್ರೆ</p></div>

ಸಡಗರ, ಸಂಭ್ರಮದಿಂದ ಜರುಗಿದ ಜಗನ್ನಾಥ ರಥಯಾತ್ರೆ

   

ಬೀದರ್‌: ನಗರದಲ್ಲಿ ಭಾನುವಾರ ಜೈ ಜಗನ್ನಾಥ ದೇವರ ರಥಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು.

ನಗರದ ರಾಂಪೂರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಥಯಾತ್ರೆಯಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಆನಂತರ ಶ್ರದ್ಧಾ, ಭಕ್ತಿಯಿಂದ ರಥಯಾತ್ರೆ ನಡೆಯಿತು. ನಗರದ ರಾಂಪೂರೆ ಕಾಲೊನಿ ಬಸವೇಶ್ವರ ವೃತ್ತ, ಬಿ.ವಿ. ಭೂಮರಡ್ಡಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗವಾನ್‌ ಮಹಾವೀರ ವೃತ್ತ, ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಚಿಕ್ಕಪೇಟೆ ರಿಂಗ್‌ರೋಡ್‌ ನಿಂದ ಜಗನ್ನಾಥ ಮಂದಿರದವರೆಗೆ ರಥಯಾತ್ರೆ ನಡೆಯಿತು. 

ADVERTISEMENT

ಯುವಕ/ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ರಥಯಾತ್ರೆಯಲ್ಲಿ ಭಾಗವಹಿಸಿ ತೇರು ಎಳೆದರು. ಭಕ್ತಿಯಿಂದ ರಥಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು. ಯುವಕರು ಶ್ವೇತ ವರ್ಣದ ಕುರ್ತಾ ಪೈಜಾಮ ಧರಿಸಿ ಗಮನ ಸೆಳೆದರೆ, ಮಹಿಳೆಯರು ಕೇಸರಿ ವರ್ಣದ ಸೀರೆಗಳಿಂದ ಕಂಗೊಳಿಸಿದರು. ರಥಯಾತ್ರೆಯುದ್ದಕ್ಕೂ ‘ಜೈ ಜಗನ್ನಾಥ’ ಘೋಷಣೆಗಳು ಮೊಳಗಿದವು. 

ರಥಯಾತ್ರೆ ಸಾಗಿದ ಮಾರ್ಗದಲ್ಲಿ ಪುಣೆಯ ಕಲಾವಿದರು ವಿಶೇಷ ರೀತಿಯಲ್ಲಿ ರಂಗೋಲಿ ಬಿಡಿಸಿದ್ದರು. ಪ್ರಮುಖ ವೃತ್ತಗಳಲ್ಲಿ ನಗರದ ವ್ಯಾಪಾರಸ್ಥರು, ಭಕ್ತಾದಿಗಳು ಪಾನೀಯ ಮತ್ತು ಪ್ರಸಾದ ವಿತರಿದರು. ಹೋದ ಸಲ ಹೈದರಾಬಾದ್‌ನಿಂದ ರಥ ತರಿಸಲಾಗಿತ್ತು. ಈ ಸಲ ಬೀದರ್‌ನಲ್ಲಿಯೇ ನಿರ್ಮಿಸಿದ ಹೈಡ್ರಾಲಿಕ್‌ ವ್ಯವಸ್ಥೆಯ ರಥದಲ್ಲಿ ಯಾತ್ರೆ ನಡೆಯಿತು. 

ರಥಯಾತ್ರೆ ನಂತರ ಜೈ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿ ಪ್ರತಿ ವರ್ಷ ನಡೆಯುವ ಜಗನ್ನಾಥ ರಥಯಾತ್ರೆ ಸಂದರ್ಭದಲ್ಲಿ ನಗರದಲ್ಲಿ ರಥಯಾತ್ರೆ ನಡೆಸಲಾಗುತ್ತಿದೆ. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣನ್‌ ಸಾಳೆ, ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ಅಧ್ಯಕ್ಷ ನೀಲೇಶ ದೇಶಮುಖ, ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಕಾರ್ಯದರ್ಶಿ ಶಿವರಾಮ ಜೋಶಿ, ಕಾರ್ಯಕ್ರಮದ ಸಂಯೋಜಕ ರಾಜಕುಮಾರ ಅಳ್ಳೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.