ADVERTISEMENT

ಜನವಾಡ: ಆರೋಗ್ಯ ಕೇಂದ್ರದಲ್ಲಿ ಪಂಚಾಯಿತಿ ಕಚೇರಿ!

ಬಿದ್ದು ಹೋದ ಹಳೆಯ ಕಟ್ಟಡ: ಅದೇ ಜಾಗದಲ್ಲಿ ಮರು ನಿರ್ಮಾಣಕ್ಕೆ ಒತ್ತಾಯ

ನಾಗೇಶ ಪ್ರಭಾ
Published 26 ಫೆಬ್ರುವರಿ 2024, 6:42 IST
Last Updated 26 ಫೆಬ್ರುವರಿ 2024, 6:42 IST
<div class="paragraphs"><p>ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ನಡೆಯುತ್ತಿರುವ ಪಂಚಾಯಿತಿ ಕಚೇರಿ</p></div>

ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ನಡೆಯುತ್ತಿರುವ ಪಂಚಾಯಿತಿ ಕಚೇರಿ

   

ಜನವಾಡ(ಬೀದರ್ ತಾಲ್ಲೂಕು): ಯರನಳ್ಳಿ ಗ್ರಾಮ ಪಂಚಾಯಿತಿಗೆ ಕಟ್ಟಡದ ಕೊರತೆ ಇದ್ದು, ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರವೇ ಆಸರೆಯಾಗಿದೆ. ಇಲ್ಲಿಯೇ ಪಂಚಾಯಿತಿ ಕಚೇರಿಯ ಕೆಲಸ ಕಾರ್ಯಗಳು ನಡೆಯುತ್ತಿವೆ.

ಕಟ್ಟಡ ಬಿದ್ದು ಹೋಗಿರುವ ಕಾರಣ ಪಂಚಾಯಿತಿ ಕಚೇರಿ ಮೂರು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲೇ ನಡೆಯುತ್ತಿದೆ. ಸದ್ಯ ಗ್ರಾಮದಿಂದ ಅರ್ಧ ಕಿ.ಮೀ. ದೂರದ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಸಾರ್ವಜನಿಕರು ವಿವಿಧ ಕೆಲಸ ಕಾರ್ಯಗಳಿಗೆ ಪಂಚಾಯಿತಿಗೆ ತೆರಳಲು ತೊಂದರೆ ಅನುಭವಿಸಬೇಕಾಗಿದೆ.

ADVERTISEMENT

‘ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರದಲ್ಲಿ ಮೂರು ಕಿರಿದಾದ ಕೋಣೆಗಳಿವೆ. ಅವುಗಳಲ್ಲೇ ಸಾಮಾನ್ಯ ಸಭೆ, ಪಂಚಾಯಿತಿಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪಂಚಾಯಿತಿಯ ಹಳೆಯ ಕಟ್ಟಡ ಬಿದ್ದಿದೆ. ಹೀಗಾಗಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ಕಚೇರಿ ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಸಿನಾ ಬೇಗಂ ಅಬ್ಬಾಸ್ ಖಾನ್’ ತಿಳಿಸುತ್ತಾರೆ.

‘ಸರ್ಕಾರ, ಹೊಸ ಕಟ್ಟಡ ನಿರ್ಮಿಸಿದರೆ ಪಂಚಾಯಿತಿ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಅನುಕೂಲವಾಲಿದೆ. ಜನರಿಗೆ ಅರ್ಧ ಕಿ.ಮೀ. ದೂರ ಅಲೆದಾಡುವುದೂ ತಪ್ಪಲಿದೆ’ ಎಂದರು.

ಸದ್ಯ ಪಂಚಾಯಿತಿ ಕಚೇರಿ ಊರ ಹೊರಗೆ ಇರುವುದರಿಂದ ಸಾರ್ವಜನಿಕರಿಗೆ ಮನೆ, ನಲ್ಲಿ ಕರ ಪಾವತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್, ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗುತ್ತಿದೆ. ಹಳೆಯ ಕಟ್ಟಡ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿದರೆ ಒಳಿತು ಎನ್ನುತ್ತಾರೆ ಗ್ರಾಮದ ಕಲ್ಲಪ್ಪ ಹಾಸಗೊಂಡ.

ಯರನಳ್ಳಿ ಗ್ರಾಮ ಪಂಚಾಯಿತಿಯು ಯರನಳ್ಳಿ, ಇಸ್ಲಾಂಪುರ, ಬಂಪಳ್ಳಿ, ಸಾಂಗ್ವಿ ಹಾಗೂ ಸಿದ್ಧಾಪುರ ಗ್ರಾಮಗಳನ್ನು ಒಳಗೊಂಡಿದೆ. ಒಟ್ಟು ಸದಸ್ಯ ಬಲ 14 ಇದೆ.

ಪಂಚಾಯಿತಿ ಹಳೆಯ ಕಟ್ಟಡ ಸ್ಥಳದಲ್ಲೇ ನರೇಗಾದಡಿ ಹೊಸ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಕಾಮಗಾರಿ ಶುರುವಾಗಲಿದೆ.
-ಕಿರಣ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.