ADVERTISEMENT

ಚಳಕಾಪುರ: ಹನುಮಾನ ಜಾತ್ರಾ ಸಂಭ್ರಮ

ಗಿರಿರಾಜ ಎಸ್ ವಾಲೆ
Published 11 ನವೆಂಬರ್ 2023, 4:55 IST
Last Updated 11 ನವೆಂಬರ್ 2023, 4:55 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಹನುಮಾನ ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಹನುಮಾನ ದೇವಾಲಯಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು   

ಖಟಕಚಿಂಚೋಳಿ: ಹೋಬಳಿಯ ಚಳಕಾಪುರ ಗ್ರಾಮದ ಐತಿಹಾಸಿಕ ಪ್ರಸಿದ್ಧ ಪುರಾಣ ಹನುಮಾನ ದೇವರ ಜಾತ್ರಾ ಮಹೋತ್ಸವ ನ.13 ರಿಂದ ನಡೆಯಲಿರುವ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಭಾಲ್ಕಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹನುಮಾನ ದೇವರು ಉತ್ತರಾಭಿಮುಖವಾಗಿ ನಿಂತಿರುವುದು ಇಲ್ಲಿಯ ವಿಶೇಷವಾಗಿದೆ. ಹೀಗಾಗಿ ಹನುಮಾನ ದೇವರ ದರ್ಶನ ಪಡೆಯಲು ಜಿಲ್ಲೆಯ ವಿವಿಧ ಗ್ರಾಮಗಳ ಜನ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹರಕೆ ಹೊತ್ತು ದೇವಸ್ಥಾನದಲ್ಲಿ ತೆಂಗಿನ ಕಾಯಿ ಕಟ್ಟುತ್ತಾರೆ. ಹರಕೆ ಈಡೇರಿದ ನಂತರ ತೆಂಗಿನ ಕಾಯಿ ತೆಗೆದುಕೊಂಡು ಹೋಗುತ್ತಾರೆ ಎಂದು ಪ್ರಮುಖರಾದ ಸಂಜುಕುಮಾರ ಜೈನಾಪುರೆ, ಸಂತೋಷ ಬೆಟ್ಟದ, ಕಲ್ಲಪ್ಪ ರುದ್ರಪ್ಪನೊರ್ ತಿಳಿಸುತ್ತಾರೆ.

‘ಮೂರು ದಿನಗಳ ಜಾತ್ರೆಯ ಮಾಹಿತಿಯನ್ನು ಈಗಾಗಲೇ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಅಲ್ಲದೇ ವಾಹನಗಳಲ್ಲಿ ಧ್ವನಿ ವರ್ಧಕ ಅಳವಡಿಸಿ ಕಾರ್ಯಕ್ರಮದ ಮಾಹಿತಿ ನೀಡಲಾಗುತ್ತಿದೆ’ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

ADVERTISEMENT
ಗ್ರಾಮದ ಆಂಜನೇಯ ಸ್ವಾಮಿ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುವುದಲ್ಲದೇ ಇಷ್ಟಾರ್ಥಗಳನ್ನು ಪೂರೈಸುವರೆಂಬ ಅಚಲವಾದ ನಂಬಿಕೆ ಭಕ್ತರಿಗಿದೆ.
ಸುಭಾಷ ಕೆನಾಡೆ, ನಿವಾಸಿ

ಹನುಮಾನ ದೇವರ ಜಾತ್ರಾ ಮಹೋತ್ಸವದ ಒಂದು ವಾರದ ಮುಂಚೆಯೇ ಗ್ರಾಮದ ಎಲ್ಲೆಡೆ ಸಡಗರ, ಉಲ್ಲಾಸ ಮನೆ ಮಾಡಿದೆ. ಉತ್ತರಾಭಿಮುಖ ಹನುಮಾನ ದೇವಸ್ಥಾನ ಸುಣ್ಣ, ಬಣ್ಣಗಳಿಂದ ಅಲಂಕಾರಗೊಂಡಿದ್ದು, ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದೆ.

‘ಹಿಂದೆ ಆಂಜನೇಯ ದ್ರೋಣಗಿರಿ ಪರ್ವತದಿಂದ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನಮ್ಮ ಗ್ರಾಮದ ದಕ್ಷಿಣ ಭಾಗದಲ್ಲಿ ಪರ್ವತದ ಒಂದು ಸಣ್ಣ ಕಲ್ಲು ಬಿದ್ದಿತ್ತು, ಅದೇ ಇಂದು ಸಂಜೀವಿನಿ ಪರ್ವತವಾಗಿ ಬೆಳೆದು ಪ್ರಸಿದ್ಧಿ ಪಡೆದಿದೆ ಎಂಬ ಪ್ರತೀತಿ ಇದೆ. ಈ ಸಂಜೀವಿನಿ ಬೆಟ್ಟದಲ್ಲಿ ರಾಮನ ಭಕ್ತಳಾದ ಚಳಕಾದೇವಿಯ ಭವ್ಯ ಮೂರ್ತಿ, ಶಿವಲಿಂಗ ಸ್ಥಾಪಿಸಲ್ಪಟ್ಟಿದೆ ಎಂದು ಗ್ರಾಮದ ಹಿರಿಯರಾದ ಬಾಳುರಾವ್ ಕುಲಕರ್ಣಿ, ರಾಮಣ್ಣ ಚನ್ನಾಳೆ ಪೌರಾಣಿಕ ಹಿನ್ನೆಲೆ ಬಗ್ಗೆ ಹೇಳಿದರು.

ಚಾಳಕಾದೇವಿ ಹೆಸರಿನ ಮೇಲೆ ಗ್ರಾಮಕ್ಕೆ ಚಳಕಾಪೂರ ಎಂಬ ಹೆಸರು ಬಂದಿದೆ. ಇಲ್ಲಿ ಆಂಜನೇಯ ಸ್ವಾಮಿ ಬಂದಿದ್ದ ಪಾದದ ಗುರುತು ಇವೆ. ದೀಪಾವಳಿ ಮತ್ತು ದವನದ ಹುಣ್ಣಿಮೆ (ಹನುಮಾನ ಜಯಂತಿ) ಒಳಗೊಂಡು ವರ್ಷದಲ್ಲಿ ಎರಡು ಸಾರಿ ಜಾತ್ರೆ ನಡೆಯುತ್ತದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಬಲಭೀಮ ಜೋಷಿ.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಖಟಕಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ ಪಾಟೀಲ ತಿಳಿಸಿದ್ದಾರೆ.

ಜಾತ್ರೆಯ ವಿವರ

ನ.13 ರಂದು ಬೆಳಿಗ್ಗೆ 6 ಗಂಟೆಗೆ ಕಾಕಡಾರತಿ, ಮಧ್ಯಾಹ್ನ 12ಕ್ಕೆ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯುವುದು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4ರವರೆಗೆ ಹನುಮಾನ ಮಂದಿರ ದೇವರ ಅಂಬಾರಿ ಉತ್ಸವ ನಡೆಯುವುದು. ನ.14 ರಂದು ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನ ವಿಶೇಷ ಪೂಜೆ ನಡೆಯುವುದು. ಸಂಜೆ 4.30ಕ್ಕೆ ಧ್ವಜಾರೋಹಣ ನೆರವೇರುವುದು. ನಂತರ ಗ್ರಾಮದ ಹೊರವಲಯದಲ್ಲಿರುವ ಸಂಜೀವಿನಿ ಪರ್ವತದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು. ನ.15 ರಂದು ಬೆಳಿಗ್ಗೆ 9 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಮಹಾದೇವ ಮಂದಿರದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುವುದು ಎಂದು ತಿಳಿಸಲಾಗಿದೆ.

ಅಲಂಕೃತ ಹನುಮಾನ ದೇವರ ಮೂರ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.