ADVERTISEMENT

ಲಿಂಗಾಯತ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ

₹2 ಕೋಟಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ: ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 2:03 IST
Last Updated 11 ಡಿಸೆಂಬರ್ 2019, 2:03 IST
ಬೀದರ್‌ನಲ್ಲಿ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಶಂಕುಸ್ಥಾಪನೆ ನೆರವೇರಿಸಿದರು
ಬೀದರ್‌ನಲ್ಲಿ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಶಂಕುಸ್ಥಾಪನೆ ನೆರವೇರಿಸಿದರು   

ಬೀದರ್: ಜಿಲ್ಲಾ ಕೇಂದ್ರದಲ್ಲಿ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಆಗಬೇಕು ಎನ್ನುವ ಲಿಂಗಾಯತ ಸಮಾಜದ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯಕ್ಕಾಗಿ ಲಿಂಗಾಯತ ಸಮಾಜ ಅಭಿವೃದ್ಧಿ ಸಂಘವು ಇಲ್ಲಿಯ ಚಿಕ್ಕಪೇಟೆಯ ಮಣಗೆ ಲೇಔಟ್‌ನಲ್ಲಿ ಎರಡು ಸಿಎ ನಿವೇಶನಗಳನ್ನು ಖರೀದಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಚಾಲನೆಯನ್ನೂ ನೀಡಿದೆ.

ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅವರು, ‘ಲಿಂಗಾಯತ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಲು ವಸತಿ ನಿಲಯ ನಿರ್ಮಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಹೇಳಿದರು.

ADVERTISEMENT

‘ಲಿಂಗಾಯತ ಸಮಾಜ ಅಭಿವೃದ್ಧಿ ಸಂಘ ನಿರ್ಮಿಸುತ್ತಿರುವ ವಸತಿ ನಿಲಯವು ಆಹಾರ ಹಾಗೂ ವಸತಿಗೆ ಸೀಮಿತವಾಗಬಾರದು. ಸಂಸ್ಕಾರ, ಕೌಶಲದ ಜತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಕೇಂದ್ರವಾಗಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ‘₹2 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ವಸತಿ ನಿಲಯ ಕಟ್ಟಡ ನಿರ್ಮಿಸುವ ಯೋಜನೆ ಇದೆ. ವಸತಿ ನಿಲಯದಲ್ಲಿ ತಲಾ ನಾಲ್ವರ ವಾಸ್ತವ್ಯಕ್ಕೆ ಅನುಕೂಲವಾಗುವಂತಹ ಕೋಣೆಗಳು, ಕಂಪ್ಯೂಟರ್ ಕೋಣೆ, ಗ್ರಂಥಾಲಯ, ವಾರ್ಡನ್ ವಸತಿಗೃಹ ಹಾಗೂ ಅಡುಗೆ ಕೋಣೆ ಇರಲಿವೆ’ ಎಂದು ತಿಳಿಸಿದರು.

‘ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅನೇಕರು ದೇಣಿಗೆ ನೀಡಿದ್ದಾರೆ. ಇನ್ನೂ ಅನೇಕರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ₹ 5 ಲಕ್ಷ ದೇಣಿಗೆ ನೀಡಿದವರ ಹೆಸರನ್ನು ಒಂದು ಕೋಣೆ ಮೇಲೆ ಗ್ರಾನೈಟ್ ಕಲ್ಲಿನಲ್ಲಿ ಬರೆದು ಅಳವಡಿಸಲಾಗುವುದು. ತಲಾ ₹2.5 ಲಕ್ಷ ದೇಣಿಗೆ ನೀಡಿದರೆ ಇಬ್ಬರ ಹೆಸರು ಹಾಕಲಾಗುವುದು’ ಎಂದು ಹೇಳಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ತಡವಾಗಿಯಾದರೂ ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಕಟ್ಟಡಕ್ಕೆ ಸಮಾಜದ ಎಲ್ಲರೂ ತನು, ಮನ, ಧನದಿಂದ ಸಹಕರಿಸಬೇಕು’ ಎಂದು ತಿಳಿಸಿದರು.

‘ಲಿಂಗಾಯತ ಸಮಾಜದಲ್ಲೂ ಸಾಕಷ್ಟು ಬಡವರು ಇದ್ದಾರೆ. ಅವರ ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯ ಆಸರೆಯಾಗಲಿದೆ’ ಎಂದು ಹೇಳಿದರು.

ಲಿಂಗಾಯತ ವಿದ್ಯಾರ್ಥಿ ವಸತಿ ನಿಲಯದ ಕಾರ್ಯದರ್ಶಿ ಬಸವರಾಜ ಧನ್ನೂರ, ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರೊ. ಎಸ್.ಬಿ.ಬಿರಾದಾರ ಮಾತನಾಡಿದರು.

ಸಂಘದ ಉಪಾಧ್ಯಕ್ಷರಾದ ಕಾಶಪ್ಪ ಧನ್ನೂರ, ವೈಜಿನಾಥ ಕಮಠಾಣೆ, ಮಣಗೆ ಲೇಔಟ್ ಮಾಲೀಕ ವೀರಶೆಟ್ಟಿ ಮಣಗೆ, ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ, ಸೋಮಶೇಖರ ಪಾಟೀಲ ಗಾದಗಿ, ಶಿವನಾಥ ಪಾಟೀಲ ಜ್ಯಾಂತಿ, ಬಿ.ಎಸ್. ಕುದರೆ, ಸೂರ್ಯಕಾಂತ ಶೆಟಕಾರ, ಭರತ ಶೆಟಕಾರ, ರಾಜು ಮಿಟಕಾರಿ, ಬಾಬುರಾವ್ ದಾನಿ, ರಾಜೇಂದ್ರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಅಪ್ಪಾರಾವ್ ನವಾಡೆ, ವಿರೂಪಾಕ್ಷ ಗಾದಗಿ, ಅಣ್ಣಾರಾವ್ ಮೊಗಶೆಟ್ಟಿ ಇದ್ದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಡಾ. ಜಗನ್ನಾಥ ಹೆಬ್ಬಾಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.