ADVERTISEMENT

ಅಪೂರ್ಣ ಚರಂಡಿ: ಮಳೆಗಾಲದಲ್ಲಿ ಸಂಕಟ

ಯೋಜನೆಗಳು ಜಾರಿಗೊಂಡರೂ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಮೇ 2024, 6:25 IST
Last Updated 22 ಮೇ 2024, 6:25 IST
ಬಸವಕಲ್ಯಾಣ ನಗರದ ನಾರಾಯಣಪುರ ಕ್ರಾಸ್‌ನಲ್ಲಿರುವ ನಗರಸಭೆಯ ಕಚೇರಿ ಎದುರಿನ ಚರಂಡಿ ಅಪೂರ್ಣವಾಗಿದೆ
ಬಸವಕಲ್ಯಾಣ ನಗರದ ನಾರಾಯಣಪುರ ಕ್ರಾಸ್‌ನಲ್ಲಿರುವ ನಗರಸಭೆಯ ಕಚೇರಿ ಎದುರಿನ ಚರಂಡಿ ಅಪೂರ್ಣವಾಗಿದೆ   

ಬಸವಕಲ್ಯಾಣ: ಅಪೂರ್ಣ ಮತ್ತು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಚರಂಡಿಗಳಿಂದಾಗಿ ಮಳೆಗಾಲದಲ್ಲಿ ನಗರದ ಹಲವಾರು ಓಣಿಗಳಲ್ಲಿ ನೀರು ಸಂಗ್ರಹಗೊಂಡು ಜನರು ಸಂಕಟ ಅನುಭವಿಸುವಂತಾಗಿದೆ. ಕೆಲವೆಡೆ ಪ್ರತಿ ಸಲವೂ ಮನೆಗಳು ಜಲಾವೃತ ಆಗುತ್ತಿವೆ.

ಜಿಲ್ಲೆಯಲ್ಲಿನ ಎರಡನೇ ದೊಡ್ಡ ನಗರವಾಗಿದ್ದರೂ ಸೌಲಭ್ಯಗಳ ಕೊರತೆ ಕಾಡುತ್ತಿದೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ವರ್ಷವಾದರೂ ಕೆಲ ಓಣಿಗಳಲ್ಲಿ ಇನ್ನುವರೆಗೆ ಚರಂಡಿ ನಿರ್ಮಾಣ ಮತ್ತಿತರೆ ಕೆಲಸ ನಡೆದಿಲ್ಲ. ವಿವಿಧ ಯೋಜನೆಗಳು ಜಾರಿಗೊಂಡು ಕೋಟ್ಯಂತರ ರೂಪಾಯಿ ಅನುದಾನ ಖರ್ಚಾದರೂ ಮನೆ ಬಳಕೆಯ ಮತ್ತು ಮಳೆ ನೀರು ಸಾಕಷ್ಟು ಕಡೆಗಳಲ್ಲಿ ಸಂಗ್ರಹಗೊಂಡು ದುರ್ನಾತ ಸೂಸುವಂತಾಗಿದೆ.

ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತ ಮತ್ತು ಅಲ್ಲಿಂದ ಮಹಾತ್ಮ ಗಾಂಧೀಜಿ ವೃತ್ತದ ಮೂಲಕ ಕೋಟೆಗೆ ಹೋಗುವ ಮೂರು ಕಿ.ಮೀ ರಸ್ತೆಯಲ್ಲಿ ಅಲ್ಲಲ್ಲಿ ಅನುದಾನಕ್ಕೆ ತಕ್ಕಂತೆ ಚರಂಡಿಗಳ ಅರ್ಧಮರ್ಧ ಕೆಲಸ ಮಾತ್ರ ನಡೆದಿದೆ.

ADVERTISEMENT

ಶರಣ ಹರಳಯ್ಯ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಅವರ ಹಳೆಯ ಕಚೇರಿ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಂಥಾಲಯ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಉಪ ವಿಭಾಗಾಧಿಕಾರಿಗಳ ಮನೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿವೆ. ಇವುಗಳ ಆವರಣಗೋಡೆಗೆ ತಾಗಿಕೊಂಡೇ ಇರುವ ಚರಂಡಿಯಲ್ಲಿ ಮಣ್ಣುಬಿದ್ದು ನೀರು ಸಾಗದಂತಾಗಿದೆ. ಇಲ್ಲಿನ ಗುರುಭವನ ಎದುರಿನ ಕೆಲ ಅಂಗಡಿಗಳಲ್ಲಿ ಮಳೆ ನೀರು ನುಗ್ಗುತ್ತದೆ. ಪ್ರತಿ ವರ್ಷವೂ ಇಂಥದ್ದೇ ಪರಿಸ್ಥಿತಿ ಉಂಟಾಗುತ್ತಿದ್ದರೂ ಇದುವರೆಗೆ ಈ ಕಡೆ ಯಾರೂ ಲಕ್ಷ ವಹಿಸಿಲ್ಲ.

ಬಸವಕಲ್ಯಾಣ ನಗರದ ಮುಖ್ಯ ರಸ್ತೆಯ ಪಕ್ಕದ ಬಿಇಒ ಮತ್ತು ಲೋಕೋಪಯೋಗಿ ಇಲಾಖೆ ಕಚೇರಿ ಎದುರಿನ ಚರಂಡಿಯಲ್ಲಿ ಮಣ್ಣು ಸಂಗ್ರಹಗೊಂಡಿದೆ

ನಗರಸಭೆ ಹೊಸ ಕಟ್ಟಡದ ಎದುರಿನ ಚರಂಡಿಯೇ ಅಪೂರ್ಣವಾಗಿದೆ. ನಾರಾಯಣಪುರ ಕ್ರಾಸ್‌ನಲ್ಲಿನ ಕಂದಕದಲ್ಲಿ ಯಾವಾಗಲೂ ನೀರು ಮತ್ತು ಕೆಸರು ಇರುತ್ತಿದೆ. ಪಾರ್ಧಿ ಗಲ್ಲಿ, ಕೈಕಾಡಿ ಓಣಿ ಹಾಗೂ ಇಲ್ಲಿಂದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಇಳಿಜಾರು ಪ್ರದೇಶದಲ್ಲಿ ಇದೆ. ಆದ್ದರಿಂದ ಇಡೀ ನಗರದ ನೀರು ಇಲ್ಲಿಗೆ ಹರಿದು ಬಂದು ಚರಂಡಿಗಳು ತುಂಬಿ ತುಳುಕುತ್ತವೆ. ಅನೇಕ ಮನೆಗಳು ಜಲಾವೃತ ಆಗುತ್ತವೆ. ರಸ್ತೆಯಲ್ಲಿ ಗಂಟೆಗಟ್ಟಲೇ ಮೊಳಕಾಲು ಮಟ್ಟ ನೀರಿರುವುದರಿಂದ ವಾಹನ ಸಂಚಾರಕ್ಕೆ ಪರದಾಡಬೇಕಾಗುತ್ತದೆ.

`ಅಲ್ಲಲ್ಲಿ ನೀರು ಮುಂದೆ ಸಾಗದಂತೆಯೂ ಎತ್ತರದಲ್ಲಿ ಚರಂಡಿ ನಿರ್ಮಿಸಿದ್ದು ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಎಲ್ಲಿಯೂ ನೀರು ಸಂಗ್ರಹಗೊಳ್ಳದಂತೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು' ಎಂದು ವ್ಯಾಪಾರಸ್ಥ ನೈಮೊದ್ದೀನ್ ಆಗ್ರಹಿಸಿದ್ದಾರೆ.

`ನಗರಸಭೆ ಸಿಬ್ಬಂದಿಯವರು ಚರಂಡಿ ಸ್ವಚ್ಛಗೊಳಿಸುವಾಗ ಬದಿಗೆ ಇಡುವ ಹಾಸುಗಲ್ಲುಗಳನ್ನು ಮತ್ತೆ ಮೊದಲಿನಂತೆ ಇಡುವುದೇ ಇಲ್ಲ. ಹಾಗಾಗದಂತೆ ಸಂಬಂಧಿತರು ಕ್ರಮ ಕೈಗೊಳ್ಳಬೇಕು' ಎಂದು ಹಣಮಂತ ಪೂಜಾರಿ ಆಗ್ರಹಿಸಿದ್ದಾರೆ.

‘ಈಗಾಗಲೇ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಕೈಗೊಂಡಿದ್ದೇವೆ. ಇನ್ನುಳಿದ ಓಣಿಗಳಲ್ಲಿಯೂ ಮಳೆ ನೀರಿನಿಂದ ತೊಂದರೆ ಆಗದಂತೆ ಕ್ರಮ ಜರುಗಿಸಲಾಗುವುದು' ಎಂದು ನಗರಸಭೆ ಆಯುಕ್ತ ರಾಜೀವ ಬಣಕಾರ ಭರವಸೆ ನೀಡಿದ್ದಾರೆ.

ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲಿನ ರಾಜಕಮಲ್ ಹೋಟಲ್ ಹತ್ತಿರದ ಎಪಿಎಂಸಿಗೆ ಹೋಗುವ ರಸ್ತೆಯಲ್ಲಿನ ಚರಂಡಿಯಲ್ಲಿ ಮಣ್ಣು ತುಂಬಿರುವುದು
ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದಲ್ಲಿ ಚರಂಡಿ ನೀರು ಸರಾಗವಾಗಿ ಸಾಗುವಂತೆ ಕಾಮಗಾರಿ ಕೈಗೊಳ್ಳಲಾಗಿದೆ.
–ರಾಜೀವ ಬಣಕಾರ್ ಪೌರಾಯುಕ್ತ
ಮಳೆಗಾಲದಲ್ಲಿ ಭೀಮನಗರ ಓಣಿಯ ನೀರು ಡೋಮ ಗಣೇಶ ರಸ್ತೆಗೆ ಸಾಗಿಬಂದು ಸಂಗ್ರಹಗೊಳ್ಳದಂತೆ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
–ಸುಶೀಲ್ ಆವಸ್ಥಿ ವಕೀಲ
ಬಿಇಒ ಕಚೇರಿ ಎದುರಿನ ಗುರುಭವನದ ಸ್ಥಳದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದ್ದು ಇಲ್ಲಿನ ರಸ್ತೆಯಲ್ಲಿನ ಮುಚ್ಚಿರುವ ಸೇತುವೆ ಪುನಃ ಸರಿಪಡಿಸಲಿ.
–ಶಿವರಾಜ ಬಾಲಿಕಿಲೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.