ಹುಮನಾಬಾದ್: ಸಾಂಪ್ರದಾಯಿಕ ಕೃಷಿಯಲ್ಲಿ ಯಶ ಕಾಣದ ತಾಲ್ಲೂಕಿನ ಕನಕಟ್ ಗ್ರಾಮದ ರೈತ ತುಕಾರಾಮ ಅವರು ಹನಿ ನೀರಾವರಿ ಪದ್ಧತಿ ಅಳವಡಿಸಿ ಬುಲೆಟ್ ರೋಸ್ ಬೆಳೆದು ಎರಡೇ ವರ್ಷದಲ್ಲಿ ಆರ್ಥಿಕವಾಗಿ ಸಬಲರಾಗಿ ನಿರಂತರ ಆದಾಯ ಕಂಡುಕೊಳ್ಳುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಸಹಾಯ ಪಡೆದು ಕ್ಷೇತ್ರದಲ್ಲಿ ಶ್ರಮವಹಿಸಿ ದುಡಿದು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಾಲ ಮುಕ್ತರಾಗಿದ್ದಾರೆ.
ತೆರೆದ ಬಾವಿಯಲ್ಲಿ ಕಡಿಮೆ ನೀರು ಲಭ್ಯವಿದ್ದ ಕಾರಣ ಕಂಗಾಲಾಗಿದ್ದ ರೈತ ತುಕಾರಾಮ ಅವರು ಇರುವ ನೀರಿನಲ್ಲೇ ಹನಿ ನೀರಾವರಿ ವ್ಯವಸ್ಥೆಯ ಮೂಲಕ ಹೂವು ಬೆಳೆಯಲು ಮುಂದಾದರು. ನರೇಗಾ ಯೋಜನೆಯ ನೆರವಿನಿಂದ
1 ಎಕರೆ ಜಮೀನಿನಲ್ಲಿ ಒಟ್ಟು 2 ಸಾವಿರ ಬಟನ್ ಹಾಗೂ ಪನ್ನೀರ್ ರೋಸ್ ಸಸಿಗಳನ್ನು ನಾಟಿ ಮಾಡಿದ್ದಾರೆ.
ಪ್ರತಿ ಕೆ.ಜಿಗೆ ₹80ರಿಂದ ₹90ನಂತೆ ಪ್ರತಿದಿನ ಸುಮಾರು 25 ಕೆ.ಜಿಗೂ ಅಧಿಕ ಹೂವುಗಳನ್ನು ಮಾರಾಟ ಮಾಡುತ್ತಾರೆ. ಕಾಡಯಂ ಗ್ರಾಹಕರು ಇರುವುದರಿಂದ ಮಾರಾಟದ ಸಮಸ್ಯೆ
ಇಲ್ಲ.
ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವುದರಿಂದ ಆದಾಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದು ವರ್ಷದಲ್ಲಿ ₹1.50 ಲಕ್ಷಕ್ಕೂ ಅಧಿಕ ಆದಾಯ ಕಂಡುಕೊಂಡಿದ್ದಾರೆ. ಆಗಾಗ ಕಾಡುವ ಕಿಟಬಾಧೆಯಿಂದ ಸಿಸಿಗಳನ್ನು ಸಂರಕ್ಷಿಸಲು ಔಷಧ ಸಿಂಪಡಣೆ ಮತ್ತು ಇನ್ನಿತರ ಖರ್ಚುಗಳನ್ನು ನಿಭಾಯಿಸಿದರೆ ಉಳಿದಂತೆ ಯಾವುದೇ ಖರ್ಚುಗಳಿಲ್ಲ. ಒಮ್ಮೆ ನಾಟಿ ಮಾಡಿದರೆ ನಾಲ್ಕು ವರ್ಷ ಉತ್ಪನ್ನ ಪಡೆಯಬಹುದು ಎಂಬುದು ರೈತ ತುಕಾರಾಮ ಅನುಭವದ
ಮಾತು.
ನರೇಗಾ ಯೋಜನೆ ಸದುಪಯೋಗ ಮಾಡಿಕೊಂಡು ರೈತ ತುಕಾರಾಮ ಅವರು ಬುಲೆಟ್ ಹಾಗೂ ಪನೀರ್ ರೋಸ್ ಕೃಷಿಯ ಮೂಲಕ ಆರ್ಥಿಕ ಸಬಲರಾಗಿದ್ದಾರೆ. ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಹಾಗೂ ನಿರಂತರ ಆದಾಯದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಇತರರಿಗೆ ಮಾದರಿಯಾಗಿದ್ದಾರೆ.
ಕಡಿಮೆ ನೀರಿದ್ದರೂ ಹನಿ ನೀರಾವರಿ ಪದ್ಧತಿ, ಸರ್ಕಾರ ವಿವಿಧ ಯೋಜನೆಗಳು ಸದುಪಯೋಗ ಪಡೆದು ಕೃಷಿಮಾಡಿ ಆರ್ಥಿಕ ಗುಣಮಟ್ಟ ಸುಧಾರಿಸಿಕೊಂಡಿರುವ ತಯಕಾರಾಮ್ ಇತರ ರೈತರಿಗೆ ಮಾದರಿಯಾಗಿದ್ದಾರೆ.-ಸಂತೋಷ್ ತಾಂಡುರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಹುಮನಾಬಾದ್
ತರಕಾರಿ ಬೆಳೆಯುತ್ತಿದ್ದಾಗ ಅಷ್ಟೊಂದು ಆದಾಯ ಸಿಗಲಿಲ್ಲ. ತೋಟಗಾರಿಕೆ ಅಧಿಕಾರಿಗಳ ಸಲಹೆಯಿಂದಾಗಿ ಬುಲೆಟ್ ರೋಸ್ ಕೃಷಿಯತ್ತ ತೋರಿದ ಒಲವು ಆರ್ಥಿಕ ಸ್ಥಿತಿ ಬದಲಾಗಿದೆ-ತುಕಾರಾಮ, ಹೂವು ಬೆಳೆಗಾರ, ಕನಕಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.