ಬೀದರ್: ದೊಡ್ಡ ಭೂಮಾಫಿಯಾ ನಗರದ ಸುತ್ತಮುತ್ತ ಅನಧಿಕೃತವಾಗಿ ಲೇಔಟ್‌ಗಳನ್ನು ನಿರ್ಮಿಸುವ ಭರಾಟೆಯಲ್ಲಿ ಗುಡ್ಡಗಳನ್ನು ಬೋಳು ಮಾಡುತ್ತಿದ್ದು, ಭೂಕುಸಿತದ ಆತಂಕ ಎದುರಾಗಿದೆ.
ಎಗ್ಗಿಲ್ಲದೆ ಗುಡ್ಡಗಳನ್ನು ಸಮತಟ್ಟು ಮಾಡಲಾಗುತ್ತಿದ್ದು, ಇದರಿಂದ ನಗರದ ಭೌಗೋಳಿಕ ಚಹರೆ ಬದಲಾಗುತ್ತಿದೆ. ಭವಿಷ್ಯದಲ್ಲಿ ಆಪತ್ತನ್ನು ಆಹ್ವಾನಿಸಿದಂತಿದೆ ಎಂದು ಪರಿಸರ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.
ನಗರ ಹೊರವಲಯದ ನರಸಿಂಹ ಝರಣಿ, ನಾವದಗೇರಿ, ಚಿಕಪೇಟ್, ಅಲಿಯಾಬಾದ್, ಚೊಂಡಿ, ಅಷ್ಟೂರ, ಮಲ್ಕಾಪುರ, ಗೋರನಳ್ಳಿ, ಗುನ್ನಳ್ಳಿ, ಶಹಾಪುರ, ಚಿದ್ರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ದಿನಕ್ಕೊಂದರಂತೆ ಹೊಸ ಲೇಔಟ್‌ಗಳು ತಲೆ ಎತ್ತುತ್ತಿವೆ. ಇದರಲ್ಲಿ ಬಹುತೇಕ ಲೇಔಟ್‌ಗಳ ನಿರ್ಮಾಣಕ್ಕೆ ಅನುಮತಿಯೇ ಪಡೆದುಕೊಂಡಿಲ್ಲ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದಿದ್ದರೆ ಲೇಔಟ್‌ಗಳನ್ನು ನಿರ್ಮಿಸಲು ಬಿಟ್ಟಿದ್ದೇಕೆ? ಇದು ಸಾರ್ವಜನಿಕರ ಪ್ರಶ್ನೆಯಾಗಿದೆ. ಲೇಔಟ್‌ಗಳನ್ನು ನಿರ್ಮಿಸುವ ಭರದಲ್ಲಿ ಪರಿಸರಕ್ಕೆ ವಿರುದ್ಧವಾದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಸಂಬಂಧಿಸಿದವರು ಮಾತ್ರ ಕಣ್ಣು, ಕಿವಿ ಇಲ್ಲದಂತೆ ಮೌನ ವಹಿಸಿದ್ದಾರೆ. ದೊಡ್ಡ ದೊಡ್ಡ ಭೂಮಾಫಿಯಾಗಳ ಹಿಂದೆ ‘ದೊಡ್ಡ’ವರ ಆಶೀರ್ವಾದ ಇದ್ದು, ಅವರನ್ನು ಯಾರೂ ತಡೆಯುವವರು ಇಲ್ಲದಂತಾಗಿದೆ. ಹೀಗಾಗಿಯೇ ಅವರು ರಾಜಾರೋಷವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ.
ಲೇಔಟ್‌ಗಳಿಗಾಗಿ ಗುಡ್ಡಗಳನ್ನು ರಾತ್ರೋರಾತ್ರಿ ಜೆಸಿಬಿ, ಹಿಟಾಚಿ ಯಂತ್ರಗಳಿಂದ ನೆಲಸಮಗೊಳಿಸಲಾಗುತ್ತಿದೆ. ನಾವದಗೇರಿಯಲ್ಲಿ ಗುಡ್ಡ ಒಡೆದು ಲೇಔಟ್ ನಿರ್ಮಿಸುತ್ತಿರುವುದರಿಂದ ಅಲ್ಲಿನ ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು, ನರಸಿಂಹ ಝರಣಿ ಸಮೀಪ ಬಹಮನಿ ಸುಲ್ತಾನರ ಕಾಲದ ದೊಡ್ಡ ದೊಡ್ಡ ಗುಂಬಜ್‌ಗಳಿವೆ. ಅವುಗಳ ಸನಿಹದಲ್ಲೇ ಎಗ್ಗಿಲ್ಲದೆ ಗುಡ್ಡ ಒಡೆದು ಲೇಔಟ್ ನಿರ್ಮಿಸಲಾಗುತ್ತಿದೆ. ಹೀಗಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ)ಯಾಗಲಿ, ಜಿಲ್ಲಾಡಳಿತವಾಗಲಿ ಅದನ್ನು ತಡೆಯುವ ಕೆಲಸ ಮಾಡಿಲ್ಲ ಎಂದು ಜನ ದೂರಿದ್ದಾರೆ. ಈ ಹಿಂದೆ ನರಸಿಂಹ ಝರಣಿ ಪರಿಸರದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ತೀವ್ರ ವಿರೋಧದ ನಂತರ ಅಲ್ಲಿ ಚಟುವಟಿಕೆಗಳು ನಿಂತಿದ್ದವು. ಆದರೆ, ಝರಣಿ ಸುತ್ತಮುತ್ತಲಿನ ಗುಡ್ಡಗಳ ಮೇಲೆಲ್ಲಾ ಈಗ ಕಟ್ಟಡಗಳು ನಿರ್ಮಾಣವಾಗಿವೆ.
‘ಬೀದರ್ ನಗರವು ಎತ್ತರದ ಪ್ರದೇಶದಲ್ಲಿದೆ. ಸುತ್ತ ಇಳಿಜಾರು ಇದೆ. ಒಂದರ್ಥದಲ್ಲಿ ಗುಡ್ಡದ ಮೇಲೆ ನಗರ ನೆಲೆ ನಿಂತಿದೆ. ಆದರೆ, ಲೇಔಟ್‌ಗಳನ್ನು ನಿರ್ಮಿಸಲು ಸುತ್ತಮುತ್ತಲಿನ ಇಳಿಜಾರು ಪ್ರದೇಶವನ್ನು ಸಮತಟ್ಟುಗೊಳಿಸುತ್ತಿರುವುದರಿಂದ ಭವಿಷ್ಯದಲ್ಲಿ ಭೂಕುಸಿತದ ಆತಂಕವಿದೆ’ ಎನ್ನುತ್ತಾರೆ ಪರಿಸರ ಹೋರಾಟಗಾರ ವಿನಯ್ ಮಾಳಗೆ.
‘ಸಹಜವಾಗಿರುವ ಭೌಗೋಳಿಕ ಪ್ರದೇಶವನ್ನು ನಾಶಮಾಡಿದರೆ ಭವಿಷ್ಯದಲ್ಲಿ ಆಗಬಾರದ ಸಮಸ್ಯೆಗಳು ಉಂಟಾಗುತ್ತವೆ. ಎತ್ತರದ ಪ್ರದೇಶದಿಂದ ಸುತ್ತಮುತ್ತಲಿನ ವಿವಿಧ ಕೆರೆಗಳಿಗೆ ನೀರು ಹರಿದು ಹೋಗುತ್ತದೆ. ಇದರಿಂದ ಅಂತರ್ಜಲ ಸದಾ ಒಂದೇ ಸಮನಾಗಿರುತ್ತದೆ. ಆದರೆ, ಗುಡ್ಡಗಳನ್ನೇ ಬೋಳು ಮಾಡಿದರೆ ನೀರು ಹರಿದು ಹೋಗುವ ಮಾರ್ಗ ಬದಲಾಗುತ್ತದೆ. ಅದು ಬೇರೆ ಸ್ವರೂಪ ಪಡೆದುಕೊಂಡು ಸಮಸ್ಯೆ ಸೃಷ್ಟಿಸಬಹುದು’ ಎಂದು ಹೇಳಿದರು.
‘ಒಪ್ಪಿಗೆ ಪಡೆಯದಿದ್ದರೆ ಮುಟ್ಟುಗೋಲು’
‘ನಗರದಲ್ಲಿ ಯಾರೇ ಎನ್.ಎ. ಹಾಗೂ ಒಪ್ಪಿಗೆ ಪಡೆಯದೆ ಲೇಔಟ್ ನಿರ್ಮಿಸಿದ್ದರೆ ಅಂತಹ ಜಾಗಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈಗಾಗಲೇ ಕೆಲವರಿಗೆ ನೋಟಿಸ್ ನೀಡಲಾಗಿದೆ. ಬಳಿಕ ಕ್ರಮ ಜರುಗಿಸಲಾಗುವುದು. ಇನ್ನು ನರಸಿಂಹ ಝರಣಿ ದೇವಸ್ಥಾನದ ಸಂಪೂರ್ಣ 41 ಎಕರೆ ಜಾಗ ಸಂರಕ್ಷಿಸಲಾಗಿದೆ. ಎರಡೆರಡು ಸಲ ಜಮೀನಿನ ಅಳತೆ ಮಾಡಿಸಲಾಗಿದೆ. ಶೇ 95ರಷ್ಟು ತಂತಿಬೇಲಿ ಹಾಕುವ ಕೆಲಸ ಪೂರ್ಣಗೊಂಡಿದೆ. ದೇಗುಲದ ಸಂಪೂರ್ಣ ಜಾಗ ಜಿಲ್ಲಾಡಳಿತದ ಸುಪರ್ದಿನಲ್ಲಿದೆ. ಡ್ರೈನೇಜ್ ನೀರು ದೇವಸ್ಥಾನದ ಕಡೆಗೆ ಹರಿದು ಹೋಗದಂತೆಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ರಮ ಲೇಔಟ್‌ಗಳಿಂದ ಜನರಿಗೆ ವಂಚನೆ
ಅಕ್ರಮ ಲೇಔಟ್ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿ ಜನರನ್ನು ವಂಚಿಸುವ ಕೆಲಸ ಎಗ್ಗಿಲ್ಲದೆ ನಗರದಲ್ಲಿ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ಅದನ್ನು ತಡೆಯುವ ಕೆಲಸ ಮಾಡಿಲ್ಲ. ಇನ್ನೊಂದೆಡೆ ಜನ ಕೂಡ ಅಂತಹವರಿಂದ ಎಚ್ಚೆತ್ತುಕೊಂಡಿಲ್ಲ. ಇತ್ತೀಚೆಗೆ ನಗರದ ಶಹಾಪುರ ಗೇಟ್ ಸಮೀಪ ಅರಣ್ಯ ಇಲಾಖೆಗೆ ಸೇರಿದ ಸುಮಾರು 100 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಅಲ್ಲಿ ಲೇಔಟ್‌ಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಅದು ವಾಸ್ತವದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಾಗಿತ್ತು. ಹೀಗಾಗಿಯೇ ಅರಣ್ಯ ಇಲಾಖೆಯವರು ಯಾವುದೇ ಮುಲಾಜಿಲ್ಲದೆ ಅಲ್ಲಿನ ಒತ್ತುವರಿ ತೆರವುಗೊಳಿಸಿ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಒಂದು ನಿವೇಶನವನ್ನು ನಾಲ್ಕೈದು ಜನರಿಗೆ ಮಾರಾಟ ಮಾಡಿ ವಂಚಿಸಲಾಗಿತ್ತು.
ರಾಜಾರೋಷವಾಗಿ ಸರ್ಕಾರಿ ಜಾಗವನ್ನು ಅತಿಕ್ರಮಿಸುತ್ತಿದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದು ಸರಿಯಲ್ಲ.ವಿನಯ್ ಮಾಳಗೆ, ಪರಿಸರ ಹೋರಾಟಗಾರ
ನರಸಿಂಹ ಝರಣಿ ಬಳಿಯಿರುವ ಗುಂಬಜ್‌ಗಳು ರಾಜ್ಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಸೇರಿದ್ದು ಎಎಸ್‌ಐಗೆ ಸಂಬಂಧಿಸಿದ್ದಲ್ಲ.ಅನಿರುದ್ಧ್ ದೇಸಾಯಿ, ಸಹಾಯಕ ಸಂರಕ್ಷಣಾಧಿಕಾರಿ, ಎಎಸ್‌ಐ ಬೀದರ್ ಉಪವಿಭಾಗ
ಅನಧಿಕೃತ ಲೇಔಟ್‌ಗಳ ಬಗ್ಗೆ ಮಾಹಿತಿ ಕೊಡಬೇಕೆಂದು ನಗರಸಭೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ.ಶ್ರೀಕಾಂತ ಚಿಮಕೋಡೆ, ಆಯುಕ್ತ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.