ADVERTISEMENT

ಬೀದರ್‌ನಲ್ಲೂ ಅಕ್ರಮ ಗಣಿಗಾರಿಕೆಯ ‘ದೂಳು’

ಮುರಂ ಮೇಲೆ ಮಮಕಾರ: ಸ್ಮಾರಕಕ್ಕೆ ಧಕ್ಕೆ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 2 ಜುಲೈ 2024, 19:00 IST
Last Updated 2 ಜುಲೈ 2024, 19:00 IST
ಬೀದರ್‌ ತಾಲ್ಲೂಕಿನ ಅಷ್ಟೂರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಗುಡ್ಡ ಬೋಳಾಗಿರುವುದು
ಬೀದರ್‌ ತಾಲ್ಲೂಕಿನ ಅಷ್ಟೂರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಗುಡ್ಡ ಬೋಳಾಗಿರುವುದು   

ಬೀದರ್‌: ಬೀದರ್‌ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೋಳಾಗಿ, ಹೊಟ್ಟೆ ಬಗೆಸಿಕೊಂಡು ನಿಂತಿರುವ ಗುಡ್ಡಗಳು ಅಕ್ರಮದ ಕಥೆಗಳನ್ನು ಸಾರಿ ಹೇಳುತ್ತಿವೆ.

ಬೀದರ್‌ ತಾಲ್ಲೂಕಿನ ಬಾಗ್‌–ಎ–ಶಾಹಿ, ನಾವದಗೇರಿ, ಚೊಂಡಿ, ಅಷ್ಟೂರ, ಮಾಮನಕೇರಿ, ಮಲ್ಕಾಪುರ, ಹುಮನಾಬಾದ್‌ ತಾಲ್ಲೂಕಿನ ಸಿಂಧನಕೇರಾದಲ್ಲಿ ಹಗಲು–ರಾತ್ರಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಗುಡ್ಡಗಳೆಲ್ಲ ಬೋಳಾಗುತ್ತಿವೆ. ಉಪಯುಕ್ತ ಖನಿಜಾಂಶಗಳನ್ನು ಹೊಂದಿರುವ ಮುರಂ ಅನ್ನು ಅನುಮತಿ ಇಲ್ಲದೆ, ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಬೀದರ್‌, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಯವರ ತವರು ಜಿಲ್ಲೆ.

ಬೀದರ್‌ ತಾಲ್ಲೂಕಿನ ಅಷ್ಟೂರ ಗ್ರಾಮದ ಸರ್ವೆ ನಂಬರ್‌ 186/1 ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಳ್ಳಲಾಗಿತ್ತು. ಆದರೆ, ಅಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಸುತ್ತಿದ್ದ ಕಾರಣ ಸ್ವತಃ ಜಿಲ್ಲಾಧಿಕಾರಿ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸಿದ್ದಾರೆ. ಇದಾದ ಬಳಿಕವೂ ಎಗ್ಗಿಲ್ಲದೇ ಗಣಿಗಾರಿಕೆ ನಡೆಸಲಾಗುತ್ತಿದೆ.

ADVERTISEMENT

ಗಣಿಗಾರಿಕೆ ನಡೆಸುತ್ತಿರುವವರ ಬೆನ್ನ ಹಿಂದೆ ಕೆಲ ಪ್ರಭಾವಿಗಳು ನಿಂತಿದ್ದಾರೆ. ಹೀಗಾಗಿಯೇ ಅಧಿಕಾರಿಗಳು ಅಸಹಾಯಕರಾಗಿ ಕಾನೂನು ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಅಷ್ಟೂರ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಸೇರಿದ ಚೌಖಂಡಿ ಸ್ಮಾರಕಕ್ಕೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ. ಈಗಾಗಲೇ ಗಣಿಗಾರಿಕೆಯಿಂದ ಸಮೀಪದ ಸೋಲಪುರ ಕೆರೆಗೆ ಅಪಾರ ಪ್ರಮಾಣದಲ್ಲಿ ಹರಿದು ಹೋಗುತ್ತಿದ್ದ ನೀರಿನ ಜಲಮೂಲಗಳು ನಾಶವಾಗಿವೆ. ಹೀಗೇ ಗಣಿಗಾರಿಕೆ ಮುಂದುವರಿದರೆ ಕೆರೆ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಾಗಿದೆ.

200 ಹೆಕ್ಟೇರ್‌ನಲ್ಲಿ ಗಣಿಗಾರಿಕೆ: ಒಂದು ಅಂದಾಜಿನ ಪ್ರಕಾರ, ಜಿಲ್ಲೆಯ ಬೀದರ್‌, ಹುಮನಾಬಾದ್‌ ತಾಲ್ಲೂಕುಗಳ ವಿವಿಧ ಕಡೆಗಳಲ್ಲಿ ಸುಮಾರು 200 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ.

ಗಣಿ ವಿಜ್ಞಾನಿಗಳ ಪ್ರಕಾರ, ಬೀದರ್‌ ಜಿಲ್ಲೆಯ ಮಣ್ಣಿನಲ್ಲಿ ಮೈಕಾ, ಬಾಕ್ಸೈಟ್‌, ಪೆರಸ್‌ನಂತಹ ಕಬ್ಬಿಣಾಂಶ ಯಥೇಚ್ಛವಾಗಿದೆ. ಮುರಂ ಸಂಸ್ಕರಿಸಿ ಕಚ್ಚಾ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಇದನ್ನು ಹೈದರಾಬಾದ್‌, ಮುಂಬೈ ಸೇರಿದಂತೆ ಇತರ ಕಡೆಗಳಿಗೆ ಕದ್ದು ಮುಚ್ಚಿ ಸಾಗಣೆ ಮಾಡಲಾಗುತ್ತಿದೆ. ಕೆಳದರ್ಜೆಯ ಮುರಂ ಅನ್ನು ಸ್ಥಳೀಯವಾಗಿ ಖಾಸಗಿ ಲೇಔಟ್‌ಗಳ ನಿರ್ಮಾಣ, ಖಾಸಗಿಯವರ ರಸ್ತೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

‘ಬೀದರ್‌ ಜಿಲ್ಲೆ ‘ಲ್ಯಾಟ್‌ರೈಟ್‌’ ಗುಡ್ಡಗಳಿಂದ ಕೂಡಿದೆ. ಡೆಕ್ಕನ್‌ ಪ್ರಸ್ಥಭೂಮಿಯಲ್ಲಿರುವ ಜಿಲ್ಲೆಯ ಅಂತರ್ಜಲ, ಕೆರೆ, ನದಿಗಳ ನಾಲೆಗಳಿಗೆ ನೀರು ಹರಿಯುತ್ತದೆ. ಖನಿಜಾಂಶ ಹೊಂದಿರುವ ಗುಡ್ಡಗಳು ಸಹ ‘ನ್ಯಾಚುರಲ್‌ ಹೆರಿಟೇಜ್‌’ನ ಭಾಗ. ಅಷ್ಟೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಚೌಖಂಡಿ ಸ್ಮಾರಕಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಸೋಲಪುರ ಕೆರೆಗೆ ನೀರು ಹರಿದು ಹೋಗುವುದು ಕಡಿಮೆಯಾಗಿದೆ. ಗುಡ್ಡಗಳೆಲ್ಲ ಹೋದರೆ ಭಾರಿ ಮಳೆ ಸುರಿದರೆ ದೊಡ್ಡ ಆಪತ್ತು ಎದುರಾಗುತ್ತದೆ. ಜಿಲ್ಲೆಯವರೇ ಆದ ಅರಣ್ಯ ಸಚಿವ ಖಂಡ್ರೆಯವರು ಇತ್ತ ಬಗ್ಗೆ ಗಮನಹರಿಸಿ ಕಡಿವಾಣ ಹಾಕಬೇಕು’ ಎಂದು ಪರಿಸರ ಹೋರಾಟಗಾರ ವಿನಯ್‌ ಮಾಳಗೆ ಆಗ್ರಹಿಸುತ್ತಾರೆ.

ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಗಣಿಗಾರಿಕೆ ಮಾಡುತ್ತಿರುವವರಿಂದ ಭರಿಸಿಕೊಳ್ಳಬೇಕು.
–ವಿನಯ್‌ ಮಾಳಗೆ, ಪರಿಸರ ಹೋರಾಟಗಾರ
ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರೆ ತಡೆಯಬಹುದು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
–ವಾನತಿ ಎಮ್‌.ಎಮ್‌., ಡಿಸಿಎಫ್‌
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದಂಡ ಹಾಕಿ ನಿಲ್ಲಿಸಲಾಗಿತ್ತು. ಪುನಃ ಆರಂಭಿಸಿದರೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
–ವಿಶ್ವನಾಥ, ಹಿರಿಯ ಭೂವಿಜ್ಞಾನಿ, ಗಣಿ ಇಲಾಖೆ
ಚೌಖಂಡಿ ಸ್ಮಾರಕದ ಸಮೀಪ ಗಣಿಗಾರಿಕೆ ನಡೆಯುತ್ತಿರುವ ವಿಷಯ ಗೊತ್ತಿಲ್ಲ. ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.
–ಅನಿರುದ್ಧ್‌ ದೇಸಾಯಿ, ಸಹಾಯಕ ಸಂರಕ್ಷಣಾಧಿಕಾರಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.