ADVERTISEMENT

ಬೇಲೂರಿನಲ್ಲಿ ಜನಮನ ಸೆಳೆದ ಜಂಬೂ ಸವಾರಿ

ಉತ್ಸವಕ್ಕೆ ಕಲಾತಂಡಗಳ ಮೆರುಗು: ಶಾಸಕ ಶರಣು ಸಲಗರರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:38 IST
Last Updated 17 ಅಕ್ಟೋಬರ್ 2024, 15:38 IST
ಭವಾನಿ ದೇವಿಗೆ ಅಲಂಕಾರ.
ಭವಾನಿ ದೇವಿಗೆ ಅಲಂಕಾರ.   

ಹುಲಸೂರ: ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಜೈ ಭವಾನಿ ದೇವಿಯ ಅಂಬಾರಿಯನ್ನು ಹೊತ್ತ ಆನೆಯು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆ ಗ್ರಾಮದ ಬೀದಿ - ಬೀದಿಗಳಲ್ಲಿ ಸಂಚರಿಸಿ 77 ನೇ ವರ್ಷದ ಪಲ್ಲಕ್ಕಿ ಉತ್ಸವ ಗುರುವಾರ ತೆರೆಕಂಡಿತು.

ಕಾರ್ಯಕ್ರಮಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿ, 'ಜೈ ಭವಾನಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆ ರೀತಿಯೇ ನಮ್ಮ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಯುತ್ತಿರುವುದು ಈ ಭಾಗದ ಜನರ ಪುಣ್ಯವಾಗಿದೆ. ಆ ದೇವಿಯ ಸಕಲ ಭಕ್ತರ ಕಷ್ಟವನ್ನು ಪರಿಹರಿಸಿ ಮಳೆ ಬೆಳೆ ನೀಡಿ ಆಶೀರ್ವದಿಸಲಿ ಎಂದರು.

ಅಂಬಾರಿ ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಹೂವು ಮತ್ತು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಸಿದ್ದಗೊಳಿಸಿದ್ದ ಅಂಬಾರಿಗೆ ಕೊಂಡೊಯ್ಯಲಾಯಿತು. ಮೆರವಣಿಗೆಯನ್ನು ನೋಡಲು ಭಕ್ತಾದಿಗಳು ದೂರದ ಊರುಗಳಿಂದ ಆಗಮಿಸಿ ಸಂಬಂಧಿಕರ ಮನೆಯಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿದ್ದರು.

ADVERTISEMENT

ವಿಶೇಷ ಆಕರ್ಷಣೆ : ಆನೆಯ ಮೇಲೆ ಅಮ್ಮನವರ ಮೆರವಣಿಗೆ ಜತೆಯಲ್ಲಿ ವೀರಗಾಸೆ ಕುಣಿತ, ಕೇರಳದ ಚಂಡಿ ವಾದ್ಯ, ಮಹಾರಾಷ್ಟ್ರದ ಡೋಲ ತಾಷಾ ವಾದ್ಯ, ಮೈಸೂರಿನ ನಂದಿ ಧ್ವಜ, ಸೋಮನ ಕುಣಿತ, ತಮಟೆ, ಮಂಡ್ಯದ ಪೂಜಾ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಟ್ಟಿಗೆ ಆನೆಯ ಮೆರವಣಿಗೆ ಸಾಗಿತು. ಈ ವೇಳೆ ಅನ್ನದಾಸೋಹ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳು ನಡೆದವು.

ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳು, ಅಟಿಕೆ ಸಾಮಗ್ರಿಗಳ ಅಂಗಡಿಗಳನ್ನು ಜೋಡಿಸಲಾಗಿತ್ತು. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಹುಲಸೂರ ಪೊಲೀಸ್‌ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಿಸಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಾನಂದ ಮೇತ್ರಿ, ಗಡಿಗೌಡಗಾಂವನ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಕರುಣಾಬಾಯಿ ದೇವೇಂದ್ರ ಪರೆಪ್ಪ, ಸೂರ್ಯಕಾಂತ ಚೆಲ್ಲಾಬಟ್ಟೆ, ರಾಮಲಿಂಗ ಸಾಗಾವೆ, ಪಪ್ಪು ಉದಾನೆ, ರಾಮಣ್ಣ ಹುಲಸೂರೆ, ಸಂತೋಷ್ ಶೀಡೊಳೆ, ಹೂಳೆಪ್ಪ ವಗ್ಗೆ, ಶಾಲಿವನ ಸತಾನೆ , ಶರಣಪ್ಪಾ ಜಲ್ಪೆ, ಕಾಮಣ್ಣ ಬಾಗ,ಬಸವರಾಜ್ ಗುಂಗೆ, ಉದಯ ರಾಜೋಳೆ, ಶಿವಕುಮಾರ ಹತ್ತೆ,ಮಲ್ಲಿಕಾರ್ಜುನ್ ಬರಗಾಲೆ, ಸಂತೋಷ್ ಚೆಲ್ಲಾಬಟ್ಟೆ , ಪ್ರಶಾಂತ ಚೆಲ್ಲಾಬಟ್ಟೆ,ರವಿ ಚೆಲ್ಲಾಬಟ್ಟೆ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಜೈ ಭವಾನಿ ದೇವಿಯ ಅಂಬಾರಿ ಹೊತ್ತ ಆನೆಯು ದೇವಾಲಯದಿಂದ ಹೊರಟಿತು
ಫೋಟೋ ಕ್ಯಾಪ್ಶನ್: ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಜೈ ಭವಾನಿ ದೇವಿಯ ಅಂಬಾರಿ ಹೊತ್ತ ಆನೆಯು ದೇವಾಲಯದಿಂದ ಹೊರಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.