ಬೀದರ್: 2025 ರೊಳಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ದೇಶದಿಂದ ಕಿತ್ತೊಗೆಯಬೇಕು ಕ್ಷಯಮುಕ್ತ ಭಾರತ ನಮ್ಮೆಲ್ಲರ ಕನಸಾಗಬೇಕು. ಪ್ರಜ್ಞಾವಂತ ನಾಗರಿಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಪ್ರಧಾನಿಗಳ ಕನಸು ನನಸುಗೊಳಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವಭಗವಂತ ಖುಬಾ ಹೇಳಿದರು.
ಇಲ್ಲಿಯ ಓಲ್ಡ್‌ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಹತ್ತು ಕ್ಷಯರೋಗಿಗಳಿಗೆ ದತ್ತು ಪಡೆದು ಪೌಷ್ಟಿಕ ಆಹಾರ ಮತ್ತು ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಉದ್ಯಮಿಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ರೋಗಿಗಳ ಖರ್ಚು ವೆಚ್ಚ ಭರಿಸುವ ಜತೆಗೆ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸುವ ಸರ್ಕಾರದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮೊದಲಿಗೆ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಆಪ್ತ ಸಮಾಲೋಚನೆ ಮಾಡಿ ರೋಗದಿಂದಾಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ತಿಳಿ ಹೇಳಿ ನಂತರ ಔಷಧ ನೀಡುವ ಕೆಲಸ ಆಗಬೇಕು. ರೋಗಿಗಳಿಗೆ ಔಷಧ ನೀಡುವುದು ಎಷ್ಟು ಮುಖ್ಯವೋ ಪೌಷ್ಟಿಕ ಆಹಾರ ನೀಡುವುದೂ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದರು.
ತಮ್ಮ ಪರಿಸರದಲ್ಲಿ ಬಹುದಿನಗಳ ಜ್ವರ, ವಾರಗಟ್ಟಲೆ ಕೆಮ್ಮು ಮತ್ತು ತೂಕ ಕಡಿಮೆಯಾಗುವಂತಹ ವ್ಯಕ್ತಿಗಳನ್ನು ಕಂಡರೆ ತಕ್ಷಣ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿ ಕೊಡಬೇಕು. ರೋಗಿಗಳಿಗೆ ಗುಣಮಟ್ಟದ ಔಷಧ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಶರಣಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಮಂತ್ರಿಗಳ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ 1,336 ರೋಗಿಗಳನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 23,970 ಸಂಶಯಾಸ್ಪದ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. 87 ರೋಗಿಗಳ ನೋಂದಣಿ ಮಾಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. 166 ಕ್ಷಯ ರೋಗಿಗಳನ್ನು ವಿವಿಧ ಹಂತಗಳಲ್ಲಿ ದತ್ತು ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರಾಜಶೇಖರ ಪಾಟೀಲ ಡಾ.ಕಿರಣ ಪಾಟೀಲ ತಾಲ್ಲೂಕು ಆರೋಗ್ಯ ಆಧಿಕಾರಿಗಳಾದ ಡಾ.ಸಂಗಾರೆಡ್ಡಿ, ಡಾ.ಸರೋಜಾ ಪಾಟೀಲ. ಡಾ.ಬುಟ್ಟೆ ಇದ್ದರು. ಡಾ.ಸೊಹೇಲ್ ಹುಸೇನ್ ಸ್ವಾಗತಿಸಿದರು. ಟಿ.ಎಂ.ಮಚ್ಚೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.