ADVERTISEMENT

ಬೀದರ್‌ನಲ್ಲಿ ಎಫ್‌.ಎಂ. ಕೇಂದ್ರಕ್ಕೆ ಮಂಜೂರಾತಿ–ಸಚಿವ ಖೂಬಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 8:59 IST
Last Updated 13 ಜನವರಿ 2024, 8:59 IST
<div class="paragraphs"><p>ಸಚಿವ ಖೂಬಾ</p></div>

ಸಚಿವ ಖೂಬಾ

   

ಬೀದರ್‌: ‘ಜಿಲ್ಲೆಯಲ್ಲಿ ಎಫ್‌.ಎಂ. ಕೇಂದ್ರ ಆರಂಭಿಸಲು ಮಂಜೂರಾತಿ ದೊರೆತಿದ್ದು, ಇನ್ನೆರಡು ವಾರದೊಳಗೆ ಚಾಲನೆ ಸಿಗಲಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ನನ್ನ ಸತತ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಕ್ರಾಂತಿ ಹಬ್ಬದ ಉಡುಗೊರೆ ರೂಪದಲ್ಲಿ ಎಫ್‌.ಎಂ. ಕೇಂದ್ರ ಮಂಜೂರು ಮಾಡಿದ್ದಾರೆ. ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿರುವ ಮೋದಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್‌ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಬೀದರ್‌ ದೂರದರ್ಶನ ಕೇಂದ್ರದಲ್ಲಿ 100 ವ್ಯಾಟ್‌ ಸಾಮರ್ಥ್ಯದ ಎಫ್‌.ಎಂ. ಕೇಂದ್ರಕ್ಕೆ ಪ್ರಧಾನಿ ಮೋದಿ ವರ್ಚುವಲ್‌ ಮೂಲಕ ಉದ್ಘಾಟಿಸುವರು. ಕೇಂದ್ರವು ಆರಂಭದಲ್ಲಿ ಮರುಪ್ರಸಾರ ಕೇಂದ್ರವಾಗಿ ಕೆಲಸ ನಿರ್ವಹಿಸಲಿದೆ. ಸದ್ಯ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳು ಬೀದರ್‌ನಿಂದ ಮರು ಪ್ರಸಾರವಾಗಲಿವೆ. ಕೆಲ ದಿನಗಳ ನಂತರ ಸ್ವತಂತ್ರವಾಗಿ ಕಾರ್ಯಾರಂಭ ಮಾಡಲಿದೆ. ಅದಕ್ಕೆ ಬೇಕಾದ ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. ರಿಲಯನ್ಸ್‌ ಮತ್ತು ಇನ್ನೊಂದು ಖಾಸಗಿ ಸಂಸ್ಥೆಯವರು ಚಾನೆಲ್‌ ಪ್ರಾರಂಭಿಸಲು ಆಸಕ್ತಿ ತೋರಿದ್ದಾರೆ. ಸರ್ಕಾರದ ಎಫ್‌.ಎಂ. ಕೇಂದ್ರ ಪ್ರಾರಂಭವಾದ ನಂತರ ಖಾಸಗಿಯವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಎಫ್‌.ಎಂ. ಕೇಂದ್ರ ಆರಂಭ ಆಗುವುದರಿಂದ ಸ್ಥಳೀಯ ಕಲಾವಿದರು, ಉದ್ಯಮಕ್ಕೆ ಅನುಕೂಲವಾಗಿದೆ. ಕಲೆ, ಸಂಸ್ಕೃತಿ, ಭಾಷೆಗೂ ಪ್ರಾಶಸ್ತ್ಯ ಸಿಗಲಿದೆ. ಕಳೆದ ಹತ್ತು ವರ್ಷಗಳಲ್ಲಿ ಸಂಸದನಾಗಿ ಜಿಲ್ಲೆಗೆ ಅನೇಕ ಯೋಜನೆಗಳನ್ನು ತಂದಿದ್ದು, ಅದಕ್ಕೆ ಹೊಸ ಸೇರ್ಪಡೆ ಎಫ್‌.ಎಂ. ಕೇಂದ್ರ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.