ADVERTISEMENT

ಮುಂಗಾರು ಅವಧಿಯಲ್ಲಿ ಸೂಕ್ತ ಬೆಳೆ ಬೆಳೆಯಿರಿ: ಸುನೀಲಕುಮಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:13 IST
Last Updated 18 ಜೂನ್ 2024, 14:13 IST
ಸುನೀಲಕುಮಾರ ಎನ್.ಎಂ.
ಸುನೀಲಕುಮಾರ ಎನ್.ಎಂ.   

ಜನವಾಡ: ಮುಂಗಾರು ಹಂಗಾಮಿನಲ್ಲಿ ರೈತರು ಜಿಲ್ಲೆಯ ಹವಾಗುಣಕ್ಕೆ ಸೂಕ್ತವಾದ ಬೆಳೆಗಳನ್ನು ಬೆಳೆಯಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್.ಎಂ. ಸಲಹೆ ಮಾಡಿದ್ದಾರೆ.

ಅಧಿಕ ಇಳುವರಿಗಾಗಿ ಉತ್ತಮ ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೃಷಿಯಲ್ಲಿ ನವೀನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ತೊಗರಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ಜಿಆರ್‌ಜಿ 811, ಜಿಆರ್‌ಜಿ 152, ಬಿಎಸ್‍ಎಂಆರ್ 736, ಉದ್ದಿನಲ್ಲಿ ಡಿ.ಯು 1, ಡಿ.ಬಿ.ಜಿ.ವಿ 5, ಬಿ.ಡಿ.ಯು 12, ಹೆಸರಿನಲ್ಲಿ ಸೆಲೆಕ್ಷನ್ 4, ಬಿಜಿಎಸ್ 9, ಟಿಆರ್‌ಆರ್‌ಎಂ 147, ಸೋಯಾ ಅವರೆಯಲ್ಲಿ ಡಿಎಸ್‍ಬಿ 21 ಹಾಗೂ ಜೆಎಸ್ 335 ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸರಿಯಾದ ವಾತಾವರಣ, ತೇವಾಂಶ ಹಾಗೂ ನಿರ್ದಿಷ್ಟ ಅವಧಿಯಲ್ಲಿ ಬಿತ್ತನೆ ಕೈಗೊಂಡಲ್ಲಿ ಉತ್ತಮ ಬೆಳೆ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ADVERTISEMENT

ಉದ್ದು ಹಾಗೂ ಹೆಸರು ಬೆಳೆಯನ್ನು ಜೂನ್ 20ರ ವರೆಗೆ, ತೊಗರಿ ಮತ್ತು ಸೋಯಾಅವರೆಯನ್ನು ಜುಲೈ 15 ರ ವರೆಗೆ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ.

ಅತಿ ಹೆಚ್ಚು ಮಳೆಯಾದ ಪ್ರದೇಶದಲ್ಲಿ ತೊಗರಿ ಅಥವಾ ಸೋಯಾ ಅವರೆಯನ್ನು ಹರಿ ಮತ್ತು ಏರುಮಡಿ ವಿಧಾನದಲ್ಲಿ ಬೀಜ ಊರುವುದರ ಮೂಲಕ ಬಿತ್ತನೆ ಕೈಗೊಂಡಲ್ಲಿ ಹೆಚ್ಚು ಮಳೆ ಬಂದಾಗ ಹೆಚ್ಚಿನ ನೀರು ಹೊಲದಿಂದ ಹರಿದು ಹೋಗಲು ಹಾಗೂ ಕಡಿಮೆ ಮಳೆಯಾದಾಗ ತೇವಾಂಶ ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಬೀಜದ ಉಳಿತಾಯವೂ ಆಗುತ್ತದೆ ಎಂದು ತಿಳಿಸಿದ್ದಾರೆ.

ಬಿತ್ತನೆಗೆ ಮುಂಚೆ ಸೋಯಾ ಅವರೆ ಬೀಜಕ್ಕೆ ಪ್ರತಿ ಕಿ.ಗ್ರಾಂ.ಗೆ 2 ಗ್ರಾಂ. ಥೈರಾಮ್ ಅಥವಾ ಕಾರಬ್ಯಾಕ್ಸಿನ್ ಬಳಸಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದು ಹೇಳಿದ್ದಾರೆ.

ಉದ್ದು ಮತ್ತು ಹೆಸರು ಬೀಜಗಳಿಗೆ ಇಮಿಡಾಕ್ಲೋಪ್ರಿಡ್ 600 ಎಫ್.ಎಸ್. ಪ್ರತಿ ಕೆ.ಜಿ. ಬೀಜಕ್ಕೆ 10 ಮಿ.ಲೀ.ನಂತೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಹೀಗೆ ಮಾಡುವುದರಿಂದ ರಸ ಹೀರುವ ಕೀಟಗಳನ್ನು ನಿರ್ವಹಿಸಬಹುದು. ತೊಗರಿ, ಉದ್ದು, ಹೆಸರಿನಲ್ಲಿ ಕಳೆ ನಿರ್ವಹಣಿಗಾಗಿ ಬಿತ್ತಿದ ದಿನ ಅಥವಾ ಮರು ದಿನ ಪ್ರತಿ ಲೀಟರ್ ನೀರಿಗೆ 3.0 ಮಿ.ಲೀ. ಪೆಂಡಿಮಿಥಾಲಿನ್ ಸಾಕಷ್ಟು ತೇವಾಂಶ ಇದ್ದಾಗ ಸಿಂಪಡಿಸಬೇಕು. ರಾಸಾಯನಿಕ ಗೊಬ್ಬರಗಳನ್ನು ವೈಜ್ಞಾನಿಕ ರೀತಿಯಲ್ಲಿ ಬಳಸಬೇಕು. ಶಿಫಾರಸು ಮಾಡಲಾದ ಪ್ರಮಾಣದಷ್ಟೇ ಗೊಬ್ಬರ ಬಳಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.