ADVERTISEMENT

ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಟಿಸಲಿ: ಸಚಿವ ಎಚ್‌.ಕೆ. ಪಾಟೀಲ

ದಿ ಗಾಂಧಿ ಗಂಜ್‌ ಕೋ ಆಪರೇಟಿವ್‌ ಬ್ಯಾಂಕಿನ ಸುವರ್ಣ ಮಹೋತ್ಸವದಲ್ಲಿ ಸಚಿವ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 12:51 IST
Last Updated 27 ಅಕ್ಟೋಬರ್ 2024, 12:51 IST
   

ಬೀದರ್‌: ‘ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಟಿಸಲು ಹೆಚ್ಚಿನ ಒತ್ತು ಕೊಡಬೇಕು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ನಗರದ ಸಿಂದೋಲ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ದಿ ಗಾಂಧಿ ಗಂಜ್‌ ಕೋ ಆಪರೇಟಿವ್‌ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾರು ಖರೀದಿ, ನಿವೇಶನ ಮತ್ತು ಮನೆ ನಿರ್ಮಾಣಕ್ಕೆ, ಲಗ್ನಕ್ಕೆ ಸಹಕಾರಿ ಬ್ಯಾಂಕುಗಳು ಸಾಲ ಕೊಡುತ್ತವೆ. ಆದರೆ, ಕೈಗಾರಿಕೆಗಳ ಸ್ಥಾಪನೆಗೆ ಸಾಲ ಕೊಡುವುದಿಲ್ಲ. ಎಲ್ಲಿಯವರೆಗೆ ಉದ್ಯೋಗ ಸೃಷ್ಟಿಗೆ ಪೂರಕವಾದ ಕಿರು ಕೈಗಾರಿಕೆಗಳ ಸ್ಥಾಪನೆಗೆ ಸಾಲ ಕೊಡುವುದಿಲ್ಲವೋ ನಮ್ಮ ಉದ್ದೇಶ ಯಶಸ್ವಿಯಾಗುವುದಿಲ್ಲ. ಸಮಾಜ ಸೇವೆ ಮಾಡಿದಂತೆಯೂ ಆಗುವುದಿಲ್ಲ ಎಂದರು.

ADVERTISEMENT

ಹೆಚ್ಚಿನ ಉದ್ಯೋಗಗಗಳು ಸೃಷ್ಟಿಯಾದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಉದ್ಯೋಗ ಸೃಷ್ಟಿಗೆ ಬ್ಯಾಂಕುಗಳು ಮುಂದಾಗುವ ಅಗತ್ಯವಿದೆ. ಪ್ರತಿ ಸಭೆಯಲ್ಲೂ 10 ಉದ್ಯೋಗ ಸೃಷ್ಟಿಸುವವರಿಗೆ ಸಾಲ ಕೊಡುತ್ತೇವೆ ಎಂದು ನಿರ್ಧಾರ ಕೈಗೊಳ್ಳಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟರೆ ಅದರಿಂದ ಸಿಗುವ ಸಮಾಧಾನ ಯಾವುದರಿಂದಲೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಉದ್ಯೋಗ ಸೃಷ್ಟಿಸಿದರೆ ಬ್ಯಾಂಕಿನ 50 ವರ್ಷಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ತರಕಾರಿ, ಹಣ್ಣು ಮಾರಾಟ ಮಾಡುವವರು, ಗ್ಯಾರೇಜ್‌ ನಡೆಸುವವರು ಇಂದಿಗೂ ಖಾಸಗಿಯಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಶೇ 25ರ ಬಡ್ಡಿಯಲ್ಲಿ ಸಾಲ ಪಡೆದು ವ್ಯವಹಾರ ಮಾಡುತ್ತಾರೆ. ಇಂತಹ ಗ್ರಾಹಕರು ಎಲ್ಲ ಕಡೆಗಳಲ್ಲಿ ಇದ್ದಾರೆ. ಅಂತಹವರನ್ನು ಗುರುತಿಸಿ ನಮ್ಮ ಸೇವೆ ತಲುಪಿಸಿದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದು ಇಲ್ಲ ಎಂದು ತಿಳಿಸಿದರು.

ಸಾಂಪ್ರದಾಯಿಕ ಮನಃಸ್ಥಿತಿಯಿಂದ ಸಹಕಾರಿ ಬ್ಯಾಂಕುಗಳು ಹೊರಬರಬೇಕು. ಪ್ರತಿಯೊಂದು ಸಾಲಕ್ಕೆ ‘ಸೆಕ್ಯುರಿಟಿ’ ಕೇಳಬಾರದು. ಹೊಸ ಉದ್ಯಮ ಆರಂಭಿಸಲು ಸಾಲ ಕೊಡಲ್ಲ ಎಂದರೆ ನಿಮ್ಮ ಬೆಳವಣಿಗೆ ಆಗುವುದಿಲ್ಲ. ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ನಮ್ಮ ಬ್ಯಾಂಕುಗಳು ಇರುವುದಲ್ಲ. ಬಡವರು ಸ್ವಾಭಿಮಾನಿಗಳಾಗಿ ಬದುಕಲು ಅನುಕೂಲ ಮಾಡಿಕೊಡಬೇಕು. ಶೋಷಿತ ವರ್ಗದ ದುಡಿಯುವವರನ್ನು ಗುರುತಿಸಿ ಸಾಲ ಕೊಡಬೇಕು ಎಂದರು.

ಸಹಕಾರ ಕ್ಷೇತ್ರದ ಬಗ್ಗೆ ನಮ್ಮ ಹಿರಿಯರಿಗೆ ಇದ್ದ ಆಸಕ್ತಿ, ಕಾಳಜಿ ಇಂದಿನ ಯುವಕರಲ್ಲಿ ಕಾಣಿಸುತ್ತಿಲ್ಲ. ಹೀಗಾಗಿಯೇ ಸಹಕಾರಿ ಕ್ಷೇತ್ರದವರು ವಿಫಲರಾಗುತ್ತಿದ್ದಾರೆ. ರಾಜಕೀಯ, ಚುನಾವಣೆಗೆ ಇರುವ ಉತ್ಸಾಹ ಅದನ್ನು ಬೆಳೆಸುವುದರ ಬಗ್ಗೆ ಇಲ್ಲ. ಸಹಕಾರಿ ಬ್ಯಾಂಕುಗಳು ರಾಜಕೀಯ ಮೆಟ್ಟಿಲು ಅಲ್ಲ, ಅದು ಸೇವಾ ಕ್ಷೇತ್ರದ ಮೆಟ್ಟಿಲು ಎಂಬ ಭಾವನೆ ಬರಬೇಕಿದೆ. ಯುವಕರು ಈ ಕ್ಷೇತ್ರಕ್ಕೆ ಬರಬೇಕು. ಇದರಲ್ಲಿ ಇರುವ ಅಧಿಕಾರ ಯಾವ ಮಂತ್ರಿ, ಎಂಎಲ್‌ಎಗೂ ಇಲ್ಲ ಎಂದು ಹೇಳಿದರು.

ಇದುವರೆಗೆ ಎಲ್ಲ ಸಹಕಾರಿ ಬ್ಯಾಂಕುಗಳು ಆರ್‌ಬಿಐ ಅಡಿಯಲ್ಲಿ ಕೆಲಸ ನಿರ್ವಹಿಸಬೇಕಿತ್ತು. ಈಗ ಹಾಗಿಲ್ಲ. ಇದಕ್ಕಾಗಿಯೇ ಪ್ರತ್ಯೇಕ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಈ ಸಂಸ್ಥೆ ಎಲ್ಲ ರೀತಿಯಿಂದಲೂ ಸಹಕಾರಿ ಬ್ಯಾಂಕುಗಳಿಗೆ ಮಾರ್ಗದರ್ಶನ ಮಾಡುತ್ತದೆ. ಏಪ್ರಿಲ್‌ನಿಂದ ಇದು ಅಧಿಕೃತವಾಗಿ ಕೆಲಸ ಆರಂಭಿಸಲಿದೆ. ಸಹಕಾರಿಗಳನ್ನು ಯಾರು ಕೇಳುವವರು ಇಲ್ಲವೆಂಬ ಚಿಂತೆ ಇದರಿಂದ ದೂರವಾಗಲಿದೆ ಎಂದು ವಿವರಿಸಿದರು.

ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ಮಾತನಾಡಿ, 1974ರಲ್ಲಿ ಗಾಂಧಿಗಂಜ್‌ ವ್ಯಾಪಾರಸ್ಥರು ಸೇರಿಕೊಂಡು ಬ್ಯಾಂಕ್‌ ಆರಂಭಿಸಿದ್ದರು. ಮಹಾಂತಪ್ಪ ಮಡಕಿ ಅಧ್ಯಕ್ಷತೆಯಲ್ಲಿ 189 ಜನ ಸದಸ್ಯರು ₹1.82 ಲಕ್ಷ ಷೇರು ಬಮಡವಾಳದೊಂದಿಗೆ ಬ್ಯಾಂಕ್‌ ಶುರು ಮಾಡಿದ್ದರು. ಈಗ ₹5.19 ಕೋಟಿ ಷೇರು ಬಂಡವಾಳ ಹೊಂದಿದೆ. ಬೀದರ್‌ ನಗರದ ಶಿವನಗರ, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್‌, ಔರಾದ್‌ನಲ್ಲಿ ಶಾಖೆಗಳನ್ನು ಹೊಂದಿದೆ. 2023–24ನೇ ಸಾಲಿನಲ್ಲಿ ₹1.26 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಸಚಿವ ರಹೀಂ ಖಾನ್‌ ವಿಶೇಷ ಠೇವಣಿ ಯೋಜನೆಗೆ ಚಾಲನೆ ನೀಡಿದರು. ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಎಂ.ಜಿ. ಮುಳೆ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರಕುಮಾರ್‌ ಖಂಡ್ರೆ, ಉಪಾಧ್ಯಕ್ಷ ಅಭಿಷೇಕ್‌ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಬ್ಯಾಂಕಿನ ಉಪಾಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ನಿರ್ದೇಶಕರಾದ ಅಶೋಕಕುಮಾರ ಲಾಚುರಿಯಾ, ಡಿ.ವಿ. ಸಿಂದೋಲ, ಕಾಶಿನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಜೈಕುಮಾರ ಕಾಂಗೆ, ಸುನೀಲಕುಮಾರ ಬಿರಾದಾರ ಗುನ್ನಳ್ಳಿ, ಅಂತೇಶ್ವರ ಶೆಟಕಾರ, ಕೆ.ಕೆ. ಅಟ್ಟಲ್‌, ಭರತ ಶೆಟಕಾರ, ಶಿವನಾಥ ಪಾಟೀಲ, ಅಮರನಾಥ ಫುಲೇಕರ್‌, ಮಲ್ಲಿಕಾರ್ಜುನ ಕಾರಬಾರಿ, ಶಾಂತಾ ಖಂಡ್ರೆ, ಜ್ಯೋತಿ ಗೌರಶೆಟ್ಟಿ, ಶ್ರೀಕಾಂತ, ವಿಶ್ವನಾಥ ಕೋಡಗೆ, ಶಕುಂತಲಾ ಬೆಲ್ದಾಳೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾನಂದ ಪಾಟೀಲ ಹಾಜರಿದ್ದರು. ಪೂರ್ಣಚಂದ್ರ ಮೈನಾಳೆ ತಂಡದವರು ಭರತನಾಟ್ಯ ಪ್ರಸ್ತುತಪಡಿಸಿದರು.

‘ಕಾಯಕ, ದಾಸೋಹ ಪ್ರೇರಣೆಯಾಗಲಿ’

‘ಸಹಕಾರಿ ಬ್ಯಾಂಕುಗಳಿಗೆ ಹನ್ನೆರಡನೇ ಶತಮಾನದ ಬಸವಣ್ಣನವರ ಕಾಯಕ ಮತ್ತು ದಾಸೋಹತತ್ವ ಪ್ರೇರಣೆಯಾಗಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಬಸವಣ್ಣನವರು ಆರ್ಥಿಕತೆಗೆ ಬಹಳ ಒತ್ತು ಕೊಟ್ಟಿದ್ದರು. ಅವರು ಕಾಯಕ ಮತ್ತು ದಾಸೋಹ ತತ್ವವನ್ನು ಜಾರಿಗೆ ತಂದಿದ್ದರು. ಹೇಗೆ ಸಂಪಾದಿಸಬೇಕು? ಹೇಗೆ ಬಳಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು. ಅದಕ್ಕಾಗಿಯೇ ಸದಾ ಬಿಜ್ಜಳ ರಾಜನ ಭಂಡಾರ ತುಂಬಿರುತ್ತಿತ್ತು. ಕಲ್ಯಾಣ ಪಟ್ಟಣದಲ್ಲಿ ನೀಡುವವರುಂಟು ಬೇಡುವವರಿಲ್ಲ. ಬೇಡುವವರಿಲ್ಲದ ಕಾರಣ ನಾನು ಬಡವನಾದೆ ಎಂದು ಬಸವಣ್ಣ ಹೇಳಿದ್ದ. ಆ ರೀತಿ ಬ್ಯಾಂಕುಗಳು ಕೆಲಸ ಮಾಡಬೇಕಿದೆ. ಬ್ಯಾಂಕುಗಳಿಗೆ ಸಣ್ಣ ವ್ಯಾಪಾರಿಗಳಿಗೆ ಸಾಲ ಕೊಟ್ಟು ಬೆಳೆಸಿದರೆ ಸಮಾಜ ಅಭಿವೃದ್ಧಿ ಆಗುತ್ತದೆ. ಅದು ಬ್ಯಾಂಕಿನ ನಿಜವಾದ ಕೆಲಸವೂ ಹೌದು. ನಾನು ಕೂಡ ಗಾಂಧಿ ಗಂಜ್‌ ಬ್ಯಾಂಕಿನಿಂದ ಸಾಲ ಪಡೆದು ಬೀದರ್‌ನಲ್ಲಿ ಪ್ರಸಾದ ನಿಲಯಕ್ಕೆ ಜಾಗ ಖರೀದಿಸಿದ್ದೆ. ಅದರ ಸಾಲ ಕೂಡ ಮರುಪಾವತಿ ಮಾಡಿದ್ದೇನೆ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

‘ಸಾಲ ಮನ್ನಾ ಭಾವನೆ ತೊಲಗಲಿ’

‘ಬ್ಯಾಂಕುಗಳು ಸಕಾಲಕ್ಕೆ ಸಾಲ ಮರುಪಾವತಿ ಮಾಡಿಸಿಕೊಳ್ಳಬೇಕು. ಜನ ಕೂಡ ಸಾಲ ಮನ್ನಾ ಆಗುತ್ತದೆ ಎಂಬ ಭಾವನೆಯಿಂದ ಹೊರಬರಬೇಕು. ಆ ಭಾವನೆ ತೊಲಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವುದೇ ಸಹಕಾರ ಬ್ಯಾಂಕುಗಳು ಯಶಸ್ವಿಯಾಗಿ ನಡೆಯಬೇಕಾದರೆ ವಿಶ್ವಾಸಾರ್ಹತೆ ಬಹಳ ಮುಖ್ಯ. ಭ್ರಷ್ಟಾಚಾರ ಆಗಬಾರದು. ಈ ರೀತಿ ಆಗದ ಕಾರಣ ಜಿಲ್ಲೆಯ ಅನೇಕ ಬ್ಯಾಂಕುಗಳು ಅವನತಿ ಹಾದಿ ಹಿಡಿದಿವೆ. ಅರ್ಹರಿಲ್ಲದವರಿಗೆ ಸಾಲ ಕೊಟ್ಟಿರುವುದರಿಂದ ಈ ರೀತಿ ಆಗಿದೆ. ಇದರಿಂದ ಬ್ಯಾಂಕುಗಳು ಹೊರಬರಬೇಕು. ಸಹಕಾರ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದರೆ ಈ ರೀತಿ ಮಾಡಬೇಕಾಗುತ್ತದೆ. ಇದರಿಂದ ಜಿಲ್ಲೆಯ ಆರ್ಥಿಕ ಮಟ್ಟ ಕೂಡ ಸುಧಾರಣೆಯಾಗುತ್ತದೆ ಎಂದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಇದು ಸಹಕಾರ ಕ್ಷೇತ್ರದ ತತ್ವ. ರಾಜ್ಯದ ಒಂದು ಭಾಗದಲ್ಲಿ ಖಾಸಗಿ ಬ್ಯಾಂಕುಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಕೆನರಾ, ಸಿಂಡಿಕೇಟ್‌, ಮೈಸೂರು ಬ್ಯಾಂಕುಗಳೆಲ್ಲ ಆ ಭಾಗದಲ್ಲಿ ಹುಟ್ಟಿರುವುದರಿಂದ ಆ ಭಾಗದವರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಆ ತರಹ ಈ ಭಾಗದಲ್ಲಿ ಆಗಲಿಲ್ಲ. ಆದರೆ, ಮುಂದೆ ಅದಕ್ಕೆ ಸಾಧ್ಯತೆಗಳಿವೆ ಎಂದು ಹೇಳಿದರು.

‘ಸಹಕಾರ ಕ್ಷೇತ್ರದಲ್ಲಿ ರಾಜಕೀಯ, ಭ್ರಷ್ಟಾಚಾರ ಇರಬಾರದು’

‘ಸಹಕಾರ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ರಾಜಕೀಯ ಪ್ರಭಾವ ಸಂಪೂರ್ಣ ತೊಲಗಬೇಕು. ಕೇಂದ್ರ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ಸಹಕಾರ ಇಲಾಖೆ ಆರಂಭಿಸಿತು. ಗೃಹಸಚಿವ ಅಮಿತ್‌ ಷಾ ಅವರು ಅದರ ಜವಾಬ್ದಾರಿ ವಹಿಸಿಕೊಂಡು ಅನೇಕ ಸುಧಾರಣೆಗಳನ್ನು ತಂದಿದ್ದಾರೆ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.

ಡಿಸಿಸಿ ಬ್ಯಾಂಕ್‌, ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿ ಇರುವುದರಿಂದ ರೈತರ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಿದೆ. ಆದರೆ, ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬುವ ಅಗತ್ಯವಿದೆ. ರಾಜಕೀಯ ಬದಿಗೊತ್ತಿ, ರಾಜ್ಯ, ಕೇಂದ್ರ ಸರ್ಕಾರ ಜೊತೆಗೂಡಿ ಎಲ್ಲರ ಸಹಕಾರದಿಂದ ಬಲಪಡಿಸಬೇಕು ಎಂದು ತಿಳಿಸಿದರು.

‘ಎರಡು ದಶಕಗಳಲ್ಲಿ ಬ್ಯಾಂಕುಗಳು ಹಾಳು’

‘ದೇಶದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಹೇಗೆ ಹಾಳು ಮಾಡಬಹುದು ಎಂದು ತೋರಿಸಿಕೊಡಲಾಗಿದೆ. ದೇಶದಲ್ಲಿ 1,500ಕ್ಕೂ ಹೆಚ್ಚು ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ಈ ದುಷ್ಟ ಆಲೋಚನೆ ಈಗ ಬದಲಾಗಿದೆ. ಆರ್‌ಬಿಐ ವಿರುದ್ಧ ಸಹಕಾರಿಗಳ ದೊಡ್ಡ ಹೋರಾಟದಿಂದ ಇದು ಬದಲಾಗಿದೆ. ಆರ್‌ಬಿಐ ಆಲೋಚನೆಯೂ ಈಗ ಬದಲಾಗಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಸಣ್ಣ ಸಣ್ಣ ಬ್ಯಾಂಕುಗಳಿಂದ ಉತ್ತಮ ಸೇವೆ ಕೊಡಬಹುದು. ಅದಕ್ಕಾಗಿಯೇ ‘ಸ್ಮಾಲ್‌ ಇಸ್‌ ಬ್ಯೂಟಿಫುಲ್‌’ ಎಂದು ಹೇಳುವುದು. ಕಿರು ಕೈಗಾರಿಕೆಗಳು, ಹಣಕಾಸಿನ ಸೇವೆಗಳಿಗೆ ಸಣ್ಣ ಬ್ಯಾಂಕುಗಳಿಂದ ಉತ್ತಮ ಸೇವೆ ನೀಡಬಹುದು. ಸಹಕಾರಿ ಬ್ಯಾಂಕುಗಳಿಗೆ ಸರ್ಕಾರದ ದೊಡ್ಡ ಬೆಂಬಲ ಇರುವುದಿಲ್ಲ. ಅವುಗಳು ಬೆಳೆದಿದ್ದರೆ ಸಾರ್ವಜನಿಕರ ವಿಶ್ವಾಸಾರ್ಹತೆಯಿಂದ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.