ADVERTISEMENT

ಹುಮನಾಬಾದ್ | ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಅಂಬೇಡ್ಕರ್ ಮೂರ್ತಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:45 IST
Last Updated 28 ಜುಲೈ 2024, 15:45 IST
ಹುಮನಾಬಾದ್ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜರಗಿತು.
ಹುಮನಾಬಾದ್ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜರಗಿತು.   

ಹುಮನಾಬಾದ್ : ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ಭಾನುವಾರ ನಡೆದ ಡಾ.‌ಬಿ.‌ಆರ್. ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಬೀಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜರುಗಿತು.

ಮಧ್ಯಾಹ್ನ 2 ಗಂಟೆಗೆ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಉದ್ಘಾಟಿಸಿದರು. ಸಂಜೆ ಮಾಜಿ ಸಚಿವ ರಾಜಶೇಖರ ಪಾಟೀಲ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಜೀವನ ಪೂರ್ತಿ ಹಿಂದುಳಿದ ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬರೂ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಶಿಕ್ಷಣ ಪಡೆದರೆ ಮಾತ್ರ ನಾವು ಸಮಾಜದಲ್ಲಿ ಗೌರವದಿಂದ ಬದುಕಿ ಇತರರಿಗೆ ಮಾದರಿಯಾಗಿ ಬದುಕಬಹುದು ಎಂದರು.

ADVERTISEMENT

ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಭಾರತೀಯರಾದ ನಾವೆಲ್ಲರೂ ಸಂವಿಧಾನವನ್ನು ಹೆಮ್ಮೆಯಿಂದ ಗೌರವಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಯೊಂದು ಸಂದೇಶವೂ ಚಾಚು ತಪ್ಪದೆ ಪಾಲಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಈ ದೇಶದಲ್ಲಿನ ಎಲ್ಲ ವರ್ಗಕ್ಕೆ ಸಮಾನವಾದ ನ್ಯಾಯವನ್ನು ಸಂವಿಧಾನ ಮೂಲಕ ಅಂಬೇಡ್ಕರ್ ನೀಡಿದ್ದಾರೆ. ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರು ಇಡೀ ಭಾರತದ ಎಲ್ಲ ವರ್ಗಗಳ ಜನರ ಅಂಬೇಡ್ಕರ್ ರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ರಾಂಪೂರೆ , ಬಸವರಾಜ ಆರ್ಯ, ಗೌತಮ್ ಸಾಗರ್, ಸತೀಶ್ ರಾಂಪೂರೆ, ಸುಭಾಷ್ ಗಂಗಾ, ಕಂಟೆಪ್ಪ ಖ್ಯಾದಿ, ಮಹೇಶ್ ಖ್ಯಾದಿ, ಕಿರಣ ಪಾಟೀಲ , ತಾಹೇರ್ ಅಲಿ, ಸೈಯದ್ ಅಲ್ತಾಫ್ ಅಲಿ, ಲಕ್ಷ್ಮೀ ಪುತ್ರ ಮಾಳಿಗೆ, ಪ್ರಭಾಕರ್ ನಾಗರಹಳೆ , ವಿಠಲರಾವ್ ಕಲ್ಯಾಣಿ, ಗಿರೀಶ್ ತುಂಬಾ, ನಾಗಭೂಷಣ ಸಂಗಮ್ ಸೇರಿದಂತೆ ಇತರರು ಇದ್ದರು.

ಬಾಕ್ಸ್ ಸುದ್ದಿ: ಈ ಹಿಂದೆ ನನಗೆ ನಂದಗಾಂವ ಗ್ರಾಮದಲ್ಲಿನ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಆ ಸಂದರ್ಭದಲ್ಲಿ ನಾನು ಯಾವುದೇ ಅಧಿಕಾರದಲ್ಲಿ ಇರದ ಕಾರಣ ಕಾರ್ಯಕ್ರಮದಲ್ಲಿ ನನ್ನ ಹೆಸರು ಸಹ ಕೆಲವರು ಕರೆದಿರಲಿಲ್ಲ. ಆದರೆ ಇಂದು ಇದೇ ಗ್ರಾಮದಲ್ಲಿನ ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ನಾನು ಶಾಸಕನಾಗಿ ಆಯ್ಕೆಯಾಗಿ ಮೂರ್ತಿ ಉದ್ಗಾಟಿಸಿದ್ದೇನೆ. ಅಂದು ನನ್ನ ಹೆಸರು ಕರೆಯದೆ ಇದ್ದವರು ಈ ಕಾರ್ಯಕ್ರಮಕ್ಕೂ ಬಾರದಂತಾಗಿದೆ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರು ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.