ADVERTISEMENT

ನಮ್ಮವರ ಷಡ್ಯಂತ್ರ, ಸ್ವಾರ್ಥದಿಂದ ಸೋಲು

ಕೃತಜ್ಞತಾ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 4:16 IST
Last Updated 29 ಜೂನ್ 2024, 4:16 IST
ಬೀದರ್‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು
ಬೀದರ್‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು   

ಬೀದರ್‌: ‘ನಮ್ಮ ಪಕ್ಷದ ಕೆಲ ಮುಖಂಡರ ಷಡ್ಯಂತ್ರ, ಸ್ವಾರ್ಥದಿಂದ ನನಗೆ ಚುನಾವಣೆಯಲ್ಲಿ ಸೋಲಾಗಿದೆ. ಇದು ಕಾರ್ಯಕರ್ತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಸೋಲಿನ ಕುರಿತು ಪ್ರತಿಕ್ರಿಯಿಸಿ ಸ್ವಪಕ್ಷೀಯ ಮುಖಂಡರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ನಮ್ಮವರ ಷಡ್ಯಂತ್ರ, ಕಾಂಗ್ರೆಸ್‌ ಪಕ್ಷದಿಂದ ಹಣದ ಹೊಳೆ ಹರಿಸಿದರೂ ಬಿಜೆಪಿ ಕಾರ್ಯಕರ್ತರ ಶ್ರಮದ ಫಲದಿಂದ ನಾನು 5.40 ಲಕ್ಷ ಮತಗಳನ್ನು ಪಡೆದಿಕೊಂಡಿರುವೆ. ಅದಕ್ಕಾಗಿ ಕಾರ್ಯಕರ್ತರಿಗೆ ಸದಾ ಚಿರಋಣಿಯಾಗಿರುವೆ ಎಂದು ಹೇಳಿದರು.

ADVERTISEMENT

ನನ್ನ ಸೋಲಿಗೆ ಯಾವ ಮುಖಂಡರು ಷಡ್ಯಂತ್ರ ಮಾಡಿದ್ದಾರೆ ಅವರು ಏನು ಮಾಡಿದ್ದಾರೆ ಎಂಬುದು ಅವರಿಗೆ ಅರ್ಥವಾಗಬೇಕು. ಪಕ್ಕದ ಮನೆಯ ಕೂಸು ನಮ್ಮ ಮನೆಯ ತೊಟ್ಟಿಲಲ್ಲಿ ಹಾಕಿದರೆ ಅದು ನಮ್ಮದಾಗದು ಎನ್ನುವುದನ್ನು ನೆನಪಿನಲ್ಲಿ ಇಡಬೇಕು. 400 ಪಾರ್ ಹೇಗೂ ಆಗುತ್ತೆ, ಇಲ್ಲಿ ಸೋತರೇನು ಎಂದು ಉಡಾಫೆ ತೋರಿದರು. 2014 ಮತ್ತು 2019 ರಲ್ಲಿ ನಮ್ಮಲ್ಲಿ ಒಬ್ಬಿಬ್ಬರು ಶಾಸಕರು ಮಾತ್ರ ಇದ್ದರು. ಆ ಸಮಯದಲ್ಲಿ ಕಾರ್ಯಕರ್ತರ ಜೊತೆ ನಿಂತಿದ್ದು ನಾನು. ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್‌ನವರ ಬಣ್ಣ ಬಯಲು ಮಾಡಿರುವೆ, ನೇರವಾಗಿ ವಿರೋಧಿಸಿರುವೆ ಎಂದರು.

ಕಾರ್ಯಕರ್ತರು ಪಕ್ಷದ ಹಿಂಬಾಲಕರಾಗಬೇಕೆ ವಿನಃ ನಾಯಕನ ಹಿಂಬಾಲಕನಾಗಬಾರದು. ಒಂದು ವೇಳೆ ಪಕ್ಷ ಮತ್ತು ನಾಯಕನ ಮಧ್ಯೆ ಆಯ್ಕೆಗಳು ಬಂದಾಗ, ಕಾರ್ಯಕರ್ತರು ಪಕ್ಷದ ಜೊತೆ ನಿಲ್ಲಬೇಕು. ಪಕ್ಷದ ನಿರ್ಣಯದ ಜೊತೆ ನಿಲ್ಲಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಸೋತಿದ್ದೇನೆ ಎಂದು ಕುಗ್ಗುವುದಿಲ್ಲ. ಅಭಿವೃದ್ದಿ ಮಾಡುವುದು ನಿಲ್ಲಿಸುವುದಿಲ್ಲ. ಮತದಾರರ ಜೊತೆ ಅವರ ಕುಟುಂಬ ಸದಸ್ಯನಾಗಿ, ಪಕ್ಷ ಸಂಘಟನೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ. ಮುಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು.

ನನ್ನ ಬದುಕು ಸಕಾರಾತ್ಮಕ ವಿಚಾರಗಳಿಂದ ಕೂಡಿದೆ. ನಾನು ಅಧಿಕಾರಲ್ಲಿರದೆ ಇದ್ದರೂ ನನ್ನ ಪ್ರಭಾವ ಬಳಸಿ, ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ. ಏಕೆಂದರೆ ನನ್ನ ನಡೆ, ನುಡಿಗಳಿಂದ ಕೇಂದ್ರದಲ್ಲಿ ಪ್ರತಿಯೊಬ್ಬ ಮಂತ್ರಿಗಳ ಬಳಿ ಗೌರವ ಇಟ್ಟುಕೊಂಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆ. ಈ ಕಾರಣದಿಂದಲೇ ಪಕ್ಷದ ಕೆಲ ಮುಖಂಡರ ವಿರೋಧದ ಮಧ್ಯೆಯೂ ನನಗೆ ಮೂರನೇ ಬಾರಿಗೆ ಟಿಕೆಟ್‌ ಸಿಕ್ಕಿದೆ ಎಂದರು.

’ಈ ಕೃತಜ್ಞತಾ ಸಭೆಗೆ ಕೆಲವರು ನಾಚಿಕೆಯಿಂದ ಬಂದಿಲ್ಲ. ಕೆಲವರು ಮದುವೆಗಳಿಗೆ ಹೋಗಿರುವುದರಿಂದ ಬಂದಿಲ್ಲ. ಅವರ ಮನೆಗಳಿಗೆ ಟಿಫೀನ್‌ ಕಟ್ಟಿಕೊಂಡು ಹೋಗಿ ತಿನ್ನಿಸಬೇಕಿತ್ತಾ’ ಎಂದು ಮುಖಂಡ ಬಸವರಾಜ ಆರ್ಯ ಹೇಳಿದರು.

ಯಾವ ಸ್ಥಳದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕುಳಿತು ಸಂವಿಧಾನ ಬರೆದಿದ್ದಾರೋ ಅಂತಹ ಜಾಗಕ್ಕೆ ಕಾಂಗ್ರೆಸ್‌ನವರು ದುಡ್ಡು ಹಂಚಿ, ಆಯ್ಕೆಯಾಗಿ ಹೋಗಿದ್ದಾರೆ. ಈ ರೀತಿಯಾಗಿದ್ದು ಇದೇ ಮೊದಲು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶೋಭಾ ತೆಲಂಗ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ರಾಜಶೇಖರ ನಾಗಮೂರ್ತಿ, ಬಾಬುವಾಲಿ, ಪೀರಪ್ಪ ಔರಾದೆ, ಕಿರಣ ಪಾಟೀಲ, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ಅಶೋಕ ವಕಾರೆ, ರಾಜರೆಡ್ಡಿ ಶಹಬಾದ್‌, ವೀರಣ್ಣ ಕಾರಬಾರಿ, ಸಂಗಮೇಶ ನಾಸಿಗಾರ, ಗಜೇಂದ್ರ ಕನಕಟಕರ್ ಹಾಜರಿದ್ದರು.

Cut-off box - ‘ಭ್ರಷ್ಟಾಚಾರದ ವಿರುದ್ಧ ಶಾಸಕರು ಮಾತನಾಡಲಿ’ ‘ಬೀದರ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅರಣ್ಯ ಪ್ರದೇಶದ ಒತ್ತುವರಿ ಕುರಿತು ಬಿಜೆಪಿಯ ಶಾಸಕರು ಧ್ವನಿ ಎತ್ತಬೇಕು’ ಎಂದು ಭಗವಂತ ಖೂಬಾ ಹೇಳಿದರು. ಅರಣ್ಯ ಪ್ರದೇಶ ಒತ್ತುವರಿ ಮಾಡಿ ಸ್ಮಶಾನ ದರ್ಗಾಗಳಿಗೆ ನೀಡಲು ನಡೆಯುತ್ತಿರುವ ಹುನ್ನಾರ ಡಿ ಗ್ರುಪ್‌ ಹುದ್ದೆಗಳಲ್ಲಿ ನಡೆಯುತ್ತಿರುವ ತಾರತಮ್ಯ ಟೆಂಡರ್‌ಗಳಲ್ಲಿ ಆಗುತ್ತಿರುವ ಗೋಲ್‌ಮಾಲ್‌ ಬಗ್ಗೆ ವಿಧಾನಸೌಧದ ಒಳಗೆ ಮತ್ತು ಹೊರಗೆ ಶಾಸಕರು ಧ್ವನಿ ಎತ್ತಬೇಕು ಎಂದು ತಿಳಿಸಿದರು.

‘ಸೋಲಿಸಿ ಬಂದಿರೇನಪ್ಪ’

ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ ಕಾಂಗ್ರೆಸ್‌ನವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ. ಆದರೆ ನಾವು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ 5.40 ಲಕ್ಷ ಮತ ಪಡೆದಿದ್ದೇವೆ. ನಾವು 4 ಶಾಸಕರುಗಳು ಬೆಂಗಳೂರಿಗೆ ಹೋದಾಗ ಸೋಲಿಸಿ ಬಂದಿರೇನಪ್ಪ ಅಂತ ಕೇಳ್ತಾ ಇದ್ದಾರೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಇವತ್ತು ಭಗವಂತ ಖೂಬಾ ಗೆದ್ದು ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗುತ್ತಿದ್ದರು. ನಮ್ಮ ಎಲ್ಲ ಕೆಲಸಗಳು ಆಗುತ್ತಿದ್ದವು. ಎಲ್ಲ ಸರಿ ಮಾಡಿಕೊಂಡು ಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲೋಣ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.