ADVERTISEMENT

ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ಹುಲಸೂರ; ಆರ್ಥಿಕ ಚಟುವಟಿಕೆಗಳು ದ್ವಿಗುಣ

ಹೆಚ್ಚಿದ ಜನಸಂಖ್ಯೆ, ಹಿಗ್ಗುತ್ತಿರುವ ಪಟ್ಟಣದ ವ್ಯಾಪ್ತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 6:57 IST
Last Updated 11 ಜೂನ್ 2024, 6:57 IST
ಹುಲಸೂರ ಪಟ್ಟಣದ ಒಂದು ನೋಟ
ಹುಲಸೂರ ಪಟ್ಟಣದ ಒಂದು ನೋಟ   

ಹುಲಸೂರ: ದಶಕಗಳ ಹೋರಾಟದ ಫಲವಾಗಿ ಜಗದೀಶ ಶೆಟ್ಟರ್‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಹುಲಸೂರಕ್ಕೆ ತಾಲ್ಲೂಕು ಕೇಂದ್ರದ ಸ್ಥಾನಮಾನ ನೀಡಿತ್ತು. ಆದರೆ, ಹುಲಸೂರ ಪಟ್ಟಣ ಈಗಲೂ ಗ್ರಾಮ ಪಂಚಾಯಿತಿಯ ಕೇಂದ್ರವೇ ಆಗಿದ್ದು, ಸಮಗ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಪಟ್ಟಣದ ಅಭಿವೃದ್ಧಿಗಾಗಿ ಹುಲಸೂರ ಪಟ್ಟಣ ಪಂಚಾಯಿತಿಯ ಸ್ಥಾನಮಾನದ ನಿರೀಕ್ಷೆಯಲ್ಲಿದೆ.

ತಾಲ್ಲೂಕು ಕೇಂದ್ರದಷ್ಟೇ ವಿಸ್ತಾರವಾಗಿ ಬೆಳೆದಿರುವ ಹುಲಸೂರ ಗ್ರಾಮ ಪಂಚಾಯಿತಿ ಮೇಲ್ದರ್ಜೆಗೇರುವ ನಿರೀಕ್ಷೆ ಹೊಂದಿದೆ. ಐತಿಹಾಸಿಕ ಹಿನ್ನೆಲೆ ಇರುವ ಹುಲಸೂರ ಪಟ್ಟಣವು ಸುತ್ತಲೂ 2-3 ಕಿಲೊಮೀಟರ್ ವ್ಯಾಪ್ತಿಯವರೆಗೆ ಪಸರಿಸಿದೆ. ಕುರುಬರ ಓಣಿ, ಇಂದಿರಾ ನಗರ, ಶಾಂತಿ ನಗರ, ಹಿಮ್ಮತ್‌ ನಗರ, ಕೆಜೆಎನ್ ನಗರ, ರಘುನಾಥ ನಗರ, ದುರ್ಗಾ ನಗರ, ಗಣೇಶ ನಗರ ಸೇರಿದಂತೆ ವಿವಿಧ ಬಡಾವಣೆಗಳು ಮತ್ತು ಲೇಔಟ್‌ ಒಳಗೊಂಡಂತೆ ಒಟ್ಟು ಹನ್ನೆರಡು ವಾರ್ಡ್‌ಗಳನ್ನು ಹೊಂದಿದೆ.

ಹುಲಸೂರ ತಾಲ್ಲೂಕು 17 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಹಾಗೂ ವಸತಿ ಪ್ರದೇಶವನ್ನು ಹೊಂದಿದ್ದು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಎಲ್ಲ ಸೌಕರ್ಯ ಮತ್ತು ಅವಕಾಶಗಳಿವೆ. ಆದರೂ ಹುಲಸೂರ ಇನ್ನೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ.

ADVERTISEMENT

ಸಾಮಾನ್ಯವಾಗಿ ಪಟ್ಟಣ ಪಂಚಾಯಿತಿಯಾಗಲು 11 ಸಾವಿರದಿಂದ 25 ಸಾವಿರದವರೆಗೂ ಜನಸಂಖ್ಯೆ ಇರಬೇಕು. ಎಲ್ಲ ಸರ್ಕಾರಿ ಹಾಗೂ ಮೂಲಸೌಕರ್ಯಗಳು ಇರಬೇಕು ಎಂಬ ನಿಯಮ ಇದೆ. ಹೀಗಾಗಿ ಕಾನೂನಿನ ಪ್ರಕಾರವಾಗಿಯೇ 11,000ಕ್ಕಿಂತ ಹೆಚ್ಚು ಜನಸಂಖ್ಯೆ ಹಾಗೂ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಅಂಚೆ ಕಚೇರಿ, ನಾಡ ಕಚೇರಿ, ಬ್ಯಾಂಕುಗಳು, ದೂರವಾಣಿ ಕಚೇರಿ, ಪಶು ಪಾಲನಾ ಆಸ್ಪತ್ರೆ, ಶಾಲಾ- ಕಾಲೇಜುಗಳು, ನಾನಾ ಖಾಸಗಿ ವ್ಯಾಪಾರ ವಹಿವಾಟು ಕೇಂದ್ರಗಳು... ಹೀಗೆ ಸಾಮಾನ್ಯ ಜನರಿಗೆ ಪ್ರತಿನಿತ್ಯ ಬೇಕಾಗುವ ಬಹುತೇಕ ಸರ್ಕಾರಿ ಕಚೇರಿಗಳು ಹಾಗೂ ನಿತ್ಯ ಜನರ ಬದುಕಿಗೆ ಬೇಕಾಗುವ ಎಲ್ಲ ಸೌಕರ್ಯಗಳು ಹುಲಸೂರಿನಲ್ಲಿವೆ. ಇನ್ನಾದರೂ ಪಟ್ಟಣ ಪಂಚಾಯಿತಿಯಾಗಿ ಬದಲಾಗಬೇಕು ಎಂಬುದು ಜನರ ಒತ್ತಾಸೆ.

ಕಿರಾಣಿ, ಬಟ್ಟೆ, ಕಟ್ಟಡ ನಿರ್ಮಾಣ ವಸ್ತು, ಬೆಳ್ಳಿ– ಬಂಗಾರ ಆಭರಣ, ಗೃಹೋಪಯೋಗಿ ವಸ್ತು, ದ್ವಿಚಕ್ರ ವಾಹನ, ಇತ್ಯಾದಿ ವ್ಯಾಪಾರ ಪ್ರಧಾನವಾಗಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್‌ ಹಣಕಾಸಿನ ವ್ಯವಹಾರಕ್ಕೆ ಪೂರಕವಾಗಿವೆ. ನಿತ್ಯ 20–30 ಬಸ್ ಸಂಚಾರವಿದ್ದು, ಸುತ್ತಮುತ್ತಲಿನ 20 ಹಳ್ಳಿಗಳ ಜನರಿಗೆ ಸಂತೆ ಮತ್ತು ವ್ಯಾಪಾರ ವ್ಯವಹಾರಗಳಿಗೆ ಹುಲಸೂರ ಕೇಂದ್ರ ಸ್ಥಾನವಾಗಿದೆ.

34 ಸದಸ್ಯರು ಇರುವ ಹುಲಸೂರ ಗಾಮ ಪಂಚಾಯಿತಿ ತಾಲ್ಲೂಕಿನಲ್ಲಿ ಅತಿ ದೊಡ್ಡದು. ಪಟ್ಟಣವನ್ನು ಕೇಂದ್ರವಾಗಿಸಿ ಹುಲಸೂರ ಪಟ್ಟಣ ಪಂಚಾಯಿತಿ ಘೋಷಿಸಬೇಕು ಎಂಬ ಬೇಡಿಕೆ ಕಳೆದ ದಶಕದಿಂದಲೂ ಇದೆ. ಆದರೆ, ಇದೀಗ ಹುಲಸೂರಕ್ಕೆ ತಾಲ್ಲೂಕು ಕೇಂದ್ರದ ಗರಿಮೆ ಸಿಕ್ಕ ಮೇಲೆ ಪಟ್ಟಣ ಪಂಚಾಯಿತಿ ಸ್ಥಾನಮಾನ ಅನಿವಾರ್ಯವೇ ಆಗಿದೆ.

ಹುಲಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೀಡುವ ಅಲ್ಪ ಅನುದಾನ ಹುಲಸೂರ ಪಟ್ಟಣದ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಸುರಿದಂತಾಗುತ್ತದೆ. ಆದ್ದರಿಂದಲೇ ಹುಲಸೂರಿನ ರಸ್ತೆ, ಚರಂಡಿ ಕೆಲಸಗಳೆಲ್ಲವೂ ದಶಕಗಳಿಂದಲೂ ಪಾಳು ಬಿದ್ದಿವೆ.

‘ಪಟ್ಟಣ ಪಂಚಾಯಿತಿಯಾಗಿ ಹುಲಸೂರ ಬದಲಾದರೆ ವಾರ್ಷಿಕ ₹5 ಕೋಟಿಯಷ್ಟು ನೇರ ಅನುದಾನ ಸಿಗಲಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಪರಿಷ್ಕೃತ ಕರಗಳ ವಸೂಲಾತಿಯಿಂದ ಲಕ್ಷಾಂತರ ರೂಪಾಯಿ ಆದಾಯ ಪಟ್ಟಣ ಪಂಚಾಯಿತಿಗೆ ಸಿಗಲಿದೆ. ಸ್ಥಳೀಯ ಕಾಮಗಾರಿಗಳಿಗೆ ಮತ್ತು ಅಭಿವೃದ್ಧಿಗೆ ಹಣದ ಕೊರತೆ ಕಾಡುವುದಿಲ್ಲ’ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ‘ಗ್ರಾಮ ಪಂಚಾಯಿತಿಯೇ ಆಗಿ ಮುಂದುವರಿದರೆ ತಾಲ್ಲೂಕು ಕೇಂದ್ರದ ಮೂಲಸೌಕರ್ಯಕ್ಕೆ ಅಡ್ಡಿ ಆಗುತ್ತದೆ’ ಎಂದು ಪಟ್ಟಣದ ಅಭಿವೃದ್ಧಿಯ ಕಲ್ಪನೆ ಹೊಂದಿರುವವರು ಹೇಳುತ್ತಾರೆ.

ಹುಲಸೂರನ್ನು ಪಟ್ಟಣ ಪಂಚಾಯಿತಿ ಮಾಡುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಬಳಿಗೆ ಜಿಲ್ಲಾಧಿಕಾರಿಯವರು ಅಹವಾಲು ಕೊಂಡೊಯ್ದಿದ್ದಾರೆ. ಬರುವ ದಿನಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಹುಲಸೂರನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿದರೆ ಆಡಳಿತಾತ್ಮಕವಾಗಿ ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯ ಬಲವಾಗಿದೆ.

ಯಾರು ಏನೆಂದರು?

ಗ್ರಾಮ ಪಂಚಾಯಿತಿಗೆ ನೀಡುತ್ತಿರುವ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ದೊರೆಯುವ ಸಂಪನ್ಮೂಲಗಳಿಂದ ಪಟ್ಟಣದ ಕುಡಿಯುವ ನೀರು ಇನ್ನಿತರೆ ಮೂಲಸೌಕರ್ಯಗಳ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತಿಲ್ಲ .ಪಟ್ಟಣ ಬದಲಾಗಬೇಕಾದರೆ ಹೆಚ್ಚಿನ ಆದಾಯ ಮತ್ತು ಅನುದಾನ ಅನಿವಾರ್ಯ. ಶಿವರಾಜ ಖಪಲೆ ಕಜಾಪ ತಾಲ್ಲೂಕು ಅಧ್ಯಕ್ಷ ಪಟ್ಟಣವು ಇಂದಿಗೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿರುವುದರಿಂದ ನೋಂದಣಿ ಇಲಾಖೆಯ ಅನುಸಾರ ಸ್ಥಳೀಯ ಆಸ್ತಿ ಮೌಲ್ಯ ಕಡಿಮೆ ಇದೆ. ಸಣ್ಣ ಕೈಗಾರಿಕೆ ಪವರ್ ಲೂಮ್ಸ್‌ಗಳಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಬ್ಯಾಂಕ್ ಇನ್ನಿತರೆ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ಪಡೆಯುವ ವೇಳೆ ಸಮಸ್ಯೆ ಆಗುತ್ತಿದೆ. ಪಟ್ಟಣ ಪಂಚಾಯಿತಿ ಆದರೆ ಸ್ವತ್ತುಗಳ ಮೌಲ್ಯವು ಏರಿಕೆಯಾಗಿ ಸಾಲ ಸೌಲಭ್ಯಗಳ ಪ್ರಮಾಣ ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.

ಪ್ರವೀಣ್ ಕಾಡಾದಿ ತಾಲ್ಲೂಕು ಅಧ್ಯಕ್ಷ ಜಾಗತಿಕ ಲಿಂಗಾಯತ ಮಹಾಸಭಾ ಈ ಹಿಂದೆ ಒಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಮತ್ತೊಮ್ಮೆ ಸರ್ಕಾರ ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅನುಬಂಧ 1 ಮತ್ತು 2ರ ಮಾಹಿತಿಯನ್ನು ಕೇಳಿದೆ. ಅದರ ಮಾಹಿತಿಯನ್ನು ನಾವು ಈಗಾಗಲೇ ಕಳುಹಿಸಿಕೊಟ್ಟಿದ್ದೇವೆ. ರಮೇಶ ಮಿಲೀಂದಕರ ಪಿಡಿಒ ಹುಲಸೂರ ಗ್ರಾಮ ಪಂಚಾಯಿತಿ ಹುಲಸೂರ ಪಟ್ಟಣ ಹೆಚ್ಚು ಜನಸಂಖ್ಯೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಗ್ರಾಮ ಪಂಚಾಯಿತಿ ಆಗಿದ್ದು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ದಶಕಗಳಿಂದಲೂ ಜನಪ್ರತಿನಿಧಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಅದು ಇನ್ನೂ ಈಡೇರಿಲ್ಲ. ಆಕಾಶ ಖಂಡಾಳೆ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.