ADVERTISEMENT

ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡದ ಜೆಸ್ಕಾಂ: ಸಾರ್ವಜನಿಕರಿಗೆ ತಪ್ಪದ ಪರದಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜುಲೈ 2024, 5:08 IST
Last Updated 1 ಜುಲೈ 2024, 5:08 IST
<div class="paragraphs"><p>ವಿದ್ಯುತ್‌ ( ಸಾಂದರ್ಭಿಕ ಚಿತ್ರ)&nbsp;</p></div>

ವಿದ್ಯುತ್‌ ( ಸಾಂದರ್ಭಿಕ ಚಿತ್ರ) 

   

ಬೀದರ್‌: ತುರ್ತು ಕೆಲಸವೆಂದರೆ ಅದು ತುರ್ತಾಗಿ ನಡೆಯುವಂತಹದ್ದು. ಅದು ಅಪರೂಪಕ್ಕೊಮ್ಮೆ ಎಂಬಂತೆ ಆಗಾಗ ಕೈಗೆತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಬೀದರ್‌ ಜಿಲ್ಲೆಯಲ್ಲಿ ಜೆಸ್ಕಾಂ, ‘ತುರ್ತು ಕೆಲಸ’ ಎಂಬ ಪದದ ಅರ್ಥ ಬದಲಿಸಿರುವಂತಿದೆ!

ಹೌದು, ಅದರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ನೋಡಿದರೆ ಯಾರಿಗಾದರೂ ಅದು ಅನುಭವಕ್ಕೆ ಬರುತ್ತದೆ.

ADVERTISEMENT

ತುರ್ತು ಕೆಲಸ, ಕಾಮಗಾರಿಯ ಹೆಸರಲ್ಲಿ ವಾರದಲ್ಲಿ ನಾಲ್ಕೈದು ದಿನ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಜೆಸ್ಕಾಂ ಕಾಲಕಾಲ‌ಕ್ಕೆ ಈ ಕುರಿತು ಮುಂಚಿತವಾಗಿಯೇ ಸಾರ್ವಜನಿಕರಿಗೆ ಪತ್ರಿಕೆಗಳ ಮೂಲಕ ವಿಷಯ ತಿಳಿಸುತ್ತಿದೆ. ನಿರ್ದಿಷ್ಟ ದಿನಾಂಕದಂದು, ಯಾವ ಸಮಯದಿಂದ ಯಾವ ಸಮಯದ ವರೆಗೆ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎನ್ನುವುದನ್ನು ತಿಳಿಸಿ, ಗ್ರಾಹಕರಿಗೆ ಸಹಕರಿಸಲು ಮನವಿ ಮಾಡುತ್ತಿದೆ. ಇದರ ಬಗ್ಗೆ ಯಾರಿಗೂ ಅಭ್ಯಂತರವಿಲ್ಲ. ಆದರೆ, ತುರ್ತು ಕೆಲಸವೆಂದು ವಾರದಲ್ಲಿ ನಾಲ್ಕೈದು ದಿನ ವಿದ್ಯುತ್‌ ಕಡಿತಗೊಳಿಸಿದರೆ ಹೇಗೆ? ಇದು ವರ್ಷದುದ್ದಕ್ಕೂ ನಡೆಯುತ್ತಿದ್ದರೆ ಹೇಗೆ? ಇದು ಸಾರ್ವಜನಿಕರ ಪ್ರಶ್ನೆಯಾಗಿದೆ.

ವಿದ್ಯುತ್‌ ತಂತಿಗಳು ಕಡಿದು ಬಿದ್ದಾಗ, ತಂತಿಗಳಲ್ಲಿ ಸ್ಪಾರ್ಕ್‌ ಕಾಣಿಸಿಕೊಂಡಾಗ, ಟ್ರಾನ್ಸಫಾರ್ಮರ್‌ ಸುಟ್ಟು ಹೋದಾಗ, ವಿದ್ಯುತ್‌ ಕಂಬಗಳು ಬಿದ್ದಾಗ, ವಿದ್ಯುತ್‌ ತಂತಿಗಳ ಬದಲಾವಣೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಅದರಲ್ಲೂ ಈ ರೀತಿಯ ಘಟನೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಆದರೆ, ಬೀದರ್‌ ಜಿಲ್ಲೆಯಲ್ಲಿ ಇದು ತದ್ವಿರುದ್ಧ. ವರ್ಷದುದ್ದಕ್ಕೂ ನಿರ್ವಹಣೆ, ತುರ್ತು ಕೆಲಸದ ಕಾರಣಕ್ಕಾಗಿ ಪದೇ ಪದೇ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಗುತ್ತದೆ.

ಇದು ತುರ್ತು ಕೆಲಸ, ನಿರ್ವಹಣೆಯ ನೆಪ. ಸಾಮಾನ್ಯ ದಿನಗಳೂ ಇದಕ್ಕೆ ಹೊರತಲ್ಲ. ಸ್ವಲ್ಪ ಮಳೆ, ಗಾಳಿ ಬಂದಾಗ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು, ಸಾರ್ವಜನಿಕರಿಗೆ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಗುತ್ತದೆ. ಆದರೆ, ಇದ್ಯಾವುದೂ ಇರದ ಸಂದರ್ಭದಲ್ಲೂ ವಿದ್ಯುತ್‌ ಪೂರೈಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೋವಿಡ್‌ ನಂತರ ಈಗಲೂ ಬಹುತೇಕರು ಮನೆಗಳಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಬಹುತೇಕರು ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳನ್ನು ಉಪಯೋಗಿಸುತ್ತಾರೆ. ಯುಪಿಐ ಹಣ ಪಾವತಿಸುವುದು ಸೇರಿದಂತೆ ನಿತ್ಯದ ಪ್ರತಿಯೊಂದಕ್ಕೂ ಮೊಬೈಲ್‌ ಉಪಯೋಗಿಸಲಾಗುತ್ತಿದೆ. ಆಹಾರ ತಯಾರಿಕೆ, ಸ್ನಾನಕ್ಕೆ ನೀರು ಬಿಸಿ ಮಾಡಿಕೊಳ್ಳಲು ಸೇರಿದಂತೆ ಹತ್ತು ಹಲವು ಕೆಲಸಗಳು ವಿದ್ಯುತ್‌ ಮೇಲೆ ಅವಲಂಬಿಸಿವೆ. ಆದರೆ, ಸಮರ್ಪಕವಾಗಿ ವಿದ್ಯುತ್‌ ಪೂರೈಸದ ಕಾರಣ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇದೆಲ್ಲ ಜೆಸ್ಕಾಂನವರಿಗೆ ಗೊತ್ತಿಲ್ಲ ಅಂತಲ್ಲ. ಎಲ್ಲವೂ ತಿಳಿದಿದೆ. ಹೀಗಿದ್ದರೂ ಸರಿಪಡಿಸುವ ಗೋಜಿಗೆ ಏಕೆ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪದೇ ಪದೆ ವಿದ್ಯುತ್ ತೆಗೆಯುತ್ತಿರುವುದರಿಂದ ಹೋಟೆಲ್‌ ಸೈಬರ್‌ ಸೆಂಟರ್‌ ಝರಾಕ್ಸ್ ಕಂಪ್ಯೂಟರ್ ಟೈಪಿಂಗ್ ಕೇಂದ್ರದವರು ಬೇಸತ್ತು ಹೋಗಿದ್ದಾರೆ. 
ಅಶೋಕ ದಿಡಗೆ ವ್ಯಾಪಾರಿ
ಕಬ್ಬು ಭತ್ತ ತರಕಾರಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಅಭಾವ ಉಂಟಾಗುತ್ತಿದೆ. ಕೂಡಲೇ ವಿದ್ಯುತ್‌ ಸಮಸ್ಯೆಯನ್ನು ಬಗೆಹರಿಸಬೇಕು.
ಪ್ರಕಾಶ್ ಹಳ್ಳಿಖೇಡ್‌ (ಕೆ)
ನೀರು ವಿದ್ಯುತ್‌ ಸಮಸ್ಯೆ ಸಾಮಾನ್ಯವಾಗಿದೆ. ಅಸಮರ್ಪಕ ವಿದ್ಯುತ್‌ ಪೂರೈಕೆಯಿಂದ ರೈತರು ಪರದಾಡುವಂತಾಗಿದೆ.
ಚಂದ್ರಕಾಂತ ಬೋರಂಪಳ್ಳಿ ಹುಮನಾಬಾದ್‌ ನಿವಾಸಿ
‘ಗಿಡ ಮರಗಳು ಹೆಚ್ಚಿವೆ’
ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್‌ ಜಿಲ್ಲೆಯಲ್ಲಿ ಗಿಡ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿದ್ಯುತ್‌ ತಂತಿಗಳಿಗೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸಮಸ್ಯೆಯಾಗುತ್ತದೆ. ಅದನ್ನು ಸರಿಪಡಿಸಲು ಅನಿವಾರ್ಯವಾಗಿ ವಿದ್ಯುತ್‌ ಕಡಿತಗೊಳಿಸಬೇಕಾಗುತ್ತದೆ ಎಂದು ಜೆಸ್ಕಾಂ ಬೀದರ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಗೃಹಜ್ಯೋತಿ’ ಜಾರಿಗೂ ಮೊದಲಿನಿಂದ ಸಮಸ್ಯೆ
ಬೀದರ್‌ ಜಿಲ್ಲೆಯಲ್ಲಿ ಅಸಮರ್ಪಕ ವಿದ್ಯುತ್‌ ಪೂರೈಕೆಯ ಸಮಸ್ಯೆ ಇಂದು ನಿನ್ನೆಯದಲ್ಲ. ವರ್ಷಕ್ಕೂ ಹೆಚ್ಚು ಸಮಯದಿಂದ ಇದೆ. ಹೋದ ವರ್ಷ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಜ್ಯೋತಿ’ ಯೋಜನೆ ಜಾರಿಗೊಳಿಸುವುದಕ್ಕೂ ಮೊದಲಿನಿಂದ ಅಸಮರ್ಪಕ ವಿದ್ಯುತ್‌ ಪೂರೈಕೆಗೆ ಜನ ಬೇಸತ್ತಿದ್ದಾರೆ. ಯೋಜನೆ ಜಾರಿಗೆ ಬಂದ ನಂತರವೂ ಅದು ಬದಲಾಗಿಲ್ಲ.
ಬೃಹತ್‌ ಕೈಗಾರಿಕೆಗಳಿರದ ಜಿಲ್ಲೆ
ಬೀದರ್‌ ಜಿಲ್ಲೆಯ ಹುಮನಾಬಾದ್‌ ಬೀದರ್‌ನ ಕೊಳಾರ ಕೈಗಾರಿಕೆ ಪ್ರದೇಶ ಹೊರತುಪಡಿಸಿದರೆ ಜಿಲ್ಲೆಯ ಇತರೆ ಆರು ತಾಲ್ಲೂಕುಗಳಲ್ಲಿ ಕೈಗಾರಿಕೆಗಳೇ ಇಲ್ಲ. ಬೀದರ್‌ ಹುಮನಾಬಾದ್‌ನಲ್ಲೂ ರಾಸಾಯನಿಕ ಫಾರ್ಮಸುಟಿಕಲ್ಸ್‌ ಟೈರ್‌ ಪೈರೋಲಿಸಿಸ್‌ನಂತಹ ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. ಬೃಹತ್‌ ಕೈಗಾರಿಕೆಗಳಿಲ್ಲ. ಹೀಗಿದ್ದರೂ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸಲು ಜೆಸ್ಕಾಂಗೆ ಸಾಧ್ಯವಾಗುತ್ತಿಲ್ಲ. ಬೃಹತ್‌ ಕೈಗಾರಿಕೆಗಳಿಗೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಲು ಕೆಲವೊಮ್ಮೆ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುವುದಿಲ್ಲ. ಆದರೆ ಜಿಲ್ಲೆಯಲ್ಲಿ ಆ ರೀತಿಯ ಸಮಸ್ಯೆಯೇ ಇಲ್ಲ. ಹೀಗಿದ್ದರೂ ಗ್ರಾಹಕರಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.