ಹುಲಸೂರ: ಉಸಿರು ನಿಲ್ಲಿಸುವ ಶರೀರಕ್ಕೊಂದು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ಕಾಣುವ ಸಂಪ್ರದಾಯ. ‘ಅಂತ್ಯಸಂಸ್ಕಾರ’ ಅಡ್ಡಿ–ಆತಂಕಗಳಿಲ್ಲದೇ ನಡೆಯಬೇಕಾದರೆ ಸ್ಮಶಾನಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಅತ್ಯಗತ್ಯ. ಆದರೆ, ತಾಲ್ಲೂಕಿನ ‘ಮುಕ್ತಿಧಾಮ’ಗಳು ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿವೆ.
ಕೆಲವೆಡೆ ಒಂದೆಡೆ ಜಾಗದ ವಿವಾದವಿದ್ದರೆ, ಮತ್ತೆ ಕೆಲವೆಡೆ ಶವ ಹೂಳಲು, ಸುಡಲು ಸರಿಯಾದ ವ್ಯವ್ಯಸ್ಥೆಯೇ ಇಲ್ಲ. ಪಟ್ಟಣ ಸೇರಿ ತಾಲ್ಲೂಕಿನ ಗ್ರಾಮಗಳಲ್ಲಿ ಮೃತಪಟ್ಟವರ ಶವಸಂಸ್ಕಾರಕ್ಕೆ ಕುಟುಂಬದ ಸದಸ್ಯರು, ಸಂಬಂಧಿಕರು ಪರದಾಡುವಂತಾಗಿದೆ.
ಮೂಲಸೌಕರ್ಯ ಕೊರತೆ: ಸ್ಮಶಾನಗಳ ಆವರಣದಲ್ಲಿ ಗಿಡ–ಗಂಟಿಗಳು ಬೆಳೆದು ನಾಯಿಗಳು, ಹಾವು, ಚೇಳಿನಂಥ ಜೀವಿಗಳ ಆವಾಸ ತಾಣಗಳಾಗಿ ಬದಲಾಗಿವೆ.
ಬಹುತೇಕ ಸ್ಮಶಾನಗಳು ಪರಿಸರ ದಿನಾಚರಣೆಯ ದಿನ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗಿವೆ. ಕೆಲವು ಸ್ಮಶಾನಗಳಲ್ಲಿ ಗಿಡ ಮರಗಳು ಬೆಳೆದಿರುವುದು ಬಿಟ್ಟರೆ, ಬೇರೆ ಯಾವ ವ್ಯವಸ್ಥೆಯೂ ಇಲ್ಲ. ಅಂತ್ಯಕ್ರಿಯೆಗೆ ಬರುವವರು ಸ್ಮಶಾನಕ್ಕೆ ಬರಲು ಸರಿಯಾದ ದಾರಿ, ಅಂತ್ಯ ಸಂಸ್ಕಾರದ ಬಳಿಕ ಕೈ–ಕಾಲು ತೊಳೆಯಲು ನೀರು, ವಯಸ್ಸಾದವರಿಗೆ ಕೂರಲು ಒಂದೆರಡು ಬೆಂಚು, ಬೆಳಕಿಗೆ ಒಂದಿಷ್ಟು ವಿದ್ಯುತ್ ದೀಪಗಳು, ಮೃತದೇಹ ಸುಡುವ ತಾಣದ ಮೇಲೊಂದು ಸೂರಾಗಲಿ ಇಲ್ಲ. ಶವ ಸುಡಲು ದಹನ ಕಟ್ಟೆಯೂ ಇಲ್ಲ. ಮಳೆ ಸುರಿದರೆ ಮೃತದೇಹ ಅರ್ಧಂಬರ್ಧ ಸುಟ್ಟರೇ... ಎಂಬ ಆತಂಕ ಮೃತರ ಸಂಬಂಧಿಕರು, ಕುಟುಂಬದ ಸದಸ್ಯರಿಗೆ ಕಾಡುತ್ತದೆ.
ತಾಲ್ಲೂಕಿನಲ್ಲಿ 25 ಗ್ರಾಮಗಳ ಪೈಕಿ ಕೇವಲ ಬೆರಳೆಣಿಕೆಯಷ್ಟು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದೀತು. ‘ಈಚೆಗಷ್ಟೆ ಎಲ್ಲ ಗ್ರಾಮಗಳಿಗೂ ಸರಾಸರಿ 10 ಗುಂಟೆಯಷ್ಟು ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿ ಆದೇಶಿಸಲಾಗಿದೆ. ಆದರೆ, ಅದು ಇನ್ನೂ ಆದೇಶದಲ್ಲೇ ಉಳಿದಿದೆ. ಕೆಲವೆಡೆ ಜಾಗ ಗುರುತಿಸಿದ್ದರೂ ಗಡಿ ಗುರುತು ಹಾಕಿಲ್ಲ’ ಎಂಬ ದೂರುಗಳಿವೆ. ರುದ್ರಭೂಮಿಗೆ ಬೇಕಿರುವ ರಸ್ತೆ, ನೀರು ಸೌಲಭ್ಯ ಇನ್ನೂ ಸಿಕ್ಕಿಲ್ಲ. ಶವಸಂಸ್ಕಾರಕ್ಕೆ ಚಾವಣಿ ಸಹಿತ ದಹನ ಕಟ್ಟೆ ನಿರ್ಮಿಸುವ ಕೆಲಸ ಇನ್ನಷ್ಟೆ ಆಗಬೇಕಿದೆ!
ಹುಲಸೂರ ತಾಲ್ಲೂಕಿನ ಮೀರಖಲ್, ಗಡಿ ಗೌಡಗಾಂವ, ತೊಗಲೂರು, ದೇವನಾಳ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೂಕ್ತ ಸ್ಮಶಾನ ವ್ಯವಸ್ಥೆಯಿಲ್ಲ. ಈ ನಡುವೆ ಇರುವ ಒಂದಿಷ್ಟು ರುದ್ರಭೂಮಿಗಳಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ. ಶವ ಸಂಸ್ಕಾರಕ್ಕೆ ಯಾವುದೇ ಸೌಲಭ್ಯವಿಲ್ಲ. ಎಲ್ಲವನ್ನೂ ಜನ ಹೊರಗಿನಿಂದಲೇ ವ್ಯವಸ್ಥೆ ಮಾಡಿಕೊಳ್ಳುವ ಸ್ಥಿತಿಯಿದೆ.
ಹಲವು ಗ್ರಾಮಗಳ ಸ್ಮಶಾನಗಳು ತ್ಯಾಜ್ಯ ವಿಲೇವಾರಿ ಘಟಕಗಳಾಗಿ ಬದಲಾಗಿವೆ. ತ್ಯಾಜ್ಯ ಬಿಸಾಡುವ ಜನರಿಗೆ ಇದು ಹೇಳಿ ಮಾಡಿಸಿದ ಜಾಗಗಳಾಗಿವೆ. ಯಾವುದೇ ಸ್ಮಶಾನದಲ್ಲಿ ನೋಡಿದರೂ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕವರ್‌ಗಳೇ ತುಂಬಿವೆ. ತಾಲ್ಲೂಕಿನ ಪ್ರತಿಯೊಂದು ಸ್ಮಶಾನ ಭೂಮಿ ಗುರುತಿಸಿ, ಅವುಗಳನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಉತ್ಸಾಹ ತೋರಿದಂತಿಲ್ಲ.
ಅರಣ್ಯ ಜಾಗದಲ್ಲಿ ಅಂತ್ಯಸಂಸ್ಕಾರ!: ಬಹುತೇಕ ಸ್ಮಶಾನದಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಕೆಲವೆಡೆ ಗ್ರಾಮ ಪಂಚಾಯಿತಿ ಸ್ಥಳ ಗುರುತಿಸಿದ್ದರೂ ಶೆಡ್ ಇಲ್ಲ. ಹಾಗಾಗಿ ಜನರು ಅಕ್ಕಪಕ್ಕದ ಅರಣ್ಯದಲ್ಲಿಯೇ ಶವಗಳನ್ನು ಸುಡುವುದು ಸಾಮಾನ್ಯವಾಗಿದೆ. ತಾಲ್ಲೂಕಿನ ಸ್ಮಶಾನಗಳಿಗೆ ಮೀಸಲಿಟ್ಟ ಜಾಗದಲ್ಲಿ ಕೆಲವು ಅರಣ್ಯ ಪ್ರದೇಶಗಳಲ್ಲಿ ಇದ್ದರೆ, ಇನ್ನೂ ಕೆಲವು ಗ್ರಾಮಠಾಣಾ ಜಾಗಗಳಾಗಿವೆ.
ಜಾಗ ಅತಿಕ್ರಮಣ: ‘ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿದ ಜಾಗ ಅತಿಕ್ರಮಣವಾಗಿದೆ. ಅರಣ್ಯ ಪ್ರದೇಶದಲ್ಲಿಯೇ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿಯಿದೆ. ಕೆಲವೊಮ್ಮೆ ಅರಣ್ಯ ಇಲಾಖೆಯವರು ತಕರಾರು ತೆಗೆಯುತ್ತಾರೆ. ಸ್ಮಶಾನ ಅಭಿವೃದ್ಧಿಯು ದೂರದ ಮಾತಾಗಿದ್ದು, ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಲು ಗ್ರಾಮ ಪಂಚಾಯಿತಿ ಮುಂದಾಗಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಬೇಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಜಾಗ ಹಂಚಿಕೆ ಮಾಡಿದ್ದಾರೆ. ಸ್ಮಶಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಿದ್ದು, ಅನುಮೋದನೆಗೆ ಕಳಿಸುವುದು ಬಾಕಿಯಿದೆ’ ಎಂದು ಪಿಡಿಒ ಬಸವರಾಜ ರೂಗಿ ಹೇಳುತ್ತಾರೆ.
ಕೆಲವು ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಮಂಜೂರು ಮಾಡಲಾಗಿದೆ. ಒಂದೇ ಕಡೆ ಜಾಗ ನೀಡಿರುವ ಕಾರಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಂದ ಸ್ಮಶಾನ ಜಾಗದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಸ್ಮಶಾನಕ್ಕೆ ಗುರುತಿಸಿದ ಜಾಗದ ಸಮೀಪದ ನಿವಾಸಿಗಳೂ ಕೆಲವೆಡೆ ಮುಕ್ತಿಧಾಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವೆಡೆ ಗ್ರಾಮಸ್ಥರು ಗ್ರಾಮದಲ್ಲಿಯೇ ಜಾಗ ಒದಗಿಸಲು ಪಟ್ಟು ಹಿಡಿದಿದ್ದಾರೆ.
ಸ್ಮಶಾನ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರೋಟರಿ ಸಂಸ್ಥೆ ಹೀಗೆ ಹಲವು ಸಂಘ–ಸಂಸ್ಥೆಗಳು ಕೈಜೋಡಿಸಬೇಕಿದೆ ಎಂಬುದು ಸಾರ್ವಜನಿಕರ ಆಶಯ.
ಗ್ರಾಮೀಣ ಭಾಗದಲ್ಲಿ ಸ್ಮಶಾನ ಭೂಮಿಗೆ ನಿರ್ದಿಷ್ಟ ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.–ಶಿವಾನಂದ್ ಮೇತ್ರೆ, ತಹಶೀಲ್ದಾರ್, ಹುಲಸೂರ
ಬಹುತೇಕ ಸ್ಮಶಾನಗಳು ಒತ್ತುವರಿಯಾಗಿವೆ. ಸೂಕ್ತ ದಾಖಲೆಗಳೊಂದಿಗೆ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ, ಅಧಿಕಾರಿಗಳ ಬಳಿ ಸಂಪೂರ್ಣ ದಾಖಲೆಗಳು ಇವೆಯೋ ಇಲ್ಲವೋ ಗೊತ್ತಿಲ್ಲ? ಜನರ ಬಗ್ಗೆ ಕಾಳಜಿ ತೋರಬೇಕಿದೆ ಆಕಾಶ ಖಂಡಾಳೆ, ಸಾಮಾಜಿಕ ಕಾರ್ಯಕರ್ತ ಸ್ಮಶಾನ ಭೂಮಿಯನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ. ಮಳೆಗಾಲವಾದ ಕಾರಣ ಮತ್ತೆ ಗಿಡ–ಗಂಟಿ ಬೆಳೆದಿವೆ. ಅವುಗಳನ್ನು ಕೂಡಲೇ ತೆರವುಗೊಳಿಸುತ್ತೇವೆ. ನರೇಗಾ ಯೋಜನೆ ಮಾರ್ಗಸೂಚಿ ಅಡಿಯಲ್ಲಿ ಸ್ಮಶಾನ ಅಭಿವೃದ್ಧಿ ಮಾಡಲಾಗುವುದು.–ಮಹದೇವ ಬಾಬಳಗಿ, ಹುಲಸೂರ ತಾಲ್ಲೂಕು ಪಂಚಾಯಿತಿ ಇಒ
ಬಹುತೇಕ ಸ್ಮಶಾನಗಳು ಒತ್ತುವರಿಯಾಗಿವೆ. ಸೂಕ್ತ ದಾಖಲೆಗಳೊಂದಿಗೆ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ, ಅಧಿಕಾರಿಗಳ ಬಳಿ ಸಂಪೂರ್ಣ ದಾಖಲೆಗಳು ಇವೆಯೋ ಇಲ್ಲವೋ ಗೊತ್ತಿಲ್ಲ? ಜನರ ಬಗ್ಗೆ ಕಾಳಜಿ ತೋರಬೇಕಿದೆ ಆಕಾಶ ಖಂಡಾಳೆ, ಸಾಮಾಜಿಕ ಕಾರ್ಯಕರ್ತ ಸ್ಮಶಾನ ಭೂಮಿಯನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ. ಮಳೆಗಾಲವಾದ ಕಾರಣ ಮತ್ತೆ ಗಿಡ–ಗಂಟಿ ಬೆಳೆದಿವೆ. ಅವುಗಳನ್ನು ಕೂಡಲೇ ತೆರವುಗೊಳಿಸುತ್ತೇವೆ. ನರೇಗಾ ಯೋಜನೆ ಮಾರ್ಗಸೂಚಿ ಅಡಿಯಲ್ಲಿ ಸ್ಮಶಾನ ಅಭಿವೃದ್ಧಿ ಮಾಡಲಾಗುವುದು.–ಮಹದೇವ ಬಾಬಳಗಿ, ಹುಲಸೂರ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.