ADVERTISEMENT

ಮುಸ್ಲಿಂ ಮಹಿಳೆಗೆ ಆಟೊದಲ್ಲಿ ಡ್ರಾಪ್ ನೀಡಿದ ಹಿಂದೂ ಚಾಲಕನಿಗೆ ಥಳಿತ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮೇ 2024, 15:37 IST
Last Updated 12 ಮೇ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ಮುಸ್ಲಿಂ ಮಹಿಳೆಯನ್ನು ಆಟೊದಲ್ಲಿ ಕರೆದೊಯ್ದ ಹಿಂದೂ ಧರ್ಮೀಯ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ, ನಿಂದಿಸಿ, ಜೀವ ಬೆದರಿಕೆ ಹಾಕಿರುವ ಘಟನೆ ಸಂಬಂಧ ಮೂವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸೈಯದ್ ಬಿಲಾಲ್, ತೌಸಿಫ್‌ ಅಯೂಬ್‌ ಚಾವುಸ್‌ ಹಾಗೂ ಸೈಯದ್‌ ಇಬ್ರಾಹಿಂ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಖದೀರ್‌ ಖುರೇಶಿ ಹಾಗೂ ಮಗದೂಮ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ADVERTISEMENT

ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ನಿವಾಸಿ ಅಶೋಕ ರೆಡ್ಡಿ ಪಾಂಡುರಂಗ ರೆಡ್ಡಿ ಪಿಚಾರೆ (42) ಪ್ಯಾಸೆಂಜರ್‌ ಆಟೊ ಓಡಿಸಿ ಜೀವನ ಸಾಗಿಸುತ್ತಾರೆ. ಏಪ್ರಿಲ್‌ 17ರಂದು ಪ್ರಯಾಣಿಕರನ್ನು ಬಸವಕಲ್ಯಾಣದಿಂದ ಕೌಡಿಯಾಳ ಗ್ರಾಮಕ್ಕೆ ಕರೆದೊಯ್ಯುವಾಗ ಅವರದೇ ಊರಿನ ಹಜರತ್‌ಬೀ ಹನ್ನುಮಿಯ್ಯಾ ಎಂಬುವವರು ಕೂಡ ಆಟೋ ಹತ್ತಿದ್ದಾರೆ.

ಸಾಲು ಮರದ ತಿಮ್ಮಕ್ಕ ಉದ್ಯಾನದ ಹತ್ತಿರ ಇಳಿದುಕೊಂಡಿದ್ದಾರೆ. ವಾಪಸ್‌ ಹೋಗುವಾಗ ಪುನಃ ಅದೇ ಆಟೊದಲ್ಲಿಯೇ ಬರುವುದಾಗಿ ತಿಳಿಸಿದ್ದಾರೆ. ಅದರಂತೆ ಅಶೋಕ ರೆಡ್ಡಿ ಮಧ್ಯಾಹ್ನ 1ಕ್ಕೆ ಹಜರತ್‌ಬೀ ಅವರನ್ನು ಆಟೊದಲ್ಲಿ ಹತ್ತಿಸಿಕೊಂಡು ಕರೆದೊಯ್ಯುವಾಗ ಐವರು ಮುಸ್ಲಿಂ ಯುವಕರು ಅಡ್ಡಗಟ್ಟಿ, ಮನಬಂದಂತೆ ಥಳಿಸಿ, ನಿಂದಿಸಿ, ಮತ್ತೊಮ್ಮೆ ಮುಸ್ಲಿಂ ಮಹಿಳೆಯರೊಂದಿಗೆ ತಿರುಗಾಡದಂತೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಬಸವಕಲ್ಯಾಣ ನಗರ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಲಾಗಿದೆ.

‘ಈ ಘಟನೆ ಏಪ್ರಿಲ್‌ 17ರಂದು ನಡೆದಿದೆ. ಆದರೆ, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ (ಮೇ 12) ಹರದಾಡಿದೆ. ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್‌ಗಿರಿ ಮಾಡಿದ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನಿಬ್ಬರ ಪತ್ತೆ ಕಾರ್ಯ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.