ADVERTISEMENT

ಬೀದರ್‌: ಕಳೆಗುಂದಿದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು

ಚಂದ್ರಕಾಂತ ಮಸಾನಿ
Published 26 ಜೂನ್ 2022, 4:07 IST
Last Updated 26 ಜೂನ್ 2022, 4:07 IST
ಬೀದರ್‌ನ ಚಿದ್ರಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ
ಬೀದರ್‌ನ ಚಿದ್ರಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ   

ಬೀದರ್‌: ರಾಜ್ಯ ಸರ್ಕಾರವು ಸರ್ಕಾರಿ ಹಿರಿಯ ಅಥವಾ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಅನುಮತಿ ನೀಡಿದ ನಂತರ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭವಾದರೂ ಮೂಲಸೌಕರ್ಯಗಳ ಕೊರತೆಯಿಂದ ಅವು ಕಳೆಗುಂದಿವೆ.

ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗಬಾರದು. ಕನ್ನಡ ಮಾಧ್ಯಮ ವಿಭಾಗಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎನ್ನವುದು ಸೇರಿದಂತೆ 13 ಷರತ್ತುಗಳನ್ನು ವಿಧಿಸಿ ಶಾಲೆ ಆರಂಭಿಸಲು ಅನುಮತಿ ಕೊಟ್ಟಿತ್ತು. ಸರ್ಕಾರಿ ಉರ್ದು ಹಾಗೂ ಮರಾಠಿ ಶಾಲೆಗಳ ಕಟ್ಟಡವನ್ನು ಬಳಸಿಕೊಂಡು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಯಿತು. ಇದೀಗ ಸ್ಥಳೀಯರ ಸಹಕಾರ ದೊರೆಯದ ಕಾರಣ ಅವುಗಳಿಗೂ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಯೇ ಬಂದಿದೆ.

ಆರಂಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದು, ಕೊಠಡಿಗಳಲ್ಲಿ ಇಂಗ್ಲಿಷ್‌ ಅಕ್ಷರ ಮಾಲೆಯ ಚಿತ್ರಗಳನ್ನು ತೆಗೆದು ಪಾಲಕರ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಅನೇಕ ಮಕ್ಕಳು ಪ್ರವೇಶವನ್ನೂ ಪಡೆದಿದ್ದರು. ಕೋವಿಡ್‌ ಅವಧಿಯಲ್ಲಿ ಈ ಶಾಲೆಗಳು ಉತ್ತಮವಾಗಿಯೇ ನಡೆದಿದ್ದವು. ನುರಿತ ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗ ತೊಡಗಿದೆ.

ADVERTISEMENT

ಮದ್ಯ ವ್ಯಸನಿಗಳ ತಾಣ ಇಂಗ್ಲಿಷ್‌ ಶಾಲೆ
ಬೀದರ್‌ನ ಚಿದ್ರಿಯಲ್ಲಿರುವ ಉರ್ದು ಪ್ರಾಥಮಿಕ ಶಾಲೆಯಲ್ಲೇ 2019ರಿಂದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಕಾರ್ಯನಿರ್ವಹಿಸುತ್ತಿದೆ. ಇಲಾಖೆ, ಶಾಲೆಯೊಳಗೆ ಕಟ್ಟಡವನ್ನು ನವೀಕರಿಸಿ ಕೊಟ್ಟಿದೆ. ಕಿಡಿಗೇಡಿಗಳು ಹಾಗೂ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ.

ಸಂಜೆಯಾಗುತ್ತಲೇ ಇಲ್ಲಿ ಕೆಲವರು ಶಾಲಾ ಕಟ್ಟಡದೊಳಗೆ ಬಂದು ಮದ್ಯ ಸೇವಿಸಿ ಇಲ್ಲಿಯೇ ಪಾಕೇಟ್‌, ಬಾಟಲಿ ಹಾಗೂ ಎಲುಬುಗಳನ್ನು ಎಸೆದು ಹೋಗುತ್ತಿದ್ದಾರೆ. ಕಿಡಿಗೇಡಿಗಳು ಶಾಲೆಯ ಕಿಟಕಿ, ಬಾಗಿಲುಗಳ ಚೀಲಕ ಮುರಿದು ಒಯ್ದಿದ್ದಾರೆ.

ಬಿಸಿಯೂಟ ಯೋಜನೆ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಬೆಳಿಗ್ಗೆ ಬಂದು ಶಾಲಾ ಆವರಣ ಸ್ವಚ್ಛಗೊಳಿಸುವುದೇ ಒಂದು ಕೆಲಸವಾಗಿದೆ. ಉಳಿದಂತೆ ಅಲ್ಪಸಂಖ್ಯಾತರ ಮಕ್ಕಳೇ ಇಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರವೇಶ ಪಡೆದಿದ್ದಾರೆ. ಉರ್ದು ಶಿಕ್ಷಕರೇ ಇಂಗ್ಲಿಷ್‌ ಬೋಧನೆ ಮಾಡುತ್ತಿದ್ದಾರೆ.

ಇಂಗ್ಲಿಷ್ ಶಿಕ್ಷಕರ ಕೊರತೆ
ಔರಾದ್:
ತಾಲ್ಲೂಕಿನ ಮೂರು‌ ಕಡೆ ಸರ್ಕಾರ ಪ್ರತ್ಯೇಕ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಿದೆ.

2018-19ನೇ ಸಾಲಿನಲ್ಲಿ ತಾಲ್ಲೂಕಿನ ಹಂಗರಗಾ, ಸಂತಪುರ, ಕೌಡಗಾಂವ್ ಹಾಗೂ ಕಮಲನಗರ ತಾಲ್ಲೂಕಿನ ಠಾಣಾಕುಶನೂರನಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ‌ಮಾಧ್ಯಮ ಶಾಲೆ ಆರಂಭಿಸಲಾಗಿದೆ.

ಈಗಾಗಲೇ ‌ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದಲ್ಲೇ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೂ ಪಾಠ ಹೇಳಿಕೊಡಲಾಗುತ್ತಿದೆ. ಇರುವ ಕನ್ನಡ ಮಾಧ್ಯಮ ಶಿಕ್ಷಕರಿಗೆ ತರಬೇತಿ ನೀಡಿ ಇಂಗ್ಲಿಷ್ ‌ಮಾಧ್ಯಮದ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಾಗನೂರ ತಿಳಿಸುತ್ತಾರೆ.

ಕನ್ನಡ ಮಾಧ್ಯಮ ಶಿಕ್ಷಕರಿಂದ ಇಂಗ್ಲಿಷ್ ಕಲಿಕೆ ಪರಿಣಾಮಕಾರಿಯಾಗುವುದಿಲ್ಲ. ಹೀಗಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಪಾಲಕರ ಬೇಡಿಕೆಯಾಗಿದೆ.

ಇಬ್ಬರೇ ವಿದ್ಯಾರ್ಥಿಗಳ ಪ್ರವೇಶ
ಹುಲಸೂರು:
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಿದೆ. ಕಳೆದ ವರ್ಷ 17 ಮಕ್ಕಳು ಪ್ರವೇಶ ಪಡೆದಿದ್ದರು. ಇಲ್ಲಿ ಇಂಗ್ಲಿಷ್‌ ಶಿಕ್ಷಕರೇ ಇಲ್ಲದ ಕಾರಣ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಲ್ಲ. ಇಬ್ಬರು ಮಕ್ಕಳು ಮಾತ್ರ ಅನಿವಾರ್ಯ ಕಾರಣಗಳಿಂದ ಪ್ರವೇಶ ಪಡೆದಿದ್ದಾರೆ.

ಕನ್ನಡ ಮಾಧ್ಯಮದ ಶಿಕ್ಷಕರೇ ಇಂಗ್ಲಿಷ್‌ ಮಾಧ್ಯಮಕ್ಕೂ ಬೋಧನೆ ಮಾಡುತ್ತಿದ್ದಾರೆ. ಮಕ್ಕಳ ಬೋಧನೆಗೆ ಶಿಕ್ಷಕರಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ ನಂದೋಡೆ ಹೇಳುತ್ತಾರೆ.

ಮಕ್ಕಳ ದಾಖಲಾತಿಗೆ ಪಾಲಕರ ಹಿಂದೇಟು
ಭಾಲ್ಕಿ:
ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನ ಭಾತಂಬ್ರಾ ಸರ್ಕಾರಿ ಶಾಲೆಯಲ್ಲಿ 2021-22ರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭವಾಗಿದೆ. 2ನೇ ತರಗತಿಯವರೆಗೆ ಒಟ್ಟು 39 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಆದರೆ, ಇಂಗ್ಲಿಷ್ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕರು ಇಲ್ಲದಿರುವುದರಿಂದ ಪಾಲಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದಾಖಲಾತಿ ಮಾಡುತ್ತಿಲ್ಲ. ಈ ವರ್ಷ 1ನೇ ತರಗತಿಗೆ ಕೇವಲ 10 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ. ಇನ್ನು 2ನೇ ತರಗತಿಯಲ್ಲಿ ಓದುತ್ತಿರುವ ಕೆಲ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳಿಸಲು ವರ್ಗಾವಣೆಪತ್ರ ಕೇಳುತ್ತಿದ್ದಾರೆಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ತಿಳಿಸಿದರು.

ಅವಿಭಜಿತ ಹುಮನಾಬಾದ್‌ ತಾಲ್ಲೂಕಿನಲ್ಲಿ ಹೆಚ್ಚು ಶಾಲೆಗಳು
ಹುಮನಾಬಾದ್:
ಚಿಟಗುಪ್ಪ ಮತ್ತು ಹುಮನಾಬಾದ್ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ಕೊರತೆ ಕಾಡುತ್ತಿದೆ. ಅವಿಭಜಿತ ತಾಲ್ಲೂಕಿನ 14 ಶಾಲೆಗಳು ಇದ್ದು, ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ.

ಅವಿಭಜಿತ ತಾಲ್ಲೂಕಿನಲ್ಲಿ ಕನ್ನಡ ಮತ್ತು ಉರ್ದು ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿ ಇಂಗ್ಲಿಷ್ ಶಿಕ್ಷಣ ನೀಡಲಾಗುತ್ತಿದೆ. ಇಂಗ್ಲಿಷ್‌ ಮಾಧ್ಯಮದ ಶಿಕ್ಷಕರನ್ನೇ ನೇಮಕ ಮಾಡಿದರೆ ಮಕ್ಕಳು ಚೆನ್ನಾಗಿ ಕಲಿಯಬಲ್ಲರು. ಈಗಿನ ಸ್ಥಿತಿಯಲ್ಲಿ ಮಕ್ಕಳು ಯಾವ ಭಾಷೆಯನ್ನೂ ಸ್ಪಷ್ಟವಾಗಿ ಕಲಿಯಲು ಸಾಧ್ಯವಾಗದು ಎಂದು ದುಬಲಗುಂಡಿಯ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನಲ್ಲಿ 12 ಶಾಲೆಗಳು
ಬಸವಕಲ್ಯಾಣ:
ತಾಲ್ಲೂಕಿನಲ್ಲಿ 12 ಸರ್ಕಾರಿ ಪ್ರಾಥಮಿಕ‌‌‌ ಶಾಲೆಗಳಲ್ಲಿ ಎರಡು‌ ವರ್ಷಗಳಿಂದ ಇಂಗ್ಲಿಷ್ ಮಾಧ್ಯಮದ ತರಗತಿ‌ ನಡೆಸಲಾಗುತ್ತಿದ್ದು ಎಲ್ಲಿಯೂ ಪ್ರತ್ಯೇಕ ಕೊಠಡಿಗಳ ಸೌಲಭ್ಯ ಇಲ್ಲ.

ಘೋಟಾಳ ಶಾಲೆಯಲ್ಲಿ ಒಂದನೇ ತರಗತಿ ಮತ್ತು ಎರಡನೇ ತರಗತಿಯಲ್ಲಿ ತಲಾ 12 ವಿದ್ಯಾರ್ಥಿಗಳು ಇದ್ದಾರೆ. ಕನ್ನಡ ಶಿಕ್ಷಕರೇ ಪಾಠ ಬೋಧನೆ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಮೇತ್ರೆ ತಿಳಿಸಿದ್ದಾರೆ.

ಮಂಠಾಳದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಜತೆಗೆ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆ ಕೂಡ ಇದೆ. ಇಲ್ಲಿ 270 ಮಕ್ಕಳು ಇದ್ದಾರೆ. ಆದರೂ ಪ್ರತ್ಯೇಕ ವ್ಯವಸ್ಥೆ ಇಲ್ಲ. ಅನಿವಾರ್ಯವಾಗಿ ಕನ್ನಡದ‌ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ.

ಏಕಲೂರ, ಕಲಖೋರಾ, ಬಸವಕಲ್ಯಾಣ, ಮುಡಬಿ, ರಾಜೇಶ್ವರ, ಉಜಳಂಬ, ಕೊಹಿನೂರ, ಭೋಸಗಾ, ಎರಂಡಿ ಗ್ರಾಮಗಳಲ್ಲಿಯೂ ಇಂಗ್ಲಿಷ್ ಮಾಧ್ಯಮದ ತರಗತಿಗಳು‌ ನಡೆಯುತ್ತಿವೆ.

‘ಇಂಗ್ಲಿಷ್ ಮಾಧ್ಯಮದ ತರಗತಿ ಆರಂಭಿಸಿರುವುದು ಉತ್ತಮ ಕಾರ್ಯ. ಅದರೆ ಸಿಬ್ಬಂದಿ ಹಾಗೂ ಕಟ್ಟಡ ಇಲ್ಲದ್ದರಿಂದ ಮಕ್ಕಳಿಗೆ ಈ ಮಾಧ್ಯಮದ ಶಾಲೆಗೆ ಕಳಿಸುವುದಕ್ಕೆ ಪಾಲಕರು ಹಿಂದೇಟು ಹಾಕುತ್ತಿದ್ದಾರೆ' ಎಂದು ಮುಡಬಿಯ ನಾಗಪ್ಪ ಹೇಳಿದ್ದಾರೆ.

***

ಸಹಕಾರ: ವೀರೇಶ ಮಠಪತಿ, ಮಾಣಿಕ ಭೂರೆ, ಬಸವರಾಜ ಪ್ರಭಾ, ಮನ್ಮಥ ಸ್ವಾಮಿ, ಬಸವಕುಮಾರ ಕವಟೆ, ಮನೋಜಕುಮಾರ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.