ಬೀದರ್: ಕಾವೇರಿದ ವಾತಾವರಣದ ನಡುವೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿಯ ನಿರ್ದೇಶಕರ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಿತು.
ಹಾಲಿ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ಪೆನಾಲ್ ಹಾಗೂ ಸೋಮಶೇಖರ ಬಿರಾದಾರ ಚಿದ್ರಿ ಪೆನಾಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡೂ ಬಣದವರು ಹಲವು ದಿನಗಳಿಂದ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಚುನಾವಣೆ ವಿಷಯವಾಗಿ ಎರಡೂ ಕಡೆಯವರ ನಡುವೆ ಗದ್ದಲ, ಘರ್ಷಣೆಗಳು ನಡೆದು ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಇದರಿಂದಾಗಿ ಕಾವೇರಿದ ವಾತಾವರಣದಲ್ಲಿ ಮತದಾನ ನಡೆಯಿತು.
ನಗರದ ನೌಬಾದ್ ಸಮೀಪದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶನಿವಾರ ಶಾಂತಿಯುತವಾಗಿ ಮತದಾನ ಜರುಗಿತು. ಮತದಾರರಷ್ಟೇ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಂದೇ ಮತದಾನ ಕೇಂದ್ರದಲ್ಲಿ ಹತ್ತು ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಯಾ ಪೆನಾಲ್‌ನವರು ಮತದಾನದ ಕೇಂದ್ರದ ಹೊರಗೆ ಶಾಮಿಯಾನ ಹಾಕಿ, ಕೊನೆಯ ಕ್ಷಣದವರೆಗೂ ಮತದಾರರ ಮನ ಗೆಲ್ಲಲು ಪ್ರಯತ್ನ ನಡೆಸಿದರು. ಮತದಾರರಲ್ಲದವರಿಗೆ ಮತದಾನ ಕೇಂದ್ರದೊಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ.
‘ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆದಿದೆ. ಎರಡು ಬಣಗಳ ನಡುವೆ ಹಿಂದೆ ಘರ್ಷಣೆ ನಡೆದಿದ್ದರಿಂದ ಬಿಗಿ ಬಂದೋಬಸ್ತ್‌ನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಶೇ 90ರಷ್ಟು ಮತದಾನವಾಗಿದೆ’ ಎಂದು ಚುನಾವಣಾಧಿಕಾರಿ ಬಸವರಾಜ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು, ತಾಲ್ಲೂಕು ಪ್ರತಿನಿಧಿಗಳು ಡಿಸೆಂಬರ್ 4ರಂದು ನಡೆಯಲಿರುವ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹಕ್ಕು ಚಲಾಯಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವರು. ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಘಟಕದ ಪರಿಷತ್ ಸದಸ್ಯ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಅಂಗವಿಕಲರಿಗೆ ತೊಂದರೆ:
ಹಕ್ಕು ಚಲಾಯಿಸಲು ಬಂದಿದ್ದ ಅಂಗವಿಕಲ ಮತದಾರರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಅವರು ತೊಂದರೆ ಅನುಭವಿಸಿದರು. ಕೆಲವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಂಥವರಿಗೆ ಕನಿಷ್ಠ ವೀಲ್ ಚೇರ್ ಕೂಡ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಬೇರೆಯವರು ಮತಗಟ್ಟೆಗೆ ಹೊತ್ತುಕೊಂಡು ಹೋಗಿ ನೆರವಾದರು.
ಇನ್ನು, ಅಂಗವಿಕಲ ಮಹಿಳೆಯೊಬ್ಬರು ಮತಗಟ್ಟೆ ಹೊರಗೆ ನಿಂತು ವೀಲ್ ಚೇರ್ ಕೇಳಿದರು. ಆದರೆ, ಆ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದರಿಂದ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುರುಷ ಅಂಗವಿಕಲರಿಗೆ ಪುರುಷರು ನೆರವಾದರು. ಆದರೆ, ಮಹಿಳಾ ಅಂಗವಿಕಲೆಗೆ ಯಾರೂ ನೆರವಿಗೆ ಬರಲಿಲ್ಲ. ಇದರಿಂದ ಅವರು ಹಕ್ಕು ಚಲಾಯಿಸದೆ ವಂಚಿತರಾದರು.
ಹಾಲಿಯೋ? ಹೊಸಬರೋ?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿಗೆ ಶನಿವಾರ ನಡೆದ ಮತದಾನವು ಜಿಲ್ಲಾಧ್ಯಕ್ಷರ ಹಣೆಬರಹ ಕೂಡ ನಿರ್ಧರಿಸಲಿದೆ. ಹಾಲಿ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು ಮೂರನೇ ಅವಧಿಗೆ ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ. ಇನ್ನು ಸೋಮಶೇಖರ ಬಿರಾದಾರ ಚಿದ್ರಿ ಅವರು ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಲು ಪೈಪೋಟಿ ನಡೆಸಿದ್ದಾರೆ. ತಮ್ಮ ಪೆನಾಲ್‌ನ 28 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಗೆಲುವು ಸುಲಭ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಗಂದಗೆ ಅವರು ತಮ್ಮ ಪೆನಾಲ್‌ನ 23 ಜನ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಶೇ 93ರಷ್ಟು ಮತದಾನ
ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿಯ 66 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 35 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಶನಿವಾರ 31 ನಿರ್ದೇಶಕರ ಸ್ಥಾನಗಳಿಗೆ ಮತದಾನ ನಡೆದಿದೆ. ಆರೋಗ್ಯ ಶಿಕ್ಷಣ ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಯ ಒಟ್ಟು 2914 ಜನ ಮತದಾನದ ಹಕ್ಕು ಪಡೆದಿದ್ದರು. ಇದರಲ್ಲಿ 2716 ಜನ ಹಕ್ಕು ಚಲಾವಣೆ ಮಾಡಿದ್ದು ಶೇ 93ರಷ್ಟು ಮತದಾನ ಆಗಿದೆ. ಕಣದಲ್ಲಿರುವ ಒಟ್ಟು 81 ಅಭ್ಯರ್ಥಿಗಳ ಭವಿಷ್ಯ ಮತದಾರರು ಬರೆದಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.