ADVERTISEMENT

ಖಟಕಚಿಂಚೋಳಿ | ವಾರದಿಂದ ಉತ್ತಮ ಮಳೆ: ಎಲ್ಲೆಡೆ ಭರದಿಂದ ಸಾಗಿದೆ ಎಡೆಕುಂಟೆ ಕಾರ್ಯ

ಗಿರಿರಾಜ ಎಸ್ ವಾಲೆ
Published 4 ಜುಲೈ 2024, 5:35 IST
Last Updated 4 ಜುಲೈ 2024, 5:35 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ಎಡೆಕುಂಟೆ ಹೊಡೆಯುತ್ತಿರುವ ರೈತರು
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದಲ್ಲಿ ಎಡೆಕುಂಟೆ ಹೊಡೆಯುತ್ತಿರುವ ರೈತರು   

ಖಟಕಚಿಂಚೋಳಿ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಳೆದ ವಾರದಿಂದ ಮಳೆ ಸುರಿಯುತ್ತಿದೆ. ಮುಂಗಾರು ಬಿತ್ತನೆ ಮಾಡಿದ ರೈತರು ಎಡೆಕುಂಟೆ ಹೊಡೆಯುವುದರಲ್ಲಿ ತಲ್ಲೀನರಾಗಿದ್ದಾರೆ.

ಕಳೆದ ತಿಂಗಳು ಸುರಿದ ಮುಂಗಾರು ಮಳೆಯಿಂದ ಬಹುತೇಕ ರೈತರು ಸೋಯಾ, ಹೆಸರು ಉದ್ದು ಸೇರಿದಂತೆ ಇನ್ನಿತರ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಬೆಳಿಗ್ಗೆಯ ಸಮಯದಲ್ಲಿ ಮಳೆ ಬಿಡುವು ನೀಡುತ್ತಿರುವುದರಿಂದ ರೈತರು ಎಡೆಕುಂಟೆ ಹೊಡೆಯುತ್ತಿದ್ದಾರೆ.

‘ಬೆಳೆ ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಎಡೆಕುಂಟೆ ಹೊಡೆಯುತ್ತಾರೆ. ಆಗಾಗ ಬೀಳುತ್ತಿರುವ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಬೆಳೆಗಳ ನಡುವಿನ ಕಳೆಯನ್ನು ಎಡೆಕುಂಟೆ ಹೊಡೆಯುವ ಮೂಲಕ ನಾಶ ಪಡಿಸುತ್ತಾರೆ. ಹೀಗೆ ಎಡೆ ಕುಂಟೆ ಹೊಡೆಯುವಾಗ ಮಣ್ಣು ಬೆಳೆಗಳ ಬುಡಕ್ಕೆ ಹೋಗಿ ಬೀಳುತ್ತದೆ. ಇದರಿಂದ ಬೇರುಗಳು ದೃಢವಾಗಿ ನೇರವಾಗಿ ಬೆಳೆಯುತ್ತವೆ’ ಎಂದು ಹಿರಿಯರಾದ ಧನರಾಜ ತಿಳಿಸುತ್ತಾರೆ.

ADVERTISEMENT

ಹೆಚ್ಚು ಭೂಮಿ ಹೊಂದಿರುವ ರೈತರು ಎತ್ತುಗಳಿಂದ ಎಡೆ ಕುಂಟೆಯಲ್ಲಿ ತೊಡಗಿದರೆ, ಕಡಿಮೆ ಭೂಮಿಯ ರೈತರು ‘ಸೈಕಲ್  ವೀಡರ್’ ಬಳಸಿ ಎಡೆ ಕುಂಟೆ ಹೊಡೆಯುತ್ತಿದ್ದಾರೆ.

‘ಎತ್ತುಗಳನ್ನು ಬಳಸಿ ಎಡೆಕುಂಟೆ ಹೊಡೆಯಲು ಮೂರ್ನಾಲ್ಕು ಜನ ಬೇಕು. ಅಲ್ಲದೇ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ, ಬಾಡಿಗೆ ಎತ್ತುಗಳನ್ನು ಪಡೆದು ಕೃಷಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿತ್ತು. ರೈತರ ಇಂತಹ ಕಷ್ಟಗಳಿಗೆ ಸೈಕಲ್‌ ವೀಡರ್ ಎಡೆಕುಂಟೆ ಪರಿಹಾರವಾಗಿದೆ’ ಎಂದು ರೈತ ಅನಿಲ ಜಾಧವ್ ಸಂತಸ ವ್ಯಕ್ತಪಡಿಸುತ್ತಾರೆ.

ಒಂದೆರಡು ಎಕರೆಯಲ್ಲಿ ಬೆಳೆ ಬೆಳೆಯುವ ರೈತರಿಗೆ ಸೈಕಲ್‌ ವೀಡರ್ ಸಾಕಷ್ಟು ಪ್ರಯೋಜನ­ಕಾರಿ. ಸೈಕಲ್‌ ವೀಡರನ್ನು ಕಳೆಯ ಎತ್ತರ, ಭೂಮಿಯ ತೇವಾಂಶಕ್ಕೆ ಅನು­ಗುಣ­ವಾಗಿ ಬಳಸಿಕೊಳ್ಳಬಹುದು. ಬೆಳೆ ಬಿತ್ತನೆಯಾದ 20 ರಿಂದ 30 ದಿನ­ಗಳ ಅಂತರದಲ್ಲಿ ಸೈಕಲ್ ವೀಡರ್‌ನಿಂದ ಕಳೆ ತೆಗೆಯಬಹುದು ಎಂದು ಸಣ್ಣ ರೈತರಾದ ವೈಜಿನಾಥ, ರಮೇಶ, ಬದ್ರಿನಾಥ್ ತಿಳಿಸುತ್ತಾರೆ.

ಖಟಕಚಿಂಚೋಳಿ ಸಮೀಪದ ಡಾವರಗಾಂವ್ ಗ್ರಾಮದಲ್ಲಿ ಸೈಕಲ್ ವೀಡರ್‌ನಿಂದ ಎಡೆಕುಂಟೆ ಹೊಡೆಯುತ್ತಿರುವ ರೈತ
ಸಣ್ಣ ರೈತರಿಗೆ ಸೈಕಲ್ ವೀಡರ್ ಸಹಕಾರಿ ಗಗನಕ್ಕೇರಿದೆ ಕೂಲಿ ದರ; ಸಂಕಷ್ಟ
ಸೈಕಲ್ ವಿಡರ್ ಬಳಕೆಯಿಂದ ಸಣ್ಣ ರೈತರು ಬಾಡಿಗೆ ಹಣ ನೀಡಿ ಎತ್ತು ಕೂಲಿಕಾರ್ಮಿಕರನ್ನು ಹುಡುಕಾಡುವುದು ತಪ್ಪಿದೆ. ಸಮಯ ಸಿಕ್ಕಾಗ ಅವರೇ ಎಡೆ ಕುಂಟೆ ಹೊಡೆಯಬಹುದು
ರಾಜಶೇಖರ ಶೇರಿಕಾರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.