ಬೀದರ್: ದಖನ್‌ಪ್ರಸ್ಥ ಭೂಮಿಯಲ್ಲಿ ಅನೇಕ ರಾಜಮನೆತನಗಳು ಆಳಿ ಹೋಗಿವೆ. ಜಿಲ್ಲೆಯಲ್ಲಿ ಎಲ್ಲ ರಾಜಮನೆತನಗಳ ಕುರುಹುಗಳು ಕಾಣಸಿಗುತ್ತವೆ. ಅರಸರು ಯುದ್ದದಲ್ಲಿ ಜಯಸಾಧಿಸಿದ್ದರ ಸಂಕೇತವಾಗಿ ನಿರ್ಮಿಸಿದ ಸ್ಮಾರಕಗಳು ಅಷ್ಟೇ ಅಲ್ಲ, ರಾಜನಿಗೆ ನಿಷ್ಠರಾಗಿದ್ದ ವೀರರ, ಪ್ರಾಣಿ ಪಕ್ಷಿ, ವೈರಿಗಳ ಸಮಾಧಿಗಳೂ ಇಲ್ಲಿರುವುದು ವಿಶೇಷ. ರಾಜಕಾರಣಿಗಳು ಹಾಗೂ ಕೆಲ ಅಧಿಕಾರಿಗಳೂ ಸ್ಮಾರಕಗಳನ್ನು ಜಾತಿ, ಧರ್ಮದ ಟೆಲಿಸ್ಕೋಪ್‌ನಿಂದ ಅವಲೋಕಿಸುತ್ತಿರುವ ಕಾರಣ ಅವು ಕಾಲಗರ್ಭ ಸೇರುತ್ತಿವೆ.
ನಗರದ ಗುರುನಗರದಲ್ಲಿ ಗಿಳಿ ಸ್ಮಾರಕ ಇದ್ದರೆ, ಶಿವನಗರದಲ್ಲಿ ಕ್ಷೌರಿಕನ ಸ್ಮಾರಕ ಇದೆ. ಮದುಮಗಳ ಮಹಾದ್ವಾರ (ದುಲ್ಹನ್ ದರ್ವಾಜಾ), ವಿಜಯ ಮಹಾದ್ವಾರ (ಫತೇ ದರ್ವಾಜಾ) ಕಣ್ಣೆದುರೇ ಹಾಳಾಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಮೌನವಾಗಿದ್ದಾರೆ.
ದುಲ್ಹನ್ ದರ್ವಾಜಾ ಬಳಿ ಹಿಂದೆ ನಗರಸಭೆ ಅಧಿಕಾರಿಗಳು ಗಟಾರು ನಿರ್ಮಿಸಿ ಅದನ್ನು ಹಾಳುಗೆಡಲು ಯತ್ನಿಸಿದಾಗ ಎಎಸ್‌ಐ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಅದನ್ನು ತೆರವುಗೊಳಿಸಲಾಯಿತು. ಇಷ್ಟಕ್ಕೆ ಸುಮ್ಮನಾಗದ ನಗರಸಭೆಯು ಕಟ್ಟಡ ತ್ಯಾಜ್ಯವನ್ನು ಅದರ ಸುತ್ತ ಸುರಿದು ಅಂದ ಹಾಳು ಮಾಡಿದೆ.
ಫತ್ಹೇ ದರ್ವಾಜಾ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಇತಿಹಾಸ ಪ್ರೇಮಿಗಳು ಹಾಗೂ ಕೆಲ ಸಂಘಟನೆಗಳು ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿವೆ. ಜಿಲ್ಲಾ ಆಡಳಿತ ಸಾರ್ವಜನಿಕರ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ಮಾರ್ಗವಾಗಿ ಬರುವ ವಾಹನಗಳು ಸ್ಮಾರಕಕ್ಕೆ ಡಿಕ್ಕಿ ಹೊಡೆದು ಕಟ್ಟಡವನ್ನು ಹಾಳು ಮಾಡಿವೆ.
ನಗರಸಭೆಯು ಓಲ್ಡ್‌ಸಿಟಿಯ ಶೌಚಾಲಯದ ನೀರನ್ನು ಕೋಟೆ ಪಕ್ಕದ ಕಂದಕಕ್ಕೆ ಹರಿಯ ಬಿಟ್ಟಿದೆ. ಅಪಾರ ಪ್ರಮಾಣದಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಪ್ರವಾಸಿಗರು ಮೂಗು ಮುಚ್ಚಿಕೊಂಡು ಕೋಟೆ ವೀಕ್ಷಣೆಗೆ ಬರುವ ಸ್ಥಿತಿ ಇದೆ. ಕೊಳಚೆ ನೀರು ಹರಿದು ಹೋಗಲು ತಿರುವು ಕೊಡುವಂತೆ ನಗರದ ನಿವಾಸಿಗಳು ದಶಕಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಗೋರನಾಳಕರ್ ಬೇಸರ ವ್ಯಕ್ತಪಡಿಸುತ್ತಾರೆ.
ಓಲ್ಡ್‌ಸಿಟಿ ರಟಕಲ್‌ಪುರದ ಚೀತಾಖಾನಾ ಮುಂದೆ ಸಿಮೆಂಟ್ ಕಟ್ಟಡ ಕಟ್ಟಿ ಇತಿಹಾಸ ಮಣ್ಣುಪಾಲು ಮಾಡಲಾಗಿದೆ. ನಿಜಾಮರ ಕಾಲದ ರಾಣಿಯರ ಅತಿಥಿಗೃಹ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಾಗಿ ಪರಿವರ್ತನೆಗೊಂಡಿದೆ. ನಿರ್ವಹಣೆ ಸಮಸ್ಯೆಯಿಂದ ಛಾವಣಿ ಸೋರಲು ಆರಂಭವಾಗಿದೆ. ಈಜುಕೊಳ ಮುಚ್ಚಿ ಹೋಗಿದೆ. ಸ್ಮಾರಕದ ಪ್ರವೇಶ ದ್ವಾರದ ಮುಂದೆ ದೊಡ್ಡ ಗೋಡೆ ನಿರ್ಮಿಸಲಾಗಿದೆ. ಅದರ ಮುಂದೆ ಶೌಚಾಲಯ ಕಟ್ಟಿ ಅದರ ಅಂದವನ್ನು ಹಾಳು ಮಾಡಲಾಗಿದೆ.
ಹಳ್ಳದಕೇರಿಯಲ್ಲಿರುವ ನಿಜಾಮರ ಕಾಲದ ಅತಿಥಿಗೃಹ ಇಂದಿಗೂ ಸುಸ್ಥಿತಿಯಲ್ಲಿದೆ. ನಿರ್ವಹಣೆ ಕೊರತೆಯಿಂದ ಛಾವಣಿ ಹಾಳಾಗಿದೆ. ಗೋಡೆಯ ಮೇಲೆ ಹುಲ್ಲು, ಗಿಡಗಳು ಬೆಳೆದಿದ್ದು, ಕಟ್ಟಡ ನಿಧಾನವಾಗಿ ಹಾಳಾಗುತ್ತಿದೆ.
ಹಾಳಾದ ಕೋಟೆ; ಸಾರ್ವಜನಿಕರ ಅಸಮಾಧಾನ
ಭಾಲ್ಕಿ: ವಿದ್ಯಾರ್ಥಿಗಳಿಗೆ ಗತವೈಭವದ ಇತಿಹಾಸ ಸಾರಬೇಕಾದ ಭಾಲ್ಕಿ, ಭಾತಂಬ್ರಾ ಕೋಟೆಗಳು ಅಭಿವೃದ್ಧಿ, ಸಂರಕ್ಷಣೆ ಕಾಣದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಗುರುತಿಸಿಕೊಳ್ಳುತ್ತಿವೆ.
ಪ್ರವಾಸೋದ್ಯಮದ ಪ್ರಗತಿಗೆ, ವಿದ್ಯಾರ್ಥಿಗಳ ನೈಜ ಜ್ಞಾನ ಹೆಚ್ಚಳಕ್ಕೆ ಸಹಕಾರಿ ಆಗಬೇಕಾಗಿದ್ದ ಕೋಟೆಗಳ ಸಂರಕ್ಷಣೆ, ಪುನರುಜ್ಜೀವನದ ಕಡೆಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಚಿತ್ತ ಹರಿಸದಿರುವುದು ಬೇಸರದ ಸಂಗತಿಯಾಗಿದೆ. ಈಗಲಾದರೂ ರಾಜ್ಯ ಪುರಾತತ್ವ ಇಲಾಖೆ, ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಕೋಟೆಗಳ ವಿಶೇಷ, ಅಭಿವೃದ್ಧಿಯ ಕಡೆಗೆತ್ವರಿತವಾಗಿ ಗಮನ ಹರಿಸಿ ಜನಾಕರ್ಷಣೆಯ ಪ್ರವಾಸಿ ತಾಣಗಳನ್ನಾಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಸಹಕಾರ: ಗುಂಡು ಅತಿವಾಳ, ಮಾಣಿಕ ಭೂರೆ, ಬಸವರಾಜ ಪ್ರಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.