ADVERTISEMENT

ಸದಾಶಿವ ಆಯೋಗದ ವರದಿ: ಸಂಪುಟದಿಂದ ಸಚಿವ ಮುನಿಯಪ್ಪ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 10:46 IST
Last Updated 18 ನವೆಂಬರ್ 2023, 10:46 IST
   

ಬೀದರ್‌: ‘ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ.ಸದಾಶಿವ ಆಯೋಗದ ವರದಿಗೆ ಮರುಜೀವ ಕೊಡುವ ಕೆಲಸ ಮಾಡಬಾರದು. ದಲಿತರ ಐಕ್ಯತೆಗೆ ಭಂಗ ತಂದಿರುವ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಗೋರ ಸೇನಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಉತ್ತಮ ಜಾಧವ ಆಗ್ರಹಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಒಳಮೀಸಲಾತಿ ಪ್ರಕರಣಕ್ಕೆ ಕೈ ಹಾಕಿ ಹಿಂದಿನ ಬಿಜೆಪಿ ಸರ್ಕಾರವು ಕೈಸುಟ್ಟುಕೊಂಡು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದೆ. ಹಾಲಿ ಸರ್ಕಾರ ಒಳಮೀಸಲಾತಿಗೆ ಕೈ ಹಾಕಿದರೆ ಮುಂಬರುವ ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಒಳಮೀಸಲಾತಿಯಿಂದ ಬಂಜಾರ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಎಲ್ಲೋ ಒಂದು ಕಡೆ ಕುಳಿತುಕೊಂಡು ವರದಿ ಸಿದ್ಧಪಡಿಸಲಾಗಿದೆ. ಹಾಗಾಗಿ ಪುನಃ ಸಮೀಕ್ಷೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಸಚಿವ ಮುನಿಯಪ್ಪ ಅವರು ಒಂದು ಸಮಾಜಕ್ಕೆ ಸೇರಿದವರಲ್ಲ. ಜನರಿಂದ ಆಯ್ಕೆಯಾದವರು ಎಲ್ಲಾ ವರ್ಗದವರ ಹಿತ ಕಾಪಾಡಬೇಕು. ಮುಗ್ಧ ಜನರನ್ನು ಪ್ರಚೋದಿಸಿ ಎತ್ತಿ ಕಟ್ಟುವ ಕೆಲಸ ಮಾಡಬಾರದು. ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಅರಿಯಲು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ ನೇತೃತ್ವದಲ್ಲಿ ನಡೆದ ಜಾತಿ ಸಮೀಕ್ಷೆ ವರದಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಪ್ರಕಾರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜಾತಿ ಗಣತಿ ಮಾಡಿಸಬೇಕು. ಪ್ರತಿ ಜಾತಿಯಲ್ಲಿ ಬರುವ ಕುಟುಂಬಗಳ ಗಣತಿ ಮಾಡಿಸಬೇಕು. 1935ರಲ್ಲಿ ಈ ಕೆಲಸ ಆಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆದಿದೆ. ಆದರೆ, ಇದುವರೆಗೆ ವರದಿ ಬಿಡುಗಡೆಗೊಳಿಸಿಲ್ಲ ಎಂದರು.

ರಾಜ್ಯದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದವರು ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸುವ ಸಂದರ್ಭ ಬಂದಿದೆ. ಸರ್ಕಾರ ಒಳಮೀಸಲಾತಿಗೆ ಮುಂದಾದರೆ ಅದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಗೋರ ಸೇನಾ ಜಿಲ್ಲಾ ಉಪಾಧ್ಯಕ್ಷ ನೀಲಕಂಠ ರಾಠೋಡ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಸಿ. ರಾಠೋಡ, ಸದಸ್ಯ ಕಿಶನ್‌ ರಾಜು, ಭಾಲ್ಕಿ ತಾಲ್ಲೂಕು ಅಧ್ಯಕ್ಷ ರಾಜೇಂದ್ರ ಪವಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.