ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: 4,553 ಪದವಿ ವಿದ್ಯಾರ್ಥಿಗಳ ಫಲಿತಾಂಶ ಅತಂತ್ರ!

ಪರೀಕ್ಷೆ ಬರೆದು ವರ್ಷವಾದರೂ ಗೊತ್ತಾಗದ ಫಲಿತಾಂಶ; ಉತ್ತರ ಪತ್ರಿಕೆಗಳೇ ನಾಪತ್ತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ನವೆಂಬರ್ 2024, 6:42 IST
Last Updated 16 ನವೆಂಬರ್ 2024, 6:42 IST
ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ   

ಬೀದರ್‌: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ 4,553 ವಿದ್ಯಾರ್ಥಿಗಳು ಪರೀಕ್ಷೆ ಬರೆದು ವರ್ಷ ಕಳೆದರೂ ಇದುವರೆಗೆ ಅವರಿಗೆ ಅವರ ಫಲಿತಾಂಶವೇ ತಿಳಿದಿಲ್ಲ. ಇಷ್ಟೇ ಅಲ್ಲ, ಅವರಲ್ಲಿ ಅನೇಕರ ಉತ್ತರ ಪತ್ರಿಕೆಗಳೇ ನಾಪತ್ತೆಯಾಗಿವೆ ಎಂದು ಗೊತ್ತಾಗಿದೆ.

ಪದವಿ ಐದನೇ ಹಾಗೂ ಆರನೇ ಸೆಮಿಸ್ಟರ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ತಿಳಿಯದೇ ಅತಂತ್ರರಾಗಿದ್ದಾರೆ. ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಕೊನೆಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಮಾದದಿಂದ ವಿದ್ಯಾರ್ಥಿಗಳು ಪಿಜಿ ಕೋರ್ಸ್‌ ಸೇರದೆ ಮನೆಯಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ.

ಮೂಲಗಳ ಪ್ರಕಾರ, ವಿವಿಧ ಪದವಿ ಕಾಲೇಜುಗಳ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 4,553 ವಿದ್ಯಾರ್ಥಿಗಳಿಗೆ ಅವರ ಫಲಿತಾಂಶ ಗೊತ್ತಾಗಿಲ್ಲ. ಇನ್ನುಳಿದವರಿಗೆ ಅಂಕಪಟ್ಟಿ ಕೈಸೇರಿಲ್ಲ. ಘಟಿಕೋತ್ಸವ ಪ್ರಮಾಣ ಪತ್ರ ಸಿಕ್ಕಿಲ್ಲ. ಪ್ರಮಾಣ ಪತ್ರ ಸಿಕ್ಕವರ ಹೆಸರುಗಳಲ್ಲಿ ದೋಷಗಳು ಕಂಡು ಬಂದಿರುವ ಆರೋಪಗಳು ಕೇಳಿ ಬಂದಿದ್ದು, ಅದನ್ನು ಸರಿಪಡಿಸಿಕೊಳ್ಳಲು ವಿಶ್ವವಿದ್ಯಾಲಯಕ್ಕೆ ನಿತ್ಯ ಅಲೆದಾಡುವುದು ಸಾಮಾನ್ಯವಾಗಿದೆ.

ADVERTISEMENT

ಇನ್ನು, ಕೆಲವರಿಗೆ ಅವರ ಫಲಿತಾಂಶ ಗೊತ್ತಾಗಿದ್ದು, ಅಂಕಗಳಲ್ಲಿ ವ್ಯತ್ಯಾಸಗಳಾಗಿವೆ. ಕೆಲ ವಿದ್ಯಾರ್ಥಿಗಳಿಗೆ 50 ಅಂಕಗಳು ಬಂದರೆ, ಅಂಕ ಪಟ್ಟಿಯಲ್ಲಿ 5 ಅಂಕಗಳೆಂದು ನಮೂದಿಸಲಾಗಿದೆ. ನೂರಾರು ವಿದ್ಯಾರ್ಥಿಗಳು ಒಂದಿಲ್ಲೊಂದು ಸಮಸ್ಯೆಗೆ ಒಳಗಾಗಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ.

ಆಗಿರುವ ಲೋಪ ತಿಳಿಯಲೆಂದೇ ಗುಲಬರ್ಗಾ ವಿಶ್ವವಿದ್ಯಾಲಯವು, ಐವರು ಸಿಂಡಿಕೇಟ್‌ ಸದಸ್ಯರನ್ನು ಒಳಗೊಂಡಿರುವ ಪರೀಕ್ಷಾ ಸುಧಾರಣಾ ಉಪಸಮಿತಿ ರಚಿಸಿದೆ. ಸಿದ್ದಪ್ಪ ಮೂಲಗೆ ಈ ಸಮಿತಿಗೆ ಅಧ್ಯಕ್ಷರಾಗಿದ್ದು, ರಾಘವೇಂದ್ರ ಎಂ. ಭೈರಪ್ಪ, ಶ್ರೀದೇವಿ ಎಸ್‌. ಕಟ್ಟಿಮನಿ, ಸಿದ್ದಪ್ಪ ಸುಳ್ಳದ ಹಾಗೂ ಉದಯಕಾಂತ ಪಾಟೀಲ ಇದರ ಸದಸ್ಯರಾಗಿದ್ದಾರೆ. ಈ ಸಮಿತಿ ಎರಡು ಸಭೆಗಳನ್ನು ನಡೆಸಿದ್ದು, ಹಲವು ಆಘಾತಕಾರಿ ಅಂಶಗಳು ಗಮನಕ್ಕೆ ಬಂದಿವೆ. ಶಿಕ್ಷಣ ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ನಿರ್ಲಕ್ಷ್ಯ ಎಂದೂ ಕಂಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

Gulbarga University... - Photo/ Prashanth HG ಗುಲಬರ್ಗಾ ವಿಶ್ವವಿದ್ಯಾಲಯ ಚಿತ್ರ

‘ಎರಡ್ಮೂರು ತಿಂಗಳಲ್ಲಿ ಪರಿಹಾರ’

‘ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಎರಡ್ಮೂರು ತಿಂಗಳಲ್ಲಿ ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಲಾಗುವುದು. ಫಲಿತಾಂಶ ತಿಳಿದುಕೊಳ್ಳಲು ಕೆಲವರು ಅಂಕ ಪಟ್ಟಿಗಾಗಿ ನಿತ್ಯ ಅಲೆದಾಡುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳನ್ನು ಸಮಸ್ಯೆಗೆ ದೂಡಿರುವುದು ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಉಪಸಮಿತಿ ಎರಡು ಸಭೆಗಳನ್ನು ನಡೆಸಿ ಸಂಬಂಧಿಸಿದವರಿಗೆ ಅಗತ್ಯ ಸುಧಾರಣೆಗೆ ಸಲಹೆ ಮಾಡಿದೆ. ಆದಷ್ಟು ಶೀಘ್ರ ಅಂಕಪಟ್ಟಿಗಳನ್ನು ವಿತರಿಸಲಾಗುವುದು. ಇದುವರೆಗೆ ಫಲಿತಾಂಶ ಗೊತ್ತಾಗದವರಿಗೆ ಅದನ್ನು ತಿಳಿಸಲು ಕ್ರಮ ಜರುಗಿಸಲಾಗುವುದು’ ಎಂದು ಪರೀಕ್ಷಾ ಸುಧಾರಣಾ ಉಪಸಮಿತಿ ಅಧ್ಯಕ್ಷ ಸಿದ್ದಪ್ಪ ಮೂಲಗೆ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ?

‘ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ಕೈಸೇರಿಲ್ಲ. ಅಂಕಗಳಲ್ಲಿ ವ್ಯತ್ಯಾಸವಾಗಿದೆ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ ದೊಡ್ಡ ಮಟ್ಟದಲ್ಲಿ ಲೋಪಗಳಾಗಿವೆ. ಪ್ರಾಧ್ಯಾಪಕರೇ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮೌಲ್ಯಮಾಪನ ಮಾಡಿದ್ದಾರೆ. ಎಲ್ಲಕ್ಕಿಂತ ಚಿಂತೆಗೀಡು ಮಾಡಿದ ವಿಷಯವೆಂದರೆ ಅನೇಕ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೇ ನಾಪತ್ತೆಯಾಗಿವೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಭವಿಷ್ಯದಲ್ಲಿ ಈ ರೀತಿಯ ಸಮಸ್ಯೆಗಳು ಎಲ್ಲೂ ಉದ್ಭವಿಸಬಾರದು’ ಎಂದು ಸರು ಹೇಳಲಿಚ್ಛಿಸದ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.