ಭಾಲ್ಕಿ: ಪಟ್ಟಣದ ಹೊರ ವಲಯದ ಬೀದರ್-ಭಾಲ್ಕಿ ಮುಖ್ಯರಸ್ತೆ ಪಕ್ಕದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದೆ.
ರೈತರ, ಕಾರ್ಮಿಕರ ಪ್ರಮುಖ ಕೇಂದ್ರವಾದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿಶಾಲವಾದ ಸಿಸಿ ರಸ್ತೆ, ಅಗಲವಾದ ಬೃಹತ್ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ,ಅತ್ಯಾವಶ್ಯಕವಾಗಿ ಬೇಕಾಗಿರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಭವನ, ಕೃಷಿ ಭವನ ಇಲ್ಲ. ಜನರ, ಕೂಲಿ ಕಾರ್ಮಿಕರ, ಅನ್ನದಾತರ ನೀರಿನ ದಾಹ ತೀರಿಸಲು ನಿರ್ಮಿಸಿರುವ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳು ಸುಮಾರು ತಿಂಗಳುಗಳಿಂದ ಪಾಳು ಬಿದ್ದಿವೆ.
ಶೌಚಾಲಯ ಇಲ್ಲದೇ ಇರುವುದರಿಂದ ಮಲಮೂತ್ರ ವಿಸರ್ಜನೆಗೆ ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಸಂಕಷ್ಟ ಎದುರಿಸಬೇಕಾಗಿದೆ. ಮಹಿಳಾ ಕಾರ್ಮಿಕರು ಪಡುವ ಪಾಡಂತೂ ಹೇಳತೀರದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕೂಲಿ ಕಾರ್ಮಿಕರು, ರೈತರು ಅಳಲು ತೋಡಿಕೊಂಡರು.
ಮಾರುಕಟ್ಟೆಯ ರಸ್ತೆ ಪಕ್ಕ ನಿರ್ಮಿಸಿರುವ ಚರಂಡಿಗಳಲ್ಲಿ ಹೂಳು ತುಂಬಿದ್ದರೂ ಸ್ವಚ್ಛಗೊಳಿಸಿಲ್ಲ. ಹಾಗಾಗಿ, ಮಳೆ ಸುರಿದಾಗ ಚರಂಡಿ ನೀರು ಕೆಲ ಅಂಗಡಿಗಳ ಸುತ್ತಮುತ್ತ, ರಸ್ತೆ ಅಕ್ಕಪಕ್ಕ ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ದುರ್ವಾಸನೆಯು ಸೂಸುತ್ತಿದೆ ಎಂದು ಅಂಗಡಿಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.
ದನಗಳ ಸಂತೆ ನಡೆಯುವಾಗ ಜಾನುವಾರುಗಳಿಗೆ ನೀರು ಕುಡಿಯಲು ನಿರ್ಮಿಸಿರುವ ತೊಟ್ಟಿಗಳು ನೀರಿಲ್ಲದೆ ಸೊರಗಿವೆ. ಸಂಬಂಧಪಟ್ಟವರು ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ರೈತರು, ಕಾರ್ಮಿಕರಿಗೆ ದೊರೆಯಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ರೈತರು ಆಗ್ರಹಿಸುತ್ತಾರೆ.
ಮೂಲ ಸೌಕರ್ಯ ಕೊರತೆಯಿಂದ ರೈತರಿಗೆ ತುಂಬಾ ಅನಾನುಕೂಲ ಆಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಮೂಲ ಸೌಕರ್ಯ ಕಲ್ಪಿಸಲು ಮುಂದಾಗಬೇಕು.ಸಿದ್ರಾಮಪ್ಪ ಆಣದೂರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಕೊರತೆಯಿಂದ ರೈತರಿಗೆ ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ.ಶಿವಾನಂದ ಎಸ್. ಕುಂಬಾರ ಪ್ರಭಾರ ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.