ಹುಲಸೂರ: ಸಮೀಪದ ಹಲಸಿ ತುಗಾಂವ ಗ್ರಾಮದ ರೈತ ಭಗವಾನ ರಾಮತೀರ್ಥ ಅವರು ಶ್ರೀಗಂಧ, ತಾಳೆಎಣ್ಣೆ ಮರ ಸೇರಿದಂತೆ ಹಲವು ಉಪ ಬೆಳೆಗಳನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
ಅವರು ತಮ್ಮ ನಾಲ್ಕು ಎಕರೆಯಲ್ಲಿ ಒಂದು ಸಾವಿರ ಬಿಳಿ ಚಂದನ, ಸಾವಿರ ಹೆಬ್ಬೇವು, 40 ಚಿಕ್ಕು, 15 ತೆಂಗಿನ ಮರ, 30 ಮಾವು, 170 ತಾಳೆ ಎಣ್ಣೆ ಮರ ಬೆಳೆದಿದ್ದಾರೆ. ನಾಲ್ಕು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ 15 ವರ್ಷದಲ್ಲಿ ಕಟಾವಿಗೆ ಬರುವ ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 10x10 ಅಡಿ ಅಂತರ ಬರುವಂತೆ ಬಿಳಿ ಶ್ರೀಗಂಧದ ಸಸಿ ನೆಟ್ಟಿದ್ದಾರೆ.
ಗಾಳಿಯಿಂದ ರಕ್ಷಣೆ ಮಾಡಿಕೊಳ್ಳಲು ಹೆಬ್ಬೇವು ಸಸಿ ನೆಟ್ಟಿದ್ದಾರೆ. ಸಸಿ ನೆಡುವಾಗ 1.5 ಅಡಿ ಆಳ ಮತ್ತು ಅಗಲ ಬರುವಂತೆ ಚೌಕಾಕಾರದ ಗುಂಡಿ ನಿರ್ಮಿಸಿ ಸಗಣಿ ಗೊಬ್ಬರ ಹಾಗೂ ಕಾಡಿನಿಂದ ತಂದ ಕಪ್ಪು ಗೋಡು ಮಣ್ಣು ಹಾಕಿದ್ದರು.
2017 ರ ಜೂನ್ ಮೊದಲ ವಾರದಲ್ಲಿ ಗಂಧದ ಗಿಡಗಳ ನಡುವೆ ಅಂತರ ಬೆಳೆಯಾಗಿ ಪಾಮ ಆಯಿಲ್ ಸಸಿ ನಾಟಿ ಮಾಡಿದರು. ಗಂಧದ ಗಿಡಗಳ ನಡುವಿನ ಅಂತರದಲ್ಲಿ 30 ಅಡಿ ಉದ್ದ 3 ಅಡಿ ಅಗಲ ಬರುವಂತೆ ಪಟ್ಟೆಸಾಲು ಮಾಡಿಸಿದರು. ಶ್ರೀಗಂಧದ ಮರದ ಮಧ್ಯ ಅಂತರದಲ್ಲಿ ಮಾವು ಸಸಿ, ತೆಂಗಿನ ಸಸಿ ನೆಡುವ ಮೂಲಕ ಅವುಗಳಿಂದ ಲಾಭ ಪಡೆಯಬಹುದು ಎನ್ನುತ್ತಾರೆ ಅವರು.
‘ಮರಗಳು ಈಗಾಗಲೇ ಎತ್ತರಕ್ಕೆ ಬೆಳೆದು ನಿಂತಿವೆ. ಈ ಮರಗಳ ಮಧ್ಯೆ ಶುಂಠಿ ಬೆಳೆದು ಈ ವರ್ಷ 2 ಲಕ್ಷ ಆದಾಯ ಬಂದಿದೆ. ಮುಂಗಾರು ಹಂಗಾಮಿನಲ್ಲಿ 15 ಕ್ವಿಂಟಲ್ ಸೋಯಾ ಬೆಳೆದಿದ್ದೇನೆ. ನೆಡುತೋಪು ಬೆಳೆಯಲು ಈವರೆಗೆ ₹4 ಲಕ್ಷ ವೆಚ್ಚ ಮಾಡಲಾಗಿದೆ. ₹9 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎಂದು ರೈತ ಭಗವಾನ ರಾಮತೀರ್ಥ ಹೇಳುತ್ತಾರೆ.
ಮರಗಳ ಪೋಷಣೆಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಸಿಂಪಡಣೆ ಮಾಡದೇ ಬೇವಿನ ಹಿಂಡಿ ಜೀವಾಮೃತ ಬಳಕೆ ಮಾಡಿರುವುದು ವಿಶೇಷ. ಈ ರೀತಿ ನೂತನ ಮಾದರಿಯ ಕೃಷಿಯತ್ತ ಒಲವು ತೋರಿದ ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಂಬಂಧಿಸಿದ ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆ ಅಧಿಕಾರಿಗಳು ಸಹಾಯ, ಮಾರ್ಗದರ್ಶನ ನೀಡುತ್ತಿದ್ದಾರೆ ಎನ್ನುತ್ತಾರೆ ಅವರು.
ಶ್ರೀಗಂಧ ನೆಡುತೋಪು ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಶ್ರೀಗಂಧದ ಮರದ ಜೊತೆಗೆ ಹೆಬ್ಬೇವು ಸಸಿ ನೆಡುವ ಬಗ್ಗೆ ಸಲಹೆ ನೀಡಿದ್ದೇವೆ.ಪ್ರವೀಣ ಕುಮಾರ ಮೋರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಭಾಲ್ಕಿ
ಜಮೀನಿನಲ್ಲಿ 170 ತಾಳೆ ಎಣ್ಣೆ ಮರಗಳು ನೆಟ್ಟಿದ್ದಾರೆ. ತೋಟದಲ್ಲಿ ಒಳ್ಳೆಯ ನಿರ್ವಹಣೆ ವಹಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಪದ್ಧತಿಯ ಪ್ರಯೋಜನೆ ಪಡೆದಿದ್ದಾರೆ. ತಿಂಗಳಿಗೊಮ್ಮೆ ಭೇಟಿ ನೀಡಿ ಸೂಕ್ತ ಸಲಹೆ ನೀಡಿದ್ದೇವೆ.ರವೀಂದ್ರ ಜಟಗೊಂಡ ಸಹಾಯಕ ತೋಟಗಾರಿಕೆ ಅಧಿಕಾರಿ ಸಾಯಗಾಂವ ಹೋಬಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.