ಖಟಕಚಿಂಚೋಳಿ: ಸಮೀಪದ ಚಾಳಕಾಪುರ ಗ್ರಾಮದ ಹನುಮಾನ ದೇವರ ಜಾತ್ರೆ ನ.1 ರಿಂದ 3ರವರೆಗೆ ನಡೆಯಲಿದ್ದು ದೇಗುಲದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಈಗಾಗಲೇ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ. ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾತ್ರೆಗೆ ಸ್ವಾಗತ ಕೋರುವ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ.
ದೀಪಾವಳಿ ಸಂದರ್ಭದಲ್ಲಿ ನಡೆಯುವ ಜಾತ್ರೆಗೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಅನೇಕರು ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ. ಬಹಳಷ್ಟು ಜನ ದೇವಸ್ಥಾನದಲ್ಲಿ ತೆಂಗಿನಕಾಯಿ ಕಟ್ಟುತ್ತಾರೆ. ಹಿಂದಿನಿಂದಲೂ ಈ ಪರಂಪರೆ ನಡೆದುಕೊಂಡು ಬಂದಿದೆ.
‘ಆಂಜನೇಯ ಮೂರ್ತಿಗಳು ಬಹುತೇಕ ದಕ್ಷಿಣಾಭಿಮುಖವಾಗಿ ಇರುತ್ತವೆ. ಆದರೆ, ಚಳಕಾಪುರದಲ್ಲಿ ಉತ್ತರಾಭಿಮುಖವಾಗಿರುವುದು ವಿಶೇಷವಾಗಿದೆ. ವರ್ಷವಿಡೀ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟು ಹನುಮಾನ ದೇವರ ದರ್ಶನ ಪಡೆಯುತ್ತಾರೆ’ ಗ್ರಾಮದ ಹಿರಿಯರು.
ಮೂರು ದಿನಗಳ ಜಾತ್ರೆ: ‘ಜಾತ್ರೆ ಆರಂಭವಾಗುವ ಮೊದಲ ದಿನ ನ.1 ರಂದು ಬೆಳಿಗ್ಗೆ 6ಗಂಟೆಗೆ ಕಾಕಡ ಆರತಿ, ಮಧ್ಯಾಹ್ನ 12 ಗಂಟೆಗೆ ಅಭಿಷೇಕ, ರಾತ್ರಿ 10 ಗಂಟೆಯಿಂದ ಮರುದಿನ ಬೆಳಿಗ್ಗೆ 5ರವರೆಗೆ ನಡೆಯಲಿರುವ ಆನೆಯ ಮೇಲೆ ಹನುಮಾನ ದೇವರ ಮೆರವಣಿಗೆಗೆ ಸಂಸದ ಸಾಗರ ಖಂಡ್ರೆ ಚಾಲನೆ ನೀಡುವರು. ನ.2ರಂದು ಬೆಳಿಗ್ಗೆ 9 ಗಂಟೆಗೆ ಅಲಂಕಾರ ಪೂಜೆ ಜರುಗುವುದು. ಸಂಜೆ 4.30ಕ್ಕೆ ನಡೆಯುವ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೆರವೇರಿಸುವರು. ಸಂಜೆ 6.30 ಹನುಮಾನ ಮಂದಿರದಿಂದ ಮಹಾದೇವ ಮಂದಿರ ಮಾರ್ಗದಿಂದ ಸಂಜೀವಿನಿ ಪರ್ವತದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ನ.3ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ಜಂಗಿ ಕುಸ್ತಿಯಲ್ಲಿ ಮಹಿಳಾ, ಪುರುಷ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ’ ಎಂದು ದೇವಾಲಯದ ಆಡಳಿತ ಮಂಡಳಿಯ ಸಹಾಯಕ ಆಯುಕ್ತರು ಮುಕುಂದ ಜೈನ್ ತಿಳಿಸಿದ್ದಾರೆ.
ಪ್ರತಿ ವರ್ಷ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಈಗಾಗಲೇ ದೇವಾಲಯದ ಸುತ್ತಲೂ ಸುಮಾರು ಒಂದು ಕಿ.ಮೀ ವರೆಗೆ ತೆಂಗಿನಕಾಯಿ, ಆಟಿಕೆ ಸೇರಿದಂತೆ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ತಲೆಯೆತ್ತಿವೆ. ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
‘ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನೇಮಕ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಅಲ್ಲದೇ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಹನುಮಾನ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮೂರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸರ್ವಧರ್ಮಗಳ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆಸುಭಾಷ ಕೆನಾಡೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.