ಬೀದರ್: ಅರ್ಹ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಉಪನ್ಯಾಸಕ ಹುದ್ದೆ ಬಡ್ತಿ ಪ್ರಕ್ರಿಯೆ ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಬೇಕು. ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಕೊಡಬೇಕು. ಅನುದಾನಿತ ಶಾಲೆ ಹಾಗೂ ಸರ್ವ ಶಿಕ್ಷಣ ಅಭಿಯಾನದ ಅಡಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರತಿ ತಿಂಗಳ ಒಂದನೇ ತಾರಿಖಿಗೆ ವೇತನ ಬಿಡುಗಡೆ ಮಾಡಿಸಲು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ಪದವಿಪೂರ್ವ ಕಾಲೇಜುಗಳಿಂದ ಪ್ರೌಢಶಾಲಾ ವಿಭಾಗ ಪ್ರತ್ಯೇಕವಾಗಿರುವ ಕಾರಣ ಪ್ರೌಢಶಾಲೆಗಳಿಗೆ ಮುಖ್ಯಶಿಕ್ಷಕ ಹುದ್ದೆ ಮಂಜೂರು ಮಾಡಬೇಕು. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆಯ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಶಿಕ್ಷಕರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು ಎಂದು ಕೋರಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಉಪಾಧ್ಯಕ್ಷ ಸೂರ್ಯಕಾಂತ ಸಿಂಗೆ, ರವಿಕುಮಾರ ಕುಮನೂರ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಾಳೆ, ಸಂಘಟನಾ ಕಾರ್ಯದರ್ಶಿ ವೈಜಿನಾಥ ಸಾಳೆ, ಬಲವಂತರಾವ್ ರಾಠೋಡ್, ಅನಿಲಕುಮಾರ ಶೇರಿಕಾರ್, ಇಂದ್ರಕಾಂತ ದೊಡ್ಡಿ, ಶಿವಶರಣಪ್ಪ ಹುಗ್ಗಿ ಪಾಟೀಲ, ಸಂಜೀವಕುಮಾರ ನಾಡುಕರ್, ಮಹಮ್ಮದ್ ನಿಜಾಮುದ್ದಿನ್, ಮಲ್ಲಿಕಾರ್ಜುನ ಪ್ರತಾಪುರ, ಶಿವಕುಮಾರ, ದಿಲೀಪ್ ಮಾಲೆ, ಸುನೀಲಕುಮಾರ ಸಿಡ್ಲೆ, ದತ್ತಾತ್ರಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.