ADVERTISEMENT

ಬೀದರ್; ಪೊಲೀಸರಿಲ್ಲದ ಸಮಾಜ ಕಲ್ಪಿಸಿಕೊಳ್ಳುವುದು ಕಷ್ಟ: ನ್ಯಾಯಾಧೀಶ ಕೌಶಿಕ್‌

ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 5:16 IST
Last Updated 21 ಅಕ್ಟೋಬರ್ 2024, 5:16 IST
<div class="paragraphs"><p>ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಆರ್‌.ಎನ್‌. ಅವರು ಮೊದಲಿಗೆ ಪೊಲೀಸ್‌ ಹುತಾತ್ಮ ಸ್ಮಾರಕಕ್ಕೆ ಹೂದಂಡೆ ಅರ್ಪಿಸಿ ಗೌರವ ಸಲ್ಲಿಸಿದರು.</p></div>

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಆರ್‌.ಎನ್‌. ಅವರು ಮೊದಲಿಗೆ ಪೊಲೀಸ್‌ ಹುತಾತ್ಮ ಸ್ಮಾರಕಕ್ಕೆ ಹೂದಂಡೆ ಅರ್ಪಿಸಿ ಗೌರವ ಸಲ್ಲಿಸಿದರು.

   

ಬೀದರ್‌: ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಪೊಲೀಸ್‌ ಹುತಾತ್ಮರ ದಿನ ಆಚರಿಸಲಾಯಿತು.

ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಮೂರು ಸಲ ರಾಷ್ಟ್ರಗೀತೆ ಹಾಡಿದರು. ಪೊಲೀಸ್‌ ಧ್ವಜವನ್ನು ಅರ್ಧಕ್ಕೆ ಇಳಿಸಿ, ಎರಡು ನಿಮಿಷ ಮೌನ ಆಚರಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸಿದರು. ಪೊಲೀಸ್ ಬ್ಯಾಂಡ್‌ನವರು ಶೋಕ ಸಂಗೀತ ನುಡಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಆರ್‌.ಎನ್‌. ಅವರು ಮೊದಲಿಗೆ ಪೊಲೀಸ್‌ ಹುತಾತ್ಮ ಸ್ಮಾರಕಕ್ಕೆ ಹೂದಂಡೆ ಅರ್ಪಿಸಿ ಗೌರವ ಸಲ್ಲಿಸಿದರು. ಇದಾದ ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಕಾಂತ ಗುದಗೆ ಗೌರವ ಅರ್ಪಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಹಾಲಿ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿಗಳು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ನ್ಯಾಯಾಧೀಶ ಸಚಿನ್ ಆರ್. ಕೌಶಿಕ್ ಮಾತನಾಡಿ, ಕರ್ತವ್ಯದಲ್ಲಿದ್ದಾಗ ಅನೇಕ ಪೊಲೀಸರು ಜೀವ ಕೊಟ್ಟಿದ್ದಾರೆ. ಅವರನ್ನು ಸ್ಮರಿಸಿ ಗೌರವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಪೊಲೀಸರು ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದು ಕೂಡ ಬಹಳ ಕಷ್ಟವಾಗುತ್ತದೆ. ಪೊಲೀಸರು ಇಲ್ಲದಿದ್ದರೆ ಯಾರೂ ನಿಶ್ಚಿಂತೆಯಿಂದ, ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಪೊಲೀಸರೇ ಮುಖ್ಯ ಕಾರಣ ಎಂದು ಹೇಳಿದರು.

ದೇವರ ಭಯದಿಂದ ನಡೆದುಕೊಂಡರೆ ಎಲ್ಲವೂ ಸರಿ ಇರುತ್ತೆ. ಎಲ್ಲರೂ ಸರಿಯಾಗಿ ಇರುತ್ತಾರೆ ಎಂಬ ಮಾತಿದೆ. ಆದರೆ, ವಾಸ್ತವದಲ್ಲಿ ಪೊಲೀಸರು ಮತ್ತು ಕಾನೂನಿನಿಂದಲೇ ಎಲ್ಲವನ್ನೂ ತಡೆಯಲು ಸಾಧ್ಯವಿದೆ. ದರೋಡೆಕೋರರು, ಅತ್ಯಾಚಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಅನೇಕ ಪೊಲೀಸರು ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಎಂಟರಿಂದ ಹತ್ತು ಜನ ಪೊಲೀಸರು ಕೆಲಸ ಮಾಡುವಾಗ ಜೀವ ಕಳೆದುಕೊಂಡಿದ್ದಾರೆ. ಅವರು ಮತ್ತು ಅವರ ಕುಟುಂಬದವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಸಿಆರ್‌ಪಿಎಫ್‌, ರೈಲ್ವೆ ಪೊಲೀಸರು, ಸಿಐಎಸ್‌ಎಫ್‌, ಬಿಎಸ್‌ಎಫ್‌, ಪೊಲೀಸರು ಹೀಗೆ ಬೇರೆ ಹೆಸರಿನಲ್ಲಿ ಪೊಲೀಸರು ದೇಶದಾದ್ಯಂತ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಂದಾಗಿ ಇಡೀ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, 1959ರ ಅಕ್ಟೋಬರ್‌ 21ರಂದು ಭಾರತದ ಗಡಿ ಪ್ರದೇಶ ಲಡಾಖ್‌ನಲ್ಲಿ ಚೀನಾ ದೇಶದ ಸೈನಿಕರ ವಿರುದ್ಧ ಶೌರ್ಯದಿಂದ ಹೋರಾಡುತ್ತ ಕರಣ್‌ ಸಿಂಗ್‌ ಸೇರಿದಂತೆ ಹತ್ತು ಪೊಲೀಸರು ಹುತಾತ್ಮರಾಗಿದ್ದರು. ಅವರ ನೆನಪಿನಲ್ಲಿ ಪ್ರತಿ ವರ್ಷ ಅಕ್ಟೋಬರ್‌ 21ರಂದು ಹುತಾತ್ಮ ದಿನವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

2023–24ನೇ ಸಾಲಿನಲ್ಲೂ ದೇಶದ ಹಲವು ರಾಜ್ಯಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಸಮಾಜಕ್ಕಾಗಿ ಅವರು ಮಾಡಿದ ತ್ಯಾಗ, ಸೇವೆ ಸ್ಮರಿಸಿ ಗೌರವ ಸಲ್ಲಿಸುವ ದಿನವಿದು ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.