ಬೀದರ್: ಹದಿನೈದನೆಯ ಶತಮಾನದ ಬಹಮನಿ ಸುಲ್ತಾನರ ಕಾಲದಲ್ಲಿ ನಗರದಲ್ಲಿ ನಿರ್ಮಿಸಲಾಗಿದ್ದ ಭೂಕಾಲುವೆಗೆ ಅಪಾಯ ಬಂದೊದಗಿದೆ.
ಭೂಕಾಲುವೆಯ ಅಕ್ಕಪಕ್ಕ 20 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧ ವಿಧಿಸಿದ್ದರೂ, ಅಲ್ಲಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆದಿವೆ. 20 ಟನ್, 40 ಟನ್ ಮರಳು ತುಂಬಿದ ಲಾರಿಗಳು ಭೂಕಾಲುವೆ ಪ್ರದೇಶದಲ್ಲಿ ಓಡಾಡುತ್ತಿರುವ ಕಾರಣ ಭೂಮಿಯೊಳಗಿನ ಕಾಲುವೆಯೊಳಗೆ ಮಣ್ಣು ಕುಸಿದು ಬೀಳುವ ಆತಂಕ ಎದುರಾಗಿದೆ ಎಂದು ಸ್ಮಾರಕ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರು ಭೂಕಾಲುವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ₹ 3 ಕೋಟಿ ಅಂದಾಜು ವೆಚ್ಚದ ಪ್ರಸ್ತಾವ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿಕೊಟ್ಟಿದ್ದರು. ರಾಜ್ಯ ಸರ್ಕಾರ ₹ 3 ಕೋಟಿ ಮಂಜೂರು ಮಾಡಿತ್ತು. ಜಿಲ್ಲಾಡಳಿತ ಭೂಕಾಲುವೆಯಲ್ಲಿನ ಹೂಳು ತೆಗೆದ ನಂತರ ನಿರಂತರವಾಗಿ ನೀರು ಹರಿದು ಬರುತ್ತಿದೆ.
ಇದಾದ ನಂತರ ದೇಶ ವಿದೇಶಗಳ ಇತಿಹಾಸ ತಜ್ಞರು ಬೀದರ್‌ಗೆ ಭೇಟಿ ನೀಡಿ 600 ವರ್ಷಗಳ ಹಿಂದೆ ಮಳೆ ನೀರು ಸಂಗ್ರಹಿಸಲು ಬಳಸಿದ ತಂತ್ರಜ್ಞಾನ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದರು. ತದನಂತರ ಝ ರಾ ಕನ್ವೆನ್ಶನ್ ಹಾಲ್‌ನಲ್ಲಿ ಅಂತರರಾಷ್ಟ್ರೀಯ ಸಮಾವೇಶವೂ ನಡೆದಿತ್ತು. ಇದನ್ನು ವಿಶ್ವ ಪಾರಂಪರಿಕ ತಾಣವಾಗಿ ಉಳಿಸಿಕೊಳ್ಳಬೇಕು ಎಂದು ಸಮಾವೇಶದಲ್ಲಿ ಇತಿಹಾಸ ತಜ್ಞರು ಸರ್ಕಾರಕ್ಕೆ ಮನವಿ ಮಾಡಿದ್ದರು.
‘ಅನುರಾಗ್ ತಿವಾರಿ ಅವರು ವರ್ಗವಾಗಿ ಹೋದ ನಂತರ ಕಾಮಗಾರಿ ಸ್ಥಗಿತಗೊಂಡಿತು. ನಂತರ ಬಂದ ಜಿಲ್ಲಾಧಿಕಾರಿಗಳು ಆಸಕ್ತಿ ತೋರಿಸಲಿಲ್ಲ. ಜಿಲ್ಲಾಡಳಿತದ ಆದೇಶ ಗಾಳಿಗೆ ತೂರಿ ನಗರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಬೇಕಾಬಿಟ್ಟಿ ಅನುಮತಿ ಕೊಡುತ್ತಿದ್ದಾರೆ. ಕಾರಣ ಭೂಕಾಲುವೆ ಕುಸಿದು ಬೀಳುವ ಆತಂಕ ಹೆಚ್ಚಾಗಿದೆ’ ಎಂದು ಟೀಮ್ ಯುವಾದ ಸಂಚಾಲಕ ವಿನಯ ಮಾಳಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಭೂಕಾಲುವೆ ಸಂರಕ್ಷಣೆ ಕಾರ್ಯ 2015ರಲ್ಲಿ ಆರಂಭವಾಗಿ 2017ರ ಜೂನ್ ವರೆಗೆ ನಡೆದಿದೆ. ನಂತರ ಜಿಲ್ಲಾಡಳಿತ, ಬುಡಾ ಹಾಗೂ ನಗರಸಭೆ ನಿರಾಸಕ್ತಿ ತೋರಿಸಿವೆ. ಅನೇಕ ಲಿಖಿತ ಮನವಿ ಹಾಗೂ ಇ–ಮೇಲ್ ಮೂಲಕ ಮನವಿಗಳನ್ನು ಸಲ್ಲಿಸಿದರೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸಂರಕ್ಷಣಾ ಕಾರ್ಯ ಸ್ಥಗಿತಗೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಪ್ರಸ್ತುತ ಭೂಕಾಲುವೆಯ ಎರಡನೇ ಬಾವಿಯ ಬಳಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಭೂಕಾಲುವೆ ಜಲಾನಯನ ಪ್ರದೇಶದಲ್ಲಿ ಇನ್ನೂ ಕೆಲ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆ ಅನುಮತಿ ನೀಡಿರುವ ಮಾಹಿತಿ ಇದೆ. ಕಟ್ಟಡ ನಿರ್ಮಾಣ ಕಾಮಗಾರಿ ತಡೆಯುವ ಮೂಲಕ ಸರ್ಕಾರ ಐತಿಹಾಸಿಕ ಸ್ಮಾರಕ ಉಳಿಸಿಕೊಳ್ಳಬೇಕು ಎಂದು ಇತಿಹಾಸ ಪ್ರೇಮಿಗಳು ಮನವಿ ಮಾಡಿದ್ದಾರೆ.
‘ಐತಿಹಾಸಿಕ ಮಹತ್ವ ಕಳೆದುಕೊಳ್ಳಲಿದೆ’
ಗುಡ್ಡದ ಮೇಲಿರುವ ನಗರದ ಬಾವಿಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಇರುವುದಕ್ಕೆ ಇಲ್ಲಿಯ ಭೂಕಾಲುವೆಯೇ ಕಾರಣ. ಭೂಕಾಲುವೆಗೆ ಧಕ್ಕೆ ಬಂದರೆ ಬೀದರ್ ಅಂತರರಾಷ್ಟ್ರೀಯ ಮಟ್ಟದ ಐತಿಹಾಸಿಕ ಮಹತ್ವ ಕಳೆದುಕೊಳ್ಳಲಿದೆ. ಅಂತರ್ಜಲ ಮಟ್ಟವೂ ಪಾತಾಳಕ್ಕೆ ಕುಸಿಯಲಿದೆ ಎಂದು ಭೂಗೋಳ ಶಾಸ್ತ್ರಜ್ಞ ಹಾಗೂ ಸಂಶೋಧಕ ಗೋವಿಂದನ್ ಕುಟ್ಟಿ ಎಚ್ಚರಿಕೆ ನೀಡಿದ್ದಾರೆ.
‘ದೇಶದಲ್ಲೇ ಮೊದಲ ಬಾರಿಗೆ 15ನೇ ಶತಮಾನದಲ್ಲಿ ಬೀದರ್‌ನಲ್ಲಿ ಭೂಕಾಲುವೆ ನಿರ್ಮಾಣವಾಗಿದೆ. ಅಂದಿನ ಅವಧಿಯಲ್ಲೇ ನೌಬಾದ್ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ವಿಶ್ವದ ಅಪರೂಪದ ಭೂಕಾಲುವೆ ಇದಾಗಿದೆ. ನೀರು ಪೂರೈಕೆ ವ್ಯವಸ್ಥೆಯನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡರೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.